Advertisement

ಸರಿಯಾಗಿ ರಸ್ತೆ ನಿರ್ಮಿಸಿ ಪ್ರಯಾಣಿಕರ ಪ್ರಾಣ ಕಾಪಾಡಿ

11:54 PM Jun 30, 2022 | Team Udayavani |

ದೇಶದಲ್ಲಿ ಉತ್ತಮವಾದ ರಸ್ತೆಗಳಿದ್ದರೆ ಅದರಿಂದ ಅಪಘಾತಗಳನ್ನು ತಪ್ಪಿಸಬಹುದು ಎಂದು ಹೇಳುತ್ತದೆ ಅಂತಾರಾಷ್ಟ್ರೀಯ ಮಟ್ಟದ ಅಧ್ಯಯನ. ಅಂದರೆ, ಇದರ ಅರ್ಥ ರಸ್ತೆ ಅಪಘಾತಕ್ಕೆ ಬೇರೆಲ್ಲ ಕಾರಣಗಳಿಗಿಂತ ಕೆಟ್ಟ ರಸ್ತೆಯೇ ಹೆಚ್ಚು ಕಾರಣ ಎಂದು ಲ್ಯಾನ್ಸೆಟ್‌ ವರದಿ ಹೇಳಿದೆ. ಇದರ ಪ್ರಕಾರ, ವಾರ್ಷಿಕವಾಗಿ ಉತ್ತಮ ರಸ್ತೆಗಳಿಂದಾಗಿ 30 ಸಾವಿರ ಜೀವಗಳನ್ನು ಉಳಿಸಬಹುದು.

Advertisement

ಇದನ್ನು ನಾವು ಬೆಂಗಳೂರಿನಲ್ಲಿಯೂ ಗಮನಿಸಬಹುದು. ಇತ್ತೀಚಿನ ದಿನಗಳಲ್ಲಿ ಉದ್ಯಾನನಗರಿಯಲ್ಲಿ ಸಂಭವಿಸುತ್ತಿರುವ ಬಹುತೇಕ ಅಪಘಾತಗಳಿಗೆ ಕೆಟ್ಟ ರಸ್ತೆ ಅಥವಾ ಗುಂಡಿಗಳೇ ಕಾರಣ ಎಂಬುದು ವೇದ್ಯವಾಗಿದೆ. ಈ ಬಗ್ಗೆ ಸಾಕಷ್ಟು ಆಕ್ರೋಶವೂ ವ್ಯಕ್ತವಾಗಿ, ಇದು ಕರ್ನಾಟಕ ಹೈಕೋರ್ಟ್‌ವರೆಗೂ ತಲುಪಿ ಅಲ್ಲೂ ಬಿಬಿಎಂಪಿ ಬೈಸಿಕೊಂಡಿದೆ. ಅಷ್ಟೇ ಅಲ್ಲ, ಬೆಂಗಳೂರಿನ ರಸ್ತೆಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮರ್ಯಾದೆ ಹೋಗಿರುವುದನ್ನು ನಾವು ಮನಗಾಣಬೇಕಾಗಿದೆ.

ಮತ್ತೆ ಲ್ಯಾನ್ಸೆಟ್‌ ವರದಿಗೆ ಬರುವುದಾದರೆ, ಭಾರತದಲ್ಲಿನ ರಸ್ತೆ ಅಪಘಾತಗಳಿಗೆ ಕೆಲವು ಅಂಶಗಳನ್ನು ಅದು ಪಟ್ಟಿ ಮಾಡಿದೆ. ಅಂದರೆ, ಅತಿ ವೇಗ, ಕುಡಿದು ವಾಹನ ಚಾಲನೆ, ಹೆಲ್ಮೆಟ್‌ ಹಾಕದೆ ಇರುವುದು, ಸೀಟ್‌ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡುವುದರಿಂದ ಅಪಘಾತದಿಂದಾಗಿ ಹೆಚ್ಚು ಮಂದಿ ಸಾಯುತ್ತಿದ್ದಾರೆ. ಅಷ್ಟೇ ಅಲ್ಲ, ವೇಗ ಮಿತಿ ಬಗ್ಗೆ ಆಗಾಗ್ಗೆ ಪರಿಶೀಲನೆ ನಡೆಸುತ್ತಿರುವುದರಿಂದ 20 ಸಾವಿರಕ್ಕೂ ಹೆಚ್ಚು, ಹೆಲ್ಮೆಟ್‌ ಧರಿಸಿ ಪ್ರಯಾಣಿಸಿದ್ದರಿಂದಾಗಿ 5 ಸಾವಿರಕ್ಕೂ ಹೆಚ್ಚು, ಸೀಟ್‌ ಬೆಲ್ಟ್ನಿಂದಾಗಿ 3 ಸಾವಿರಕ್ಕೂ ಹೆಚ್ಚು ಮಂದಿ ಸಾವಿನಿಂದ ಪಾರಾಗಿ¨ªಾರೆ. ಅಂದರೆ ಅಪಘಾತ ಸಂಭವಿಸಿದಾಗ್ಯೂ, ಹೆಲ್ಮೆಟ್‌, ಸೀಟ್‌ಬೆಲ್ಟ್ ಇವರ ಪ್ರಾಣವನ್ನು ಉಳಿಸಿದೆ. ವಿಶೇಷವೆಂದರೆ, ಕುಡಿದು ವಾಹನ ಚಾಲನೆ ಮಾಡಿದ್ದರಿಂದ ಭಾರತದಲ್ಲಿ ಸಾವನ್ನಪ್ಪಿರುವ ಬಗ್ಗೆ ಯಾವುದೇ ಅಂಕಿ ಅಂಶ ಸಿಕ್ಕಿಲ್ಲ.

ಲ್ಯಾನ್ಸೆಟ್‌ ವರದಿಯ ಪ್ರಕಾರ, ಜಾಗತಿಕವಾಗಿ ವರ್ಷಕ್ಕೆ 13.5 ಲಕ್ಷ ಮಂದಿ ಅಪಘಾತಗಳಿಂದಲೇ ಪ್ರಾಣ ಬಿಡುತ್ತಿದ್ದಾರೆ. ಇದರಲ್ಲಿ ಶೇ. 90ರಷ್ಟು ಅಪಘಾತಗಳು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಆಗುತ್ತಿವೆ. ಅಂದರೆ, ಭಾರತದಂಥ ದೇಶಗಳಲ್ಲಿಯೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.

ಹಾಗಂತ ತೀರಾ ಮುಂದುವರಿದ ದೇಶಗಳಲ್ಲಿ ಅಪಘಾತಗಳು ಸಂಭವಿಸುತ್ತಿಲ್ಲ ಎಂದೇನಲ್ಲ. ಆದರೆ ಅಲ್ಲಿ ಅಪಘಾತಗಳು ಸಂಭವಿಸಿದರೂ, ಸಾವಿನ ಪ್ರಮಾಣ ಕಡಿಮೆ. ಇದಕ್ಕೆ ಅಲ್ಲಿನ ಉತ್ತಮ ರಸ್ತೆಗಳು ಮತ್ತು ಲೇನ್‌ ಕಾಪಾಡಿಕೊಳ್ಳುವುದು ಕಾರಣ ಎಂದು ವಿಶ್ಲೇಷಿಸಬಹುದು.

Advertisement

ಭಾರತದಂಥ ದೇಶದಲ್ಲಿ ಟ್ರಾಫಿಕ್‌ ನಿಯಮಗಳ ಕುರಿತಂತೆ ಇನ್ನಷ್ಟು ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ಕೆಲವೊಂದು ಸಂದರ್ಭಗಳಲ್ಲಿ ಅದರಲ್ಲೂ ಹಳ್ಳಿಗಾಡಿನ ವಿಚಾರದಲ್ಲಿ ಹೆಲ್ಮೆಟ್‌ಗಳು ಕಾಣಸಿಗುವುದೇ ಅಪರೂಪ. ಜತೆಗೆ, ಗ್ರಾಮೀಣ ರಸ್ತೆಗಳ ಸ್ಥಿತಿಯಂತೂ ಹೇಳತೀರದಾಗಿದೆ. ಬೆಂಗಳೂರಿನಲ್ಲಿಯೇ ಗುಂಡಿ ಬಿದ್ದ ರಸ್ತೆಗಳನ್ನು ಸರಿ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುವಾಗ ಗ್ರಾಮೀಣ ಪ್ರದೇಶದ ಜನರ ಸಂಕಷ್ಟ ಕೇಳುವವರು ಯಾರು?

ಹೀಗಾಗಿ, ಮೊದಲಿಗೆ ವಾಹನ ಸವಾರರಲ್ಲಿ ಟ್ರಾಫಿಕ್‌ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಸರಿಯಾಗಿ ರಸ್ತೆ ನಿರ್ಮಾಣ ಮಾಡುವುದು, ವೇಗಮಿತಿ ಕಾಯ್ದುಕೊಳ್ಳುವುದು, ಕುಡಿದು ವಾಹನ ಚಾಲನೆ ಮಾಡುವುದನ್ನು ತಪ್ಪಿಸುವ ಕ್ರಮ ಕೈಗೊಳ್ಳಬೇಕಾಗಿದೆ. ಅದರಲ್ಲೂ ಉತ್ತಮ ರಸ್ತೆ ಮಾಡಿದಲ್ಲಿ ಅರ್ಧದಷ್ಟು ಸಮಸ್ಯೆಗೆ ಪರಿಹಾರ ಸಿಗುವುದು ಖಂಡಿತ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next