Advertisement

ದ.ಕ, ಉಡುಪಿ: ಅಪಘಾತಕ್ಕೆ 69 ದಿನಗಳಲ್ಲಿ 69 ಮಂದಿ ಬಲಿ!

12:07 AM May 15, 2022 | Team Udayavani |

ಮಂಗಳೂರು: ಕೊರೊನಾ ಅಬ್ಬರ ಕಡಿಮೆಯಾಗಿ ಜನಜೀವನ ಸಹಜಸ್ಥಿತಿಗೆ ತಲುಪಿದ ಬಳಿಕ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ವಾಹನ ಸಂಚಾರದಲ್ಲಿ ಭಾರೀ ಏರಿಕೆಯಾಗಿದೆ. ಇದೇ ವೇಳೆ ಅಪಘಾತಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿರುವುದು ಕಳವಳಕ್ಕೆ ಕಾರಣವಾಗಿದೆ.

Advertisement

ದ.ಕ., ಉಡುಪಿ ಜಿಲ್ಲೆಗಳಲ್ಲಿ 2022ರ ಮಾ. 3ರಿಂದ ಎ. 10ರ ವರೆಗೆ 120ಕ್ಕೂ ಅಧಿಕ ಅಪಘಾತಗಳು ಸಂಭವಿಸಿದ್ದು 69 ಮಂದಿ (ದ.ಕ.-38, ಉಡುಪಿ-31) ಪ್ರಾಣ ಕಳೆದುಕೊಂಡಿದ್ದಾರೆ. 140ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

41 ಮಂದಿ ದ್ವಿಚಕ್ರ ವಾಹನ ಸವಾರರು !
ಮೃತ 69 ಮಂದಿಯಲ್ಲಿ 31 ಮಂದಿ ಬೈಕ್‌/ಸ್ಕೂಟರ್‌ ಸವಾರರು, 7 ಮಂದಿ ಸಹಸವಾರರರು. 4 ಅಪಘಾತಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. 9 ಪಾದಚಾರಿಗಳು, ಇಬ್ಬರು ಸೈಕಲ್‌ ಸವಾರರು ಮೃತಪಟ್ಟಿದ್ದಾರೆ. ಇಬ್ಬರು ಪೊಲೀಸ್‌ ಅಧಿಕಾರಿಗಳು, ಓರ್ವ ನಿವೃತ್ತ ಪೊಲೀಸ್‌ ಅಧಿಕಾರಿ ಕೂಡ ಇದೇ ಅವಧಿಯಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.

ರಾ.ಹೆ. ಪಾಲು ಅಧಿಕ ಅತ್ಯಧಿಕ ಅಪಘಾತಗಳು ರಾ.ಹೆ. 66ರ ಕೂಳೂರು,ಕುಂಟಿಕಾನ, ಜಪ್ಪಿನಮೊಗರು, ನಂತೂರು, ಸುರತ್ಕಲ್‌, ಕೋಟ, ಸಾಲಿಗ್ರಾಮ, ಕುಂದಾಪುರ, ಪಡುಬಿದ್ರಿ, ಹೆಜಮಾಡಿ, ತೆಂಕ ಎರ್ಮಾಳು, ಹಳೆಯಂಗಡಿ, ಉಡುಪಿ ಸಂತೆಕಟ್ಟೆ, ಕಿರಿಮಂಜೇಶ್ವರ, ಹೆಮ್ಮಾಡಿ ಮೊದಲಾದೆಡೆ ಸಂಭವಿಸಿವೆ. ಮಂಗಳೂರು-ಬೆಂಗಳೂರು ರಾ.ಹೆ. 75, ಕಾರ್ಕಳ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿಯೂ ಹಲವು ಅಪಘಾತಗಳು ಸಂಭವಿಸಿವೆ.

ನಿರ್ಲಕ್ಷ್ಯ, ರಸ್ತೆ ಕಾಮಗಾರಿ ಕಾರಣ
ಅತೀ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ರಸ್ತೆ ಅಪಘಾತಕ್ಕೆ ಕಾರಣ ಎಂದು ಪೊಲೀಸ್‌ ಕಡತಗಳು ಹೇಳುತ್ತವೆ. ರಸ್ತೆ ದುಸ್ಥಿತಿ, ಅವೈಜ್ಞಾನಿಕ ಕಾಮಗಾರಿ ಕೂಡ ಕಾರಣವಾಗುತ್ತಿವೆ. ಹೆಲ್ಮೆಟ್‌ ಧರಿಸದೆ ಹಲವು ಬೈಕ್‌ ಸವಾರರು ಜೀವ ಕಳೆದುಕೊಂಡಿದ್ದಾರೆ. ಕೆಎಸ್ಸಾರ್ಟಿಸಿ, ಖಾಸಗಿ ಬಸ್‌, ಲಾರಿ, ಟ್ಯಾಂಕರ್‌ಗಳು ಹಲವರ ಸಾವಿಗೆ ಕಾರಣವಾಗಿವೆ.

Advertisement

2018ರಲ್ಲಿ 64 ಸಾವು
2018ರಲ್ಲಿ ಇದೇ ಅವಧಿಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ರಸ್ತೆ ಅವಘಡಗಳಲ್ಲಿ 64 ಮಂದಿ ಮೃತಪಟ್ಟಿದ್ದರು. ಇವರಲ್ಲಿ 26 ಮಂದಿ ದ್ವಿಚಕ್ರ ವಾಹನ ಸವಾರರು, ಐವರು ಸಹಸವಾರರು, 8 ಮಂದಿ ಪಾದಚಾರಿಗಳು ಸೇರಿದ್ದಾರೆ.

ಕೊಲೆಗೆ ಸಮಾನವಾದ ಕೇಸು
ನಿರ್ಲಕ್ಷ್ಯದಿಂದ ಅಪಘಾತ, ಸಾವಿಗೆ ಕಾರಣ ರಾದ ಚಾಲಕರ ವಿರುದ್ಧ “ಕೊಲೆಯಲ್ಲದ ಮಾನವ ಹತ್ಯೆ’ (ಸೆಕ್ಷನ್‌ 308) ಪ್ರಕರಣ ಕೂಡ ದಾಖಲಿಸಿ ಕೊಳ್ಳಲಾಗುವುದು. ಮಂಗಳೂರಿನಲ್ಲಿ ಇತ್ತೀಚೆಗೆ ಇಂಥ ಪ್ರಕರಣ ದಾಖಲಿಸಿದ್ದೇವೆ ಎನ್ನುತ್ತಾರೆ ಮಂ. ಸಂಚಾರ ವಿಭಾಗದ ಎಸಿಪಿ ಎಂ.ಎ. ನಟರಾಜ್‌.

ವಾಹನ ಚಾಲಕರು, ಸವಾರರ ನಿರ್ಲಕ್ಷ್ಯ ಮಾತ್ರವಲ್ಲದೆ ಅನೇಕ ಬಾರಿ ರಸ್ತೆಯ ಸ್ಥಿತಿಗತಿ ಕೂಡ ಅಪಘಾತಕ್ಕೆ ಕಾರಣವಾಗುತ್ತದೆ. ರಸ್ತೆ ನಿರ್ಮಿಸಿದ ಗುತ್ತಿಗೆದಾರರ ವಿರುದ್ಧವೂ ಪ್ರಕರಣ ದಾಖಲಿಸಲು ಮೋಟಾರು ವಾಹನ ಕಾಯಿದೆಯ ಸೆಕ್ಷನ್‌ 198ಎ ಅಡಿ ಅವಕಾಶವಿದೆ. ಉತ್ತರ ಪ್ರದೇಶ, ಉತ್ತರಾಂಚಲ ಮೊದಲಾದೆಡೆ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
– ಡಾ| ಸದಾನಂದ,
ಆರ್‌ಟಿಐ ಕಾರ್ಯಕರ್ತರು

ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಹೆಚ್ಚಿನ ಅಪಘಾತ ತಪ್ಪಿಸಬಹುದು. ದ್ವಿಚಕ್ರ ವಾಹನ ಸವಾರರು, ಸಹಸವಾರರು ಹೆಲ್ಮೆಟ್‌ ಧರಿಸಲೇಬೇಕು. ರಸ್ತೆ ಅಥವಾ ಇನ್ನೋರ್ವರನ್ನು ದೂಷಿಸುವ ಮೊದಲು ತಮ್ಮ ಸುರಕ್ಷೆ ಬಗ್ಗೆ ಯೋಚಿಸಬೇಕು. 6 ಹೈವೇ ಪ್ಯಾಟ್ರೊಲಿಂಗ್‌, ಸಂಚಾರಿ ಪೊಲೀಸ್‌ ತಂಡ, ಸ್ಥಳೀಯ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ನಿಗಾ ವಹಿಸುತ್ತಿದ್ದಾರೆ.
– ಎನ್‌. ವಿಷ್ಣುವರ್ಧನ, ಉಡುಪಿ ಎಸ್‌ಪಿ

2-3 ತಿಂಗಳಲ್ಲಿ ಅಪಘಾತಗಳ ಸಂಖ್ಯೆ ಭಾರೀ ಹೆಚ್ಚಾಗಿರುವುದು ಕಂಡುಬಂದಿದೆ. ಹೆದ್ದಾರಿಗೆ ಮಾತ್ರ ಸೀಮಿತವಲ್ಲ, ಒಳ ರಸ್ತೆಗಳಲ್ಲಿಯೂ ಸಂಭವಿಸುತ್ತಿದೆ. ತಿರುವಿನಿಂದ ಕೂಡಿದ ರಸ್ತೆ, ಮೊಬೈಲ್‌ ಬಳಕೆ, ನಿರ್ಲಕ್ಷ್ಯದ ಚಾಲನೆ, ಹೆಲ್ಮೆಟ್‌ ಧರಿಸದಿರುವುದೂ ಅಪಘಾತಕ್ಕೆ ಕಾರಣ. ಮಳೆಗಾಲದಲ್ಲಿ ಇನ್ನೂ ಹೆಚ್ಚಿನ ಎಚ್ಚರಿಕೆ ಅಗತ್ಯ.
– ಹೃಷಿಕೇಶ್‌ ಸೋನಾವಣೆ, ದ.ಕ. ಎಸ್‌ಪಿ

– ಸಂತೋಷ್‌ ಬೊಳ್ಳೆಟ್ಟು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next