ಹೊಸಪೇಟೆ: ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆಯಿಂದ ಅಪಘಾತಗಳು ಕಡಿಮೆಯಾಗಿ ಅಮೂಲ್ಯ ಜೀವಗಳು ಉಳಿಯಲಿವೆ ಎಂದು ಆರ್‌ಟಿಒ ನೂರ್ ಮಹಮ್ಮದ್ ಬಾಷಾ ಹೇಳಿದರು. ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2019 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸುರಕ್ಷತಾ ಸಾಧನಗಳಾದ ಹೆಲ್ಮೆಟ್, ಸೀಟ್ ಬೆಲ್ಟ್‌ಗಳನ್ನು ಧರಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಇದರಿಂದ ನಮ್ಮ ಜೀವವನ್ನು ನಾವೇ ಕಾಪಾಡಿಕೊಂಡಂತಾಗುತ್ತದೆ. ರಸ್ತೆಗಳಲ್ಲಿ ಅಳವಡಿಸಿದ ಸೂಚನಾ ಫಲಕಗಳನ್ನು ಗಮನಿಸಿ ವಾಹನ ಓಡಿಸಬೇಕು.
ರಸ್ತೆಗಳಲ್ಲಿ ವಾಹನ ಚಲಾಯಿಸುವ ಪ್ರತಿಯೊಬ್ಬರಿಗೂ ಸುರಕ್ಷತಾ ಕ್ರಮಗಳು, ನಿಯಮಗಳ ಪಾಲನೆ ಯಿಂದ ಅಪಘಾತ ತಡೆಯಲು ಸಾಧ್ಯವಿದೆ ಎಂದರು.
ಟ್ರಾಫಿಕ್ ಸಿಪಿಐ ಅಯ್ಯನಗೌಡ ವಿ.ಪಾಟೀಲ್ ಮಾತನಾಡಿ, ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರಿನಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ ಕಿಕೊಳ್ಳಬೇಕು. ಅಲ್ಲದೆ, ವಾಹನವನ್ನು ನಿಧಾನವಾಗಿ ಚಲಾಯಿಸುವ ಮೂಲಕ ಜೀವ ರಕ್ಷಣೆಗೆ ಒತ್ತು ನೀಡಬೇಕು. ಜಿಲ್ಲೆಯಲ್ಲಿ ಪ್ರತಿವರ್ಷ 200ಕ್ಕೂ ಅಧಿಕ ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಪರಿಸರವಾದಿ, ನಿವೃತ್ತ ಮುಖ್ಯಶಿಕ್ಷಕ ಪಿ.ಪ್ರಭಾಕರ್, ಕ್ಷೇತ್ರ ಸಮನ್ವಯಾಧಿಕಾರಿ ಗುರುರಾಜ್ ಮಾತನಾಡಿದರು. ಪ್ರಾದೇಶಿಕ ಸಾರಿಗೆ ಕಚೇರಿಯ ಎಫ್ಡಿಎ ಶ್ರೀಧರ್ ನಿರ್ಮಿಸಿರುವ ರಸ್ತೆ ಸುರಕ್ಷತಾ ಕ್ರಮಗಳ ಸಾಕ್ಷ್ಯಾ ಚಿತ್ರವನ್ನು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು. ಕಚೇರಿಯ ಅಧೀಕ್ಷಕ ಅಡವೀಶ್ವರ ಗೌಡ, ಮೋಟಾರ್ ವಾಹನ ನಿರೀಕ್ಷಕರು ಇದ್ದರು.
ಹೆಲ್ಮೆಟ್ ಜನಜಾಗೃತಿಗೆ ಡಿವೈಎಸ್‌ಪಿ ಚಾಲನೆ
ಬಳ್ಳಾರಿ: ನಗರದ ತಾಲೂಕು ಕಚೇರಿ ಆವರಣದಲ್ಲಿರುವ ಗ್ರಾಮೀಣ ಪೊಲೀಸ್ ಠಾಣೆಯ ಆವರಣದಲ್ಲಿ ದ್ವಿಚಕ್ರ ವಾಹನದ ಹೆಲ್ಮೆಟ್ ಜಾಗೃತಿಗೆ ಬಳ್ಳಾರಿ ಗ್ರಾಮೀಣ ಠಾಣೆಯ ಡಿವೈಎಸ್‌ಪಿ ಅರುಣ್ ಕುಮಾರ್ ಕೋಳೂರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸವಾರರು ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಇದರಿಂದ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಅಪಘಾತ ಹಾಗೂ ಅನಾಹುತಗಳನ್ನು ತಪ್ಪಿಸಬಹುದು. ದ್ವಿಚಕ್ರವಾಹನ ಪರವಾನಗಿ ಪಡೆದು ವಾಹನವನ್ನು ಚಲಾಯಿಸಬೇಕು ಎಂದರು.
‘ಹೆಲ್ಮಟ್ ಧರಿಸಿ ಜೀವ ಉಳಿಸಿ’, ‘ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸದಿರಿ’, ‘ಸಂಚಾರಿ ನಿಯಮ ಪಾಲಿಸಿ’ ಎಂಬ ನಾಮಫಲಕ ಹಿಡಿದು ನಗರದ ವಿವಿಧ ರಸ್ತೆಗಳಲ್ಲಿ ದ್ವಿಚಕ್ರ ವಾಹನದ ಮೂಲಕ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಇನ್ನಿತರರಿದ್ದರು.