ಬಾಳ: ಬಾಳ ಮತ್ತು ಕಳವಾರು ಗ್ರಾಮಗಳನ್ನು ಒಳಗೊಂಡಿರುವ ಬಾಳ ಗ್ರಾಮ ಪಂಚಾಯತ್‌ನ ಬಹು ಭಾಗವು ಪ್ರಸ್ತುತ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ಮೂಲ ಮಾಲಕರ ಕೈತಪ್ಪಿ ಹೋಗಿದೆ. ಇಲ್ಲಿನ 1 ಸಾವಿರ ಎಕರೆಗೂ ಹೆಚ್ಚು ಪ್ರದೇಶವನ್ನು ಸರಕಾರ ಸ್ವಾಧೀನಪಡಿಸಿಕೊಂಡು ಎಂಎಸ್‌ಇಝಡ್ ಗೆ ಒದಗಿಸಿದೆ.
2011ರ ಜನಗಣತಿಯಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸಂಖ್ಯೆ 4,940ರಷ್ಟು. ಬಾಳದಲ್ಲಿ ಒಟ್ಟು 431 ಕುಟುಂಬ ನೆಲೆ ನಿಂತಿದ್ದು 2,976 ಜನಸಂಖ್ಯೆಯಿದೆ. 3 ವಾರ್ಡ್‌ಗಳಲ್ಲಿ 10 ಸದಸ್ಯರಿದ್ದು ಬಾಳದಲ್ಲಿ 7 ಸದಸ್ಯರಿದ್ದಾರೆ.
ಆದಾಯದ ಕೊರತೆ
ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಂಆರ್‌ಪಿಎಲ್, ಎಚ್‌ಪಿಸಿಎಲ್, ಬಿಎಎಸ್‌ಎಫ್ ಸಹಿತ ಬೃಹತ್ ಕಂಪೆನಿಗಳು ಸ್ಥಾಪಿತವಾಗಿದ್ದರೂ ಪಂಚಾಯತ್‌ಗೆ ಆದಾಯದ ಮೂಲ ಕಡಿಮೆ. ವಾಣಿಜ್ಯ, ನೀರು, ಮನೆ ತೆರಿಗೆ ಆದಾಯದ ಮೂಲ. ಸ್ಥಳೀಯವಾಗಿ ಇಲ್ಲಿನ ಬೃಹತ್ ಕಂಪೆನಿಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ, ಗುತ್ತಿಗೆ ಮತ್ತಿತರ ಲಾಭದಾಯಕ ಹುದ್ದೆಗಳು ಲಭಿಸಿವೆ.
ಒಟ್ಟೆಕಾಯರ್, ಎಂಆರ್‌ಪಿಎಲ್ ಕಾಲನಿ, ಬಾಳ ಇಲ್ಲಿನ ಬಡಾವಣೆಗಳು. ಹೆಚ್ಚಾಗಿ ಕಾರ್ಮಿಕರ ಬಾಡಿಗೆ ನಿವಾಸಗಳೂ ಇವೆ. ಸಣ್ಣ ಗ್ರಾಮವಾದ ಕಾರಣ ಒಳರಸ್ತೆಗಳನ್ನು ಪಂಚಾಯತ್ ಸುಸ್ಥಿತಿಯಲ್ಲಿರಿಸಿದೆ. ಪ್ರಮುಖ ರಾಜ್ಯ ಹೆದ್ದಾರಿ ಈ ಭಾಗದಲ್ಲಿ ಹಾದು ಹೋಗುತ್ತಿದ್ದು, ಬೃಹತ್ ಕಂಪೆನಿಗಳ ಸಾವಿರಾರು ಟ್ಯಾಂಕರ್, ಲಾರಿ ಓಡಾಟದಿಂದ ಹದೆಗೆಟ್ಟು ಹೋಗಿದೆ. ಈ ರಸ್ತೆಯನ್ನು ಗ್ರಾಮದ ಜನ ಮಾತ್ರವಲ್ಲದೆ ಸುತ್ತಮುತ್ತಲಿನ ಪಾಲಿಕೆ ವ್ಯಾಪ್ತಿಯ ನಿವಾಸಿಗಳಿಗೂ ಉಪಯೋಗಿಸುತ್ತಾರೆ. ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಅಂದಾಜು 40 ಕೋಟ ರೂ. ವೆಚ್ಚದಲ್ಲಿ ರಸ್ತೆಯ ವಿಸ್ತರಣೆ ಮತ್ತು ಸುಸಜ್ಜಿತ ಚರಂಡಿಗೆ ಕ್ರಮ ಕೈಗೊಳ್ಳಲಾಗಿದೆ.
ತ್ಯಾಜ್ಯ ನಿರ್ವಹಣೆ
ತ್ಯಾಜ್ಯ ನಿರ್ವಹಣೆಗೆ ಇದೀಗ ಕಟ್ಟಡ ನಿರ್ಮಾಣ ನಡೆಯುತ್ತಿದೆ. ರಾಮಕೃಷ್ಣ ಮಿಷನ್ ಹಾಗೂ ಪಂಚಾಯತ್ ಜಂಟಿಯಾಗಿ ಕಸ ವಿಲೇವಾರಿ ಮಾಡುವ ಒಪ್ಪಂದವಾಗಿದೆ. ಬಾಳ ಪಂಚಾಯತ್ ನಲ್ಲಿ ಒಂದು ವಾಹನವಿದೆ. ರಾಮಕೃಷ್ಣ ಮಠದ ವತಿಯಿಂದ ಬ್ಯಾಟರಿ ಚಾಲಿತ ಟೆಂಪೋ ಮೂಲಕ ಕಸ ಸಂಗ್ರಹ ಮಾಡುವ ಯೋಜನೆಯಿದೆ.
ಬಾಳದಲ್ಲಿ ಒಂದು ಪ್ರಾಥಮಿಕ ಶಾಲೆಯಿದ್ದು, ಅಲ್ಲಿ 28 ವಿದ್ಯಾರ್ಥಿಗಳಷ್ಟೇ ಇದ್ದಾರೆ. ಅನತಿ ದೂರದ ಸುರತ್ಕಲ್‌ನಲ್ಲಿ, ಗಣೇಶಪುರದಲ್ಲಿ ಸುಸಜ್ಜಿತ ಖಾಸಗೀ ಆಂಗ್ಲ ಮಾಧ್ಯಮ ಶಾಲೆಗಳಿದ್ದು ಮಕ್ಕಳ ಶಿಕ್ಷಣಕ್ಕೆ ಕೊರತೆಯಿಲ್ಲ. ಪಂಚಾಯತ್ ಸ್ವಂತದ್ದಾದ ಸಭಾ ಭವನವನ್ನು ಹೊಂದಿದೆ.
ಮರವೂರು ಡ್ಯಾಂನಿಂದ ನೀರು ಸರಬರಾಜು ಇದ್ದು, ಜಲಸಿರಿಯ ಯೋಜನೆ 2022-23ರಲ್ಲಿ ಪಂಚಾಯತ್ ಗೆ ಲಭ್ಯವಾಗಲಿದೆ.
ಮಳೆ ಕೊಯ್ಲಿನಲ್ಲಿ ಪಂಚಾಯತ್ ಉತ್ತಮ ಪ್ರಗತಿ ಸಾಧಿಸಿದ್ದು ಉದ್ಯಮ, ಪಂಚಾಯತ್ ಹೀಗೆ ಹೆಚ್ಚಿನ ಅರಿವು ಮೂಡಿದೆ. ಸಂಚಾರ ವ್ಯವಸ್ಥೆ ಪ್ರಗತಿ ಸಾಧಿಸಿದೆ. ಬಸ್ ಸೌಕರ್ಯ ಉತ್ತಮವಿದ್ದು ನಗರದಿಂದ ಸಿಟಿ ಬಸ್‌ಗಳು ಸಾಕಷ್ಟಿವೆ.
ಮಾಲಿನ್ಯದ ಹೊಡೆತ; ಅನಾರೋಗ್ಯ ಭೀತಿ
ಈ ಭಾಗದಲ್ಲಿ ಬೃಹತ್ ಕಂಪೆನಿ ಗಳಿರುವುದರಿಂದ ದುರ್ವಾಸನೆ, ಮಾಲಿನ್ಯದ ಹೊಡೆತದಿಂದ ಅನಾರೋ ಗ್ಯದ ಭೀತಿ ಎದುರಿಸುತ್ತಿದ್ದಾರೆ. ಧೂಳಿನ ಸಮಸ್ಯೆ ಯಥೇತ್ಛವಾಗಿದೆ. ಇದರಿಂದಾಗಿ ಹಲವರು ಕ್ಯಾನ್ಸರ್ ರೋಗಕ್ಕೆ ತುತ್ತಾ ಗಿದ್ದಾರೆ ಎಂಬ ಅಂಕಿ-ಅಂಶಗಳು ಆತಂಕಕ್ಕೆ ಎಡೆ ಮಾಡಿದೆ. ಟ್ಯಾಂಕರ್‌ಗಳ ದಟ್ಟಣೆಯಿಂದ ಪರಿಸರದಲ್ಲಿ ಅವುಗಳನ್ನು ನಿಲ್ಲಿಸಲೂ ಜಾಗವಿಲ್ಲ. ಹೀಗಾಗಿ ರಸ್ತೆ ಬದಿಯಲ್ಲಿ ನಿಲ್ಲಿಸುವುದು ಸಾಮಾನ್ಯವಾಗಿದೆ. ಖಾಸಗಿ ಟ್ಯಾಂಕರ್ ಯಾರ್ಡ್ ಇದ್ದರೂ ಸಾಲುತ್ತಿಲ್ಲ. ಇಲ್ಲಿರುವ ಕಂಪೆನಿಗಳು ತಮ್ಮಲ್ಲಿಗೆ ಬರುವ ಟ್ಯಾಂಕರ್ ಲಾರಿ ಗಳಿಗೆ ಸೂಕ್ತ ನಿಲುಗಡೆಯ ವ್ಯವಸ್ಥೆ ಮಾಡದಿರುವುದರಿಂದ ಸ್ಥಳೀಯರು ಸಮಸ್ಯೆಗೀಡಾಗಿದ್ದಾರೆ.
ಗ್ರಾಮದ ಐತಿಹ್ಯ
ಬೆಂಕಿನಾಥೇಶ್ವರ ದೇವಸ್ಥಾನ ಗ್ರಾಮ ದೇವಸ್ಥಾನ. ವಿಶೇಷ ಆರ್ಥಿಕ ವಲಯದ ಸಂದರ್ಭ ದೇವಸ್ಥಾನ ಸ್ಥಳಾಂತರಕ್ಕೆ ಪ್ರಯತ್ನ ನಡೆದಿತ್ತಾದರೂ ಸಾಧ್ಯವಾಗಿರಲಿಲ್ಲ. ಇದಕ್ಕೆ ಕ್ಷೇತ್ರದ ಕಾರಣಿಕ ಶಕ್ತಿಯೇ ಕಾರಣ ಎಂದು ಭಕ್ತರು ನಂಬಿದ್ದಾರೆ. ಆದ್ದರಿಂದ ದೇವಸ್ಥಾನದ ಸುತ್ತ ಅರ್ಚಕರಿಗೆ ಹಾಗೂ ಗುತ್ತಿನ ಮನೆಯವರಿಗೆ ನಿವೇಶನ ನೀಡಿ, ನಿತ್ಯ ಪೂಜಾದಿ ಕ್ರಿಯೆಗಳು ನಡೆಯುವಂತೆ ಮಾಡಲಾಯಿತು. ವರ್ಷಾವಧಿ ಜಾತ್ರೆ, ಶಿವರಾತ್ರಿ ಇತ್ಯಾದಿ ವಿಶೇಷ ದಿನಗಳಂದು ನಿರ್ವಸಿತರಾಗಿ ಎದ್ದು ಹೋದ ಗ್ರಾಮಸ್ಥರು ಸೇರುತ್ತಾರೆ. ಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿಯೂ ಇದ್ದು ಕಲಾ ಸೇವೆಯಲ್ಲಿಯೂ ಕ್ಷೇತ್ರ ಮುಂಚೂಣಿಯಲ್ಲಿದೆ.
ನಿರಾಶ್ರಿತರಾಗಿದ್ದೇವೆ: ಬೃಹತ್ ಕಂಪೆನಿಗಳಿದ್ದರೂ ಆಸ್ಪತ್ರೆ, ಶೌಚಾಲಯ, ಚರಂಡಿ, ಬಸ್ ನಿಲ್ದಾಣ ಏನೇನೂ ಇಲ್ಲ. ಬಾಳದ ಜನತೆ ಮಾಲಿನ್ಯ ಅನುಭವಿಸಲು ಮಾತ್ರ ಇರುವಂತಿದೆ. ಸುಸ್ಥಿರ ಅಭಿವೃದ್ಧಿಗೆ ಕಂಪೆನಿಗಳು ಸಹಕರಿಸುತ್ತವೆ ಎಂಬ ಭಾವನೆಯಿಂದ ಕೃಷಿ ಜಾಗ ಬಿಟ್ಟುಕೊಟ್ಟವರು ನಿರಾಶ್ರಿತರಾಗಿದ್ದೇವೆ. ಪ್ರಮುಖ ರಸ್ತೆ ದುರಸ್ತಿ ಆಗದೆ ಸಮಸ್ಯೆಯಾಗಿದ್ದು ಶೇ. 90ರಷ್ಟು ಕಂಪೆನಿಗಳ ಟ್ರಕ್, ಟ್ಯಾಂಕರ್ ಓಡಾಟವಿದೆ. ಅವರಿಗೆ ಬೇರೆ ರಸ್ತೆ ಮಾಡಿಕೊಂಡರೆ ನಮ್ಮ ರಸ್ತೆಯನ್ನು ನಾವೇ ದುರಸ್ತಿ ಮಾಡಿಕೊಳ್ಳುತ್ತೇವೆ.
-ಭಾಸ್ಕರ ರಾವ್ ಬಾಳ, ಸ್ಥಳೀಯರು.
-ಲಕ್ಷ್ಮೀ ನಾರಾಯಣ ರಾವ್