ವಾಡಿ: ಹೊಲಗಳಿಗೆ ಹೋಗಲು ಸೂಕ್ತವಾದ ರಸ್ತೆಯಿಲ್ಲದ ಕಾರಣ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಹಾಣಾದಿಗಳನ್ನೇ ರಸ್ತೆಗಳನ್ನಾಗಿ ಪರಿವರ್ತಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಹಳಕರ್ಟಿ ಗ್ರಾಮದ ರೈತರು ಆಗ್ರಹಿಸಿದ್ದಾರೆ.
ಈ ಕುರಿತು ಅಖೀಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ನೇತೃತ್ವದಲ್ಲಿ ಸೋಮವಾರ ಹಳಕರ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ರೈತರು, ರಸ್ತೆಯಿಲ್ಲದೆ ಪ್ರತಿವರ್ಷ ಕೃಷಿ ಚಟುವಟಿಕೆ ನಡೆಸಲು ಆಗುತ್ತಿರುವ ಅನಾನುಕೂಲತೆಗಳನ್ನು ವಿವರಿಸಿದ್ದಾರೆ.
ಗ್ರಾಮದಲ್ಲಿರುವ ನಾವು ನೂರಾರು ಕುಟುಂಬಗಳು ಬೇಸಾಯವನ್ನೇ ನಂಬಿಕೊಂಡಿದ್ದೇವೆ. ಯಾವೂದೇ ಒಬ್ಬ ರೈತನಿಗೂ ಕೂಡ ತನ್ನ ಜಮೀನಿಗೆ ಹೋಗಲು ಸೂಕ್ತ ರಸ್ತೆ ಸೌಲಭ್ಯವಿಲ್ಲ. ಇರುವ ಹಾಣಾದಿಗಳು ಮುಳ್ಳುಕಂಟಿಗಳಿಂದ ಮುಚ್ಚಿ ಹೋಗಿವೆ. ಮಳೆಗಾಲದ ದಿನಗಳಲ್ಲಿ ಬಿತ್ತನೆ ಕಾರ್ಯ ಶುರುವಾಗುತ್ತದೆ. ಕೃಷಿ ಕಾಯಕ ಬಿರುಸುಗೊಳ್ಳುತ್ತದೆ. ಕೆಸರುಗದ್ದೆಯಂತಾದ ಜಮೀನುಗಳಿಗೆ ಹೋಗಿ ತಲುಪುವುದೇ ದೊಡ್ಡ ಸಾಹಸದ ಕೆಲಸವಾಗುತ್ತದೆ ಎಂದು ಗೋಳು ಹೇಳಿಕೊಂಡಿದ್ದಾರೆ.
ಜಾಲಿ ಮರಗಳಿಂದ ಕೂಡಿದ ಹಾಣಾದಿ ದಾರಿಗಳು ಎತ್ತಿನ ಬಂಡಿ ಸಾಗಲಿಸಲು ಸಾಧ್ಯವಾಗದಷ್ಟು ಹಾಳಾಗಿವೆ. ಅಕ್ಕಪಕ್ಕದ ಮುಳ್ಳು ಕಂಟಿ ಮರಗಳಿಂದ ಎತ್ತುಗಳ ದೇಹಕ್ಕೆ ಮತ್ತು ಕಣ್ಣಿಗೆ ಪರಚಿದ ಗಾಯಗಳಾಗುತ್ತಿವೆ. ಬಂಡಿಗಳು ಉರುಳಿಬಿದ್ದ ಪ್ರಸಂಗಗಳೂ ಘಟಿಸಿವೆ. ಕೆಲವು ಪ್ರಮುಖ ಹಾಣಾದಿಗಳನ್ನು ರಸ್ತೆಗಳನ್ನಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸಬೇಕು ಎಂದು ಅನೇಕ ಸಲ ಗ್ರಾಪಂಗೆ ಮನವಿ ಸಲ್ಲಿಸಿದ್ದೇವೆ. ಆದರೂ ಏನೂ ಪ್ರಯೋಜನವಾಗಿಲ್ಲ. ನಮ್ಮ ಗೋಳು ಯಾರೂ ಕೇಳುತ್ತಿಲ್ಲ ಎಂದು ಆರೋಪಿಸಿದರು.
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಹೊಲಗಳಿಗೆ ಹೋಗಲು ರಸ್ತೆಯ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಬೇಡಿಕೆ ಕಡೆಗಣಿಸಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಅಖೀಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ತಾಲೂಕು ಕಾರ್ಯದರ್ಶಿ ಶಿವುಕುಮಾರ ಆಂದೋಲಾ, ಹಳಕರ್ಟಿ ಗ್ರಾಮ ಘಟಕದ ಅಧ್ಯಕ್ಷ ಚೌಡಪ್ಪ ಗಂಜಿ, ಭೀಮಾಶಂಕರ ಮಾಟ್ನಳ್ಳಿ, ದೊಡ್ಡಪ್ಪ ಹೊಸೂರ ಸೇರಿದಂತೆ ಗ್ರಾಮದ ನೂರಾರು ರೈತರು ಪಾಲ್ಗೊಂಡಿದ್ದರು.