ಜೇವರ್ಗಿ (ಕಲಬುರಗಿ) : ಟಂಟಂ ಹಾಗೂ ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟು, 13 ಜನರಿಗೆ ಗಂಭೀರವಾದ ಗಾಯಗಳಾದ ಘಟನೆ ತಾಲೂಕಿನ ಮಂದೇವಾಲ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ರ ಮೇಲೆ ಸೋಮವಾರ ಸಂಜೆ 8 ಗಂಟೆ ಸುಮಾರಿಗೆ ಸಂಭವಿಸಿದೆ.
ಬೈಕ್ ಸವಾರ, ತಾಲೂಕಿನ ಮಯೂರ ಗ್ರಾಮದ ರೇವಣಸಿದ್ದಪ್ಪ ನಾನಾಗೌಡ ಪೊಲೀಸ್ ಪಾಟೀಲ ( 35) ಹಾಗೂ ಟಂಟಂನಲ್ಲಿ ಪ್ರಯಾಣಿಸುತ್ತಿದ್ದ ಲಕ್ಷ್ಮೀಬಾಯಿ ನಾಯ್ಕೋಡಿ ಸಂಗಾಪೂರ (18) ದಾರುಣವಾಗಿ ಸಾವನ್ಬಪ್ಪಿದ್ದಾರೆ.
ಈ ಘಟನೆಯಲ್ಲಿ 13 ಜನರಿಗೆ ಗಂಭೀರವಾದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ 6 ಜನರಿಗೆ ಜೇವರ್ಗಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಉಳಿದ 7 ಜನರಿಗೆ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ರವಿ ಪೂಜಾರಿ 15 ದಿನ ಮುಂಬಯಿ ಪೊಲೀಸರ ವಶಕ್ಕೆ
ದ್ವಿಚಕ್ರ ವಾಹನದ ಮೇಲೆ ಜೇವರ್ಗಿಯಿಂದ ಮಯೂರ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಸಿಂದಗಿ ತಾಲೂಕಿನ ಯಂಕಂಚಿಯಿಂದ ತಾಲೂಕಿನ ರೇವನೂರ ಗ್ರಾಮಕ್ಕೆ ತೆರಳುತ್ತಿದ್ದ ಟಂಟಂ ನಡುವೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಶಿವಪ್ರಸಾದ, ನೆಲೋಗಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರಾಜಕುಮಾರ ಜಾಮಗೊಂಡ, ಎಎಸೈ ಗುರುಬಸ್ಸು ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.