Advertisement

Road Mishap; ಉಳ್ಳಾಲ: ಡಿವೈಡರ್‌ಗೆ ಬಡಿದ ಬೈಕ್‌: ಇಬ್ಬರು ಸಾವು

12:44 AM Mar 26, 2024 | Team Udayavani |

ಉಳ್ಳಾಲ: ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ನಾಟೆಕಲ್‌ ತಿರುವು ಬಳಿ ರವಿವಾರ ರಾತ್ರಿ ನಡೆದ ಬೈಕ್‌ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಬೈಕ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

Advertisement

ಹಳೆಯಂಗಡಿ ತೋಕೂರು ಬಸ್‌ ನಿಲ್ದಾಣದ ಬಳಿಯ ನಿವಾಸಿ ಶ್ರೀನಿಧಿ (30) ಮತ್ತು ಶಕ್ತಿನಗರ ಕಾರ್ಮಿಕ ಕಾಲನಿ ನಿವಾಸಿ ಯತೀಶ್‌ ದೇವಾಡಿಗ ಮೃತಪಟ್ಟವರು.

ಕೊಣಾಜೆ ಮೋಡಿಜೇರ ಬಳಿಯ ಮನೆಯೊಂದರ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್‌ ಮಂಗಳೂರು ಕಡೆ ಸಂಚರಿಸುತ್ತಿದ್ದಾಗ ಘಟನೆ ನಡೆದಿದೆ. ಶ್ರೀ ನಿಧಿ ವಿವಾಹಿತರಾಗಿದ್ದು, ಇಬ್ಬರು ಮಕ್ಕಳನ್ನು ಆಗಲಿದ್ದಾರೆ. ಯತೀಶ್‌ ಎಲೆಕ್ಟ್ರೀಷಿಯನ್‌ ಆಗಿದ್ದು ಶಕ್ತಿನಗರದ ಖಾಸಗಿ ಕಾಲೇಜಿನಲ್ಲಿ ಮೈಂಟೆನೆನ್ಸ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಶ್ರೀನಿಧಿ ಅವರ ಸಂಬಂಧಿಕರ ಮನೆಯ ಗೃಹಪ್ರವೇಶ ಕೊಣಾಜೆಯಲ್ಲಿ ನಡೆದಿದ್ದು, ಅವರು ತನ್ನ ಸ್ಕೂಟರ್‌ನಲ್ಲಿ ಅಲ್ಲಿಂದ ಆಗಮಿಸಿ ಮಂಗಳೂರಿನಿಂದ ಸ್ನೇಹಿತ ಯತೀಶ್‌ ದೇವಾಡಿಗ ಅವರ ಬೈಕ್‌ನಲ್ಲಿ ಆಗಮಿಸಿದ್ದರು. ಬೈಕ್‌, ತಿಬ್ಲೆಪದವು ಮತ್ತು ನಾಟೆಕಲ್‌ ನಡುವಿನ ಗ್ರೀನ್‌ ಗ್ರೌಂಡ್‌ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬಡಿದು ಇನ್ನೊಂದು ಬದಿಯ ರಸ್ತೆಗೆ ಬೈಕ್‌ ಸಮೇತ ಇಬ್ಬರೂ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ನಾಟೆಕಲ್‌ ಕಡೆಯಿಂದ ಅಸೈಗೋಳಿ ಕಡೆಗೆ ಸಂಚರಿಸುತ್ತಿದ್ದ ಕಾರೊಂದು ಈ ಇಬ್ಬರ ದೇಹದ ಮೇಲೆ ಹರಿದಿದ್ದು, ಶ್ರೀನಿಧಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು. ಸವಾರ ಯತೀಶ್‌ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

ಅಪಘಾತದ ವೀಡಿಯೋ ವೈರಲ್‌
ಬೈಕ್‌ ನೇರವಾಗಿ ಡಿವೈಡರ್‌ಗೆ ಬಡಿದು ಈ ಅಪಘಾತ ಸಂಭವಿಸಿತ್ತು ಎಂದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಬೇರೊಂದು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಇರಿಸಿದ್ದ ವೀಡಿಯೋ ಕೆಮರಾದಲ್ಲಿ ಅಪಘಾತದ ಅಂತಿಮ ದೃಶ್ಯ ದಾಖಲಾಗಿದ್ದು, ಬೈಕ್‌ ಏಕಾಏಕಿ ಡಿವೈಡರ್‌ನಿಂದ ಹಾರಿ ಇನ್ನೊಂದು ಬದಿಯ ರಸ್ತೆಗೆ ಎಸೆಯಲ್ಪಟ್ಟಿರುವುದು ದಾಖಲಾಗಿದ್ದು, ಇದೇ ಸಂದರ್ಭದಲ್ಲಿ ಕೆಂಪು ಬಣ್ಣದ ಕಾರೊಂದು ರಸ್ತೆಗೆ ಬಿದ್ದಿದ್ದ ಇಬ್ಬರ ಮೇಲೆ ಹರಿದಿರುವ ದೃಶ್ಯ ಸೆರೆಯಾಗಿದೆ. ಘಟನೆಯ ಬಳಿಕ ಕಾರು ನಾಪತ್ತೆಯಾಗಿದ್ದು, ವೀಡಿಯೋ ಆಧಾರದ ಮೇಲೆ ಕಾರಿನ ಶೋಧ ಕಾರ್ಯ ನಡೆಯುತ್ತಿದೆ. ದಕ್ಷಿಣ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next