ಮುದ್ದೇಬಿಹಾಳ : ಪಟ್ಟಣದ ಆಲಮಟ್ಟಿ ರಸ್ತೆಯ ಕೋಮಲ್ ಡಾಬಾ ಹತ್ತಿರ ಬೈಕ್ ಒಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಲ್ಲಿನ ವಿವಿವ ಸಂಘದ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿ ಮಹೇಶ ಕಿತ್ತೂರ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ರವಿವಾರ ರಾತ್ರಿ ಸಂಭವಿಸಿದೆ.
ಅಪಘಾತ ಸಂಭವಿಸಿದ ಕೂಡಲೇ ಪ್ರಜ್ಞೆ ತಪ್ಪಿದ್ದ ಅವರನ್ನು ಬಾಗಲಕೋಟೆಯ ಡಾ.ಕಟ್ಡಿ ಅವರ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಿತ್ತೂರ ಅವರ ತಲೆಗೆ ಗಂಭೀರ ಗಾಯವಾಗಿದ್ದು. ಕೈ ಮತ್ತು ತೊಡೆಯ ಮೂಳೆ ಮುರಿದಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.
ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಕುರಿತು ಮುದ್ದೇಬಿಹಾಳ ಪೊಲೀಸರು ವಿವರ ಕಲೆ ಹಾಕುತ್ತಿದ್ದಾರೆ.
ಕಿತ್ತೂರ ಅವರು ಶರಣರ ವಚನಗಳ ವಿಶ್ಲೇಷಕರಾಗಿದ್ದು ಇದುವರೆಗೆ ಅಂದಾಜು 2800 ವಚನಗಳ ವಿಶ್ಲೇಷಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ.