ಕಂಪ್ಲಿ: ಕಂಪ್ಲಿ-ಗಂಗಾವತಿ ಮುಖ್ಯರಸ್ತೆಗೆ ಇದೀಗ ಮುಕ್ತಿ ಸಿಕ್ಕಿದ್ದು, ರಸ್ತೆ ಅಭಿವೃದ್ಧಿ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಇನ್ನೇನು ಕೇವಲ ದೀಪಗಳ ಅಳವಡಿಕೆ ಮಾತ್ರ ಬಾಕಿ ಉಳಿದಿದ್ದು ಸಾರ್ವಜನಿಕರಿಗೆ ನೆಮ್ಮದಿ ತಂದಿದೆ.
ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜೋಗಿ ಕಾಲುವೆವರೆಗಿನ ಕಂಪ್ಲಿ-ಗಂಗಾವತಿ ಮುಖ್ಯರಸ್ತೆಯನ್ನು 4.20 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಮಾಜಿ ಹಾಗೂ ಹಾಲಿ ಶಾಸಕರು ಭೂಮಿಪೂಜೆ ನೆರವೇರಿಸಿದ್ದರು.
ಆದರೆ ರಸ್ತೆ ಬದಿಯ ಜಮೀನಿನ ಮಾಲೀಕರು, ರಸ್ತೆಗಾಗಿ ವಶಪಡಿಸಿಕೊಂಡ ಜಮೀನು ಬೇರೆ, ರಸ್ತೆ ನಿರ್ಮಾಣ ಮಾಡುತ್ತಿರುವ ಜಮೀನು ಬೇರೆ ಎಂದು ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ ಹಲವಾರು ಬಾರಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದರೂ ಒಂದಿಲ್ಲೊಂದು ಕಾರಣಕ್ಕೆ ರಸ್ತೆ ಅಭಿವೃದ್ಧಿಗೆ ಅಡಚಣೆ ಉಂಟಾಗುತ್ತಿತ್ತು. ಆದರೆ ಪುರಸಭೆ ಮುಖ್ಯಾಧಿಕಾರಿ ಎನ್. ಶಿವಲಿಂಗಪ್ಪ ಮತ್ತು ಆಡಳಿತ ಮಂಡಳಿ ಸದಸ್ಯರು ಭೂಮಿ ಮಾಲೀಕರನ್ನು ಮನವೊಲಿಸಿ, ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ನ್ಯಾಯಾಲಯದ ಪ್ರಕರಣ ಇತ್ಯರ್ಥಪಡಿಸಿ ರಸ್ತೆ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಂಡಿದ್ದರು.
ಅಂತೆಯೇ ಇದೀಗ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆ ಮಧ್ಯೆ ದೀಪಗಳನ್ನು ಅಳವಡಿಸುವುದೊಂದೆ ಬಾಕಿ ಇದ್ದು ಆದಷ್ಟು ಶೀಘ್ರವಾಗಿ ದೀಪಗಳನ್ನು ಅಳವಡಿಸಿ ರಸ್ತೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಜನತೆಯ ಬಹುದಿನಗಳ ಕನಸಾಗಿದ್ದ ಕಂಪ್ಲಿ-ಗಂಗಾವತಿ ಮುಖ್ಯರಸ್ತೆ ಸಮಸ್ಯೆ ಇತ್ಯರ್ಥವಾಗಿದ್ದು ಶೀಘ್ರವಾಗಿ ಸಂಚಾರಕ್ಕೆ ಮುಕ್ತವಾಗಲಿದೆ. ಪಟ್ಟಣದಲ್ಲಿ ಸುಂದರ ರಸ್ತೆ ಗಮನ ಸೆಳೆಯಲಿದೆ.
-ಎನ್.ಶಿವಲಿಂಗಪ್ಪ, ಮುಖ್ಯಾಧಿಕಾರಿ