Advertisement

ರಸ್ತೆಗೆ ತಗ್ಗು-ಗುಂಡಿ ತೋಡಿ ಮುಳ್ಳು ಬಡಿತ!

12:00 PM Jul 04, 2022 | Team Udayavani |

ಕಾಳಗಿ: ತಾಲೂಕಿನ ಕೋಡ್ಲಿ ಗ್ರಾಪಂ ವ್ಯಾಪ್ತಿಯ ಅಲ್ಲಾಪೂರ ಗ್ರಾಮ ಸಂಪರ್ಕಿಸುವ ರಸ್ತೆಯನ್ನು ನಿರ್ಮಾಣವಾಗಿ ಒಂದೇ ವಾರದಲ್ಲಿ ಜಮೀನಿನ ಮಾಲೀಕರು ಎರಡು ಮೂರು ಕಡೆ ತಗ್ಗು-ಗುಂಡಿ ತೋಡಿ, ಮುಳ್ಳು ಬಡಿದು ರಸ್ತೆ ಬಂದ್‌ ಮಾಡಿದ್ದಾರೆ. ಇದರಿಂದ ವಾಹನ ಸಂಚಾರ ಸಂಪೂರ್ಣ ಬಂದ್‌ ಆಗಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.

Advertisement

ಅಲ್ಲಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹೊಲದಲ್ಲಿ ಬರುತ್ತದೆ ಎಂದು ಜಮೀನಿನ ಮಾಲೀಕರು ರಸ್ತೆ ಬಂದ್‌ ಮಾಡಿದ್ದರು. ಇದರಿಂದ ಶಾಲಾ ಮಕ್ಕಳು, ಅನಾರೋಗ್ಯ ಪೀಡಿತರು, ಗ್ರಾಮಸ್ಥರು ಬೇರೆ ಗ್ರಾಮಗಳು, ಶಾಲೆ ಹಾಗೂ ಆಸ್ಪತ್ರೆಗೆ ಹೋಗಬೇಕಾದರೆ ಸುಮಾರು ಎಂಟು ಕಿ.ಮೀ ದೂರದ ಕೋಡ್ಲಿ ಗ್ರಾಮದವರೆಗೆ ನಡೆದುಕೊಂಡೆ ಹೋಗಬೇಕಿತ್ತು. ಆದರೆ ಮಳೆಗಾಲ ಪ್ರಾರಂಭದಲ್ಲಿ ಜೋರಾದ ಮಳೆಗೆ ಹಳ್ಳ ತುಂಬಿ ಹರಿದು ಕಾಲು ದಾರಿಯು ಮುಳುಗಿದ್ದಾಗ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಹಗ್ಗದ ಸಹಾಯದಿಂದ ಅಪಾಯ ಲೆಕ್ಕಿಸದೇ ಹಳ್ಳ ದಾಟಿ ಮನೆಗೆ ತಲುಪಿದ್ದೇವೆ ಎಂದು ಗ್ರಾಮಸ್ಥರು ತಮ್ಮ ಅಳಲು ತೊಡಿಕೊಂಡರು.

ರಸ್ತೆ ಸಮಸ್ಯೆ ಬಗೆಹರಿಸುವಂತೆ ಅಲ್ಲಾಪೂರ ಗ್ರಾಮಸ್ಥರು ಲಾರಿ ಕಟ್ಟಿಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಮಾಡಿಕೊಂಡಿದ್ದರು. ಜಿಲ್ಲಾಧಿಕಾರಿ ಯಶವಂತ ಗುರುಕರ್‌ ಅವರು ಕಳೆದ ಹದನೈದು ದಿನಗಳ ಹಿಂದೆ ಅಲ್ಲಾಪೂರ ಗ್ರಾಮಕ್ಕೆ ಕಲಬುರಗಿ ಸಂಸದ ಡಾ| ಉಮೇಶ ಜಾಧವ, ಚಿಂಚೋಳಿ ಶಾಸಕ ಡಾ| ಅವಿನಾಶ ಜಾಧವ ನೇತೃತ್ವದಲ್ಲಿ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದರು.

“ಸಾರ್ವಜನಿಕ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸುವ ಹಕ್ಕು ಯಾರಿಗೂ ಇಲ್ಲ, ಭೂಸ್ವಾಧೀನ ಕಾಯ್ದೆಯಡಿ ರಸ್ತೆ ನಿರ್ಮಾಕ್ಕೆ ಭೂಮಿ ವಶಪಡಿಸಿಕೊಳ್ಳಲಾಗುತ್ತದೆ. ಇದಕ್ಕೆ ನಿಮ್ಮ ಒಪ್ಪಿಗೆ ಬೇಕಾಗುವುದಿಲ್ಲ’ ಎಂದು ಜಮೀನಿನ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ರಸ್ತೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ, ಕಾಮಗಾರಿ ಪೂರ್ಣಗೊಳಿಸುವವರೆಗೂ ಸುಮಾರು 100ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ರಸ್ತೆ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ ಎಂದು ಖುಷಿಯಲ್ಲಿದ್ದರು. ಆದರೆ ರಸ್ತೆ ನಿರ್ಮಾಣವಾದ ವಾರದಲ್ಲೇ ಜಿಲ್ಲಾಧಿಕಾರಿ ಆದೇಶಕ್ಕೂ ಕಿವಿಗೊಡದೇ ಜಮೀನಿನ ಮಾಲೀಕರು ನಿರ್ಮಾಣವಾದ ರಸ್ತೆಯನ್ನೇ ಅಗೆದು ಮುಳ್ಳು ಬಡಿದಿರುವುದರಿಂದ ಮತ್ತೆ ವಾಹನ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಅದಲ್ಲದೇ ಕೋಡ್ಲಿ ಗ್ರಾಪಂನಿಂದ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಬೋರ್‌ ವೆಲ್‌ ಜಮೀನಿನಲ್ಲಿವೆ ಎಂದು ನೀರಿನ ಮೋಟಾರ್‌ ಕೀಲಿ ಹಾಕಿದ್ದಾರೆ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಸಮಸ್ಯೆಯುಂಟಾಗಿದೆ ಎಂದು ಅಲ್ಲಾಪುರ ಗ್ರಾಪಂ ಸದಸ್ಯ ಸಿದ್ದಯ್ಯ ಸ್ವಾಮಿ ಆರೋಪಿಸಿದ್ದಾರೆ.

Advertisement

ಮಳೆಗಾಲ ಪ್ರಾರಂಭವಾಗಿದ್ದರಿಂದ ಜೋರು ಮಳೆ ಸುರಿದರೆ ಶಾಲೆ ಮಕ್ಕಳು, ಗ್ರಾಮಸ್ಥರು ಬೇರೆ ಗ್ರಾಮಗಳಿಗೆ ಹೋಗಬೇಕಾದರೆ ಹರಿಯುವ ಹಳ್ಳವನ್ನು ಲೆಕ್ಕಿಸದೆ ಜೀವಾಪಾಯದಲ್ಲಿ ದಾಟಿ ಹೋಗಬೇಕಾಗುತ್ತದೆ. ಅಪಾಯ ಸಂಭವಿಸುವ ಮೊದಲೇ ಜಿಲ್ಲಾಧಿಕಾರಿಗಳು ಗಮನಹರಿಸಿ ಶಾಶ್ವತ ಪರಿಹಾರ ಕಲ್ಪಿಸಿ ಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ರಸ್ತೆ ನಿರ್ಮಾಣವಾದ ವಾರದಲ್ಲೇ ಜಮೀನಿನ ಮಾಲೀಕರು ರಸ್ತೆ ಅಗೆದು ಬಂದ್‌ ಮಾಡಿದ್ದಾರೆ. ಅಲ್ಲದೇ ಗ್ರಾಪಂ ಕುಡಿಯುವ ನೀರಿನ ಬೋರ್‌ವೆಲ್‌ ಬೀಗ ಹಾಕಿದ್ದರಿಂದ ಅಲ್ಲಾಪುರ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಆಗಿದೆ. ಶೀಘ್ರವೇ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುತ್ತದೆ. -ಶ್ರೀಕಾಂತ ತಾಂಡೂರ. ಅಧ್ಯಕ್ಷರು ಗ್ರಾಪಂ ಕೋಡ್ಲಿ.

ಅಲ್ಲಾಪೂರ ಗ್ರಾಮಕ್ಕೆ ಸಂಪರ್ಕಿಸುವ ಏಕೈಕ ರಸ್ತೆಯನ್ನು ಅಗೆದು ಬಂದ್‌ ಮಾಡಿದ್ದರಿಂದ ಶಾಲಾ ಮಕ್ಕಳು, ಜನರು ಬೇರೆ ಗ್ರಾಮಗಳಿಗೆ ನಡೆದುಕೊಂಡೆ ಹೋಗುವಂತಾಗಿದೆ. ಜಿಲ್ಲಾಧಿಕಾರಿಗಳು ಗಮನಹರಿಸಿ ಶಾಶ್ವತ ಪರಿಹಾರ ನೀಡಬೇಕು. -ಸಿದ್ದಯ್ಯ ಸ್ವಾಮಿ, ಗ್ರಾಪಂ ಸದಸ್ಯ.

Advertisement

Udayavani is now on Telegram. Click here to join our channel and stay updated with the latest news.

Next