ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜ ಗ್ರಾಮದ ನಿಡಿಗಲ್ ಶಾಲೆಯ ಬಳಿ ಸ್ಕೂಟರ್ ಹಾಗೂ ಕಾರಿನ ಮಧ್ಯೆ ಢಿಕ್ಕಿ ಉಂಟಾಗಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಉಜಿರೆ ಕಡೆಯಿಂದ ಮುಂಡಾಜೆ ಕಡೆ ಆಗಮಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮಿತ್ತ ಬಾಗಿಲು ಗ್ರಾಮದ ಕಾಜೂರಿನ ಶೇಕಬ್ಬ (72) ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಉಂಟಾದ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಇಲ್ಲಿ ರಸ್ತೆ ಅಗಲೀಕರಣ ಸಂದರ್ಭ ಸಾಕಷ್ಟು ಕಲ್ಲು, ಮಣ್ಣು ರಸ್ತೆಗೆ ಬಂದು ಬಿದ್ದಿದೆ. ಮುಂಡಾಜೆ ಕಡೆಯಿಂದ ಆಗಮಿಸಿದ ಕಾರು ಈ ಕಲ್ಲುಗಳ ಮೇಲೆ ಚಲಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಸಂಪೂರ್ಣ ಬಲಬದಿಗೆ ಚಲಿಸಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆಯಿತು.
ಅಪಘಾತದ ವೇಳೆ ಸ್ಕೂಟರ್ ಸವಾರನ ಹೆಲ್ಮೆಟ್ ಕಾರಿನ ಹಿಂಭಾಗದ ಗಾಜಿಗೆ ಬಡಿದು ಗಾಜು ಪುಡಿಯಾಗಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಯಾವುದೇ ಮುಂಜಾಗ್ರತೆ ವಹಿಸದೆ ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ .