Advertisement

ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು : ಸ್ಥಳೀಯರಿಂದ ರಸ್ತೆ ತಡೆದು ಪ್ರತಿಭಟನೆ

11:38 PM Mar 06, 2021 | Team Udayavani |

ಕಲಬುರಗಿ: ಮರಳು ಸಾಗಿಸುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜೇವರ್ಗಿ ತಾಲೂಕಿನ ಗಡ್ಡಿ ಹಳ್ಳದ ಸಮೀಪ ಶನಿವಾರ ರಾತ್ರಿ ನಡೆದಿದೆ. ಟಿಪ್ಪರ್ ಹರಿದು ದೇಹ ಎರಡು ಭಾಗವಾಗಿ ಛಿದ್ರ-ಛಿದ್ರಗೊಂಡಿದೆ.

Advertisement

ಮಶಾಕ್‌ಸಾಬ್ ಚೌದ್ರಿ (35) ಎಂಬಾತನೇ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಪಟ್ಟಣದ ಹೊರವಲಯದಲ್ಲಿರುವ ಮನೆಗೆ ಹೋಗುತ್ತಿದ್ದಾಗ ಕಲಬುರಗಿ ಕಡೆ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದು ಹೊಟ್ಟೆ ಮೇಲೆಯೇ ಹರಿದಿದೆ. ಇದರಿಂದ ಕಾಲುಗಳ ಭಾಗ ಒಂದುಕಡೆ, ಕೈಗಳ ಭಾಗ ಒಂದು ಕಡೆ ತುಂಡಾಗಿ ಬಿದ್ದಿದೆ. ಟಿಪ್ಪರ್ ಡಿಕ್ಕಿ ಹೊಡೆದ ನಂತರ ಚಾಲಕ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ವಿವಿಧ ಸಂಘಟನೆಯವರು ರಾತ್ರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಮರಳು ಟಿಪ್ಪರ್ ಗಳ ಸಂಚಾರ ಹೆಚ್ಚಾಗಿದ್ದು, ಸಾರ್ವಜನಿಕರ ಜೀವಕ್ಕೆ ಸಂಚಕಾರ ತಂದೊಡ್ಡಿವೆ ಎಂದು ಕಿಡಿಕಾರಿದರು.

ಪಟ್ಟಣದಲ್ಲಿ ಮರಳು ತುಂಬಿದ ಟಿಪ್ಪರ್ ಗಳ ಸಂಚಾರಕ್ಕೆ ನಿರ್ಬಂಧ ಹೇರಿ, ಬೈಪಾಸ್ ಮೂಲಕ್ಕೆ ಸಂಚಾರಕ್ಕೆ ಅನುಮತಿ ನೀಡಬೆಕು. ತೀರಾ ಹದಗೆಟ್ಟು ಹೋಗಿರುವ ಮಿನಿ ವಿಧಾನಸೌಧದಿಂದ ರದ್ದೇವಾಡಗಿ ಕ್ರಾಸ್ ವರೆಗಿನ ರಸ್ತೆ ಸುಧಾರಣೆ ಮಾಡಬೇಕು. ದಾರುಣವಾಗಿ ಮೃತ ವ್ಯಕ್ತಿಯ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

Advertisement

ಇದನ್ನೂ ಓದಿ: ಪೋಪ್‌- ಶಿಯಾ ಧರ್ಮಗುರು ಭೇಟಿ : ಐತಿಹಾಸಿಕ ಇರಾಕ್‌ ಭೇಟಿಯಲ್ಲಿ ಮತ್ತೂಂದು ಚರಿತ್ರಾರ್ಹ ನಡೆ

ಪ್ರತಿಭಟನೆಯಲ್ಲಿ ಮುಖಂಡರಾದ ಅಲ್ಲಾಭಕ್ಷ ಭಗವಾನ, ಮಹಿಬೂಬ ಇನಾಮದಾರ, ಎಸ್‌ಡಿಪಿಐ ಸಂಘಟನೆ ಅಧ್ಯಕ್ಷ ಮೋಯಿನುದ್ದೀನ್ ಇನಾಮದಾರ, ಜೆಡಿಎಸ್ ಮುಖಂಡರಾದ ಬಾಬಾ ಹನೀಫ, ಸದಾನಂದ ಪಾಟೀಲ, ಇಮ್ರಾನ, ರಫಿಕ್ ತಿರಂದಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಇನ್ಸ್ ಪೆಕ್ಟರ್ ಸಂಗಮೇಶ ಅಂಗಡಿ ಹಾಗೂ ಸಿಬ್ಬಂದಿ ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ಮಾಡಿದರು.

ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಶಾಕ್‌ಸಾಬ್ ಸಾವಿಗೆ ಕಾರಣವಾದ ಟಿಪ್ಪರ್ ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next