ತುಮಕೂರು: ಜಿಲ್ಲೆಯ ಕುಣಿಗಲ್ ಹಾಗೂ ಶಿರಾ ತಾಲೂಕಿನ ವಿವಿಧೆಡೆ ನಡೆದ 4 ಪ್ರತ್ಯೇಕ ಅಪಘಾತಗಳಲ್ಲಿ 6 ಮಂದಿ ಮೃತಪಟ್ಟು, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ರವಿವಾರ ಸಂಭವಿಸಿದೆ.
ಶಿರಾ ನಗರದ ಮಧುಗಿರಿ ರಸ್ತೆಯ ಮಾಗೋಡು ಗೇಟ್ ಬಳಿ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಢಿಕ್ಕಿ ಹೊಡೆದು ಅರೇಹಳ್ಳಿ ಗ್ರಾಮದ ರಾಕೇಶ್ (22) ಹಾಗೂ ಗುಳಿಗೇನಹಳ್ಳಿ ಗ್ರಾಮದ ವಾಸಿ ನಾಗರಾಜು (21) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿರಾ ತಾಲೂಕು ಕಳ್ಳಂಬೆಳ್ಳ ಸಮೀಪದ ಬಾಲೇನಹಳ್ಳಿ ಗೇಟ್ ಬಳಿ ರಸ್ತೆ ದಾಟುತ್ತಿದ್ದ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಹಾಳೆಕೊಪ್ಪ ಗ್ರಾಮದ ಫಕೀರಯ್ಯರ ಪತ್ನಿ ಮಾಯಮ್ಮ (35) ಅವರಿಗೆ ವಾಹನವೊಂದು ಢಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕುಣಿಗಲ್ ತಾಲೂಕಿನ ಅಂಚೇಪಾಳ್ಯ ರಾಷ್ಟ್ರೀಯ ಹೆದ್ದಾರಿ 75ರ ಬಿ.ಎಂ. ರಸ್ತೆ ಬಳಿ ಹಂಪ್ಸ್ ಗಮನಿಸದೆ ಸಾಗಿದ ಕಾರೊಂದು ಪಲ್ಟಿಯಾಗಿ ಬೆಂಗಳೂರಿನ ವಿಜಯನಗರ ನಿವಾಸಿ ನರಸಿಂಹ (29) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Related Articles
ನಾಯಿ ಅಡ್ಡ ಬಂದ ಕಾರಣ ಬೈಕ್ ಪಲ್ಟಿಯಾಗಿ ಸವಾರ, ಮಾಗಡಿ ತಾಲೂಕು ತಿಪ್ಪಸಂದ್ರ ಹೋಬಳಿ ರಂಗಯ್ಯನಪಾಳ್ಯ ಗ್ರಾಮದ ಧನಂಜಯ್ಯ (30) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೊಂದು ಘಟನೆಯಲ್ಲಿ ಟ್ರ್ಯಾಕ್ಟರ್ ಹಾಗೂ ಬೈಕ್ ಪರಸ್ಪರ ಢಿಕ್ಕಿ ಹೊಡೆದು ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ಸಹನಾ (22) ಮೃತಪಟ್ಟ ಘಟನೆ ಕುಣಿಗಲ್ ತಾಲೂಕಿನ ಕಸಬಾ ಹೋಬಳಿ ಟಿ.ಎಂ. ರಸ್ತೆ 33 ಗಿರಿಗೌಡನಪಾಳ್ಯ ಗೇಟ್ ಬಳಿ ಸಂಭವಿಸಿದೆ.
ಟ್ಯಾಂಕರ್ ಢಿಕ್ಕಿ: ಮೂವರ ಸಾವು
ಹೊಸದುರ್ಗ: ಡೀಸೆಲ್ ಟ್ಯಾಂಕರೊಂದು ಬೈಕ್‌ಗೆ ಢಿಕ್ಕಿ ಹೊಡೆದು, ಬಳಿಕ ಪಾದಚಾರಿ ಮೇಲೆ ಹರಿದ ಪರಿಣಾಮ ಮೂವರು ಮೃತಪಟ್ಟ ಘಟನೆ ತಾಲೂಕಿನ ಕೈನಡು ಗ್ರಾಮದ ಬಳಿ ಶನಿವಾರ ರಾತ್ರಿ ಸಂಭವಿಸಿದೆ. ಕೈನಡು ಗ್ರಾಮದ ಹುಚ್ಚವೀರಪ್ಪ (50), ರವಿಚಂದ್ರನ್ (36) ಹಾಗೂ ಗಿರೀಶ್ ಆಚಾರ್ (38) ಮೃತಪಟ್ಟವರು.