ವಿಜಯಪುರ : ನಗರದಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ಯುವ ವಕೀಲ ಸಾವಿಗೀಡಾಗಿರುವ ಘಟನೆ ಗುರುವಾರ(ಆ.08) ನಡೆದಿದೆ.
ಬಸವನ ನಗರ ಪ್ರದೇಶದಲ್ಲಿ ಆ್ಯಕ್ಟಿವಾ ದ್ವಿಚಕ್ರ ವಾಹನಕ್ಕೆ ಇನ್ನೋವಾ ವಾಹನ ಡಿಕ್ಕಿ ಹೊಡೆದಿದೆ. ಆದರೂ ತಕ್ಷಣ ವಾಹನ ನಿಲ್ಲಿಸದ ಕಾರಿನ ಚಾಲಕ, ಸವಾರನನ್ನು ಸುಮಾರು ಎರಡೂವರೆ ಕಿ.ಮೀ. ದೂರಕ್ಕೆ ಎಳೆದೊಯ್ದಿದ್ದಾನೆ. ಪರಿಣಾಮ ಬೈಕ್ ಸವಾರ ಯುವ ವಕೀಲ 37 ವರ್ಷದ ರವಿ ಮೇಲಿನಮನಿ ಸ್ಥಳದಲ್ಲೇ ಮೃತಟ್ಟಿದ್ದಾನೆ.
ಅಪಘಾತದ ಸಂದರ್ಭದಲ್ಲಿ ವಕೀಲ ರವಿ ಬೈಕ್‍ನ ಅಡಿಯಲ್ಲಿ ಸಿಲುಕಿದ್ದು, ಬಸವನಗರದಿಂದ ಜಿ.ಪಂ. ಪ್ರವೇಶ ದ್ವಾರದ ವರೆಗೂ ಕಾರು ಚಾಲಕ ಎಳೆದೊಯ್ದಿದ್ದಾನೆ. ಈ ಹಂತದಲ್ಲಿ ದೇಹ ವಾಹನದಿಂದ ಬೇರ್ಪಟ್ಟ ಬಳಿಕ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದು, ರವಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರವಿ ಕಳೆದ ಎರಡು ವರ್ಷಗಳಿಂದ ವಕೀಲ ವೃತ್ತಿ ಆರಂಭಿಸಿದ್ದ. ಇಡೀ ಘಟನೆ ಸಿನಿಮೀಯ ರೀತಿಯಲ್ಲಿ ಕಂಡು ಬಂದಿರುವ ಕಾರಣ ಇದು ವ್ಯವಸ್ಥಿತ ಕೊಲೆಯ ಶಂಕಿಸಲಾಗಿದೆ.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ಎಸ್ಪಿ ಋಷಿಕೇಶ ಸೋನೆವಣೆ, ಎಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಸವರಾಜ ಯಲಿಗಾರ ಪರಿಶೀಲನೆ ನಡೆಸಿದ್ದಾರೆ.ಇದು ವ್ಯವಸ್ಥಿತಿವಾಗಿ ಕೊಲೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಎಸ್ಪಿ ಋಷಿಕೇಶ, ನಮ್ಮ ಪೊಲೀಸರು ತನಿಖೆ ನಡೆಸಲಿದ್ದು, ಬಳಿಕ ಘಟನೆ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ ಎಂದಿದ್ದಾರೆ.
ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.