Advertisement

ಎಲ್ಲೆಂದರಲ್ಲಿ ತ್ಯಾಜ್ಯ ಸುರಿದರೆ ಜೈಲುವಾಸ ಕಾಯಂ

01:57 PM Feb 23, 2021 | Team Udayavani |

ಮೈಸೂರು: ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಗೂ ತ್ಯಾಜ್ಯವನ್ನು ಸುರಿದರೆ, ಅವರನ್ನು ಪತ್ತೆ ಹಚ್ಚಿ ಕ್ರಿಮಿನಲ್‌ ಮೊಕದ್ದಮೆ ಹೂಡಿ ದಂಡದ ಜತೆಗೆ ಜೈಲಿಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಎಚ್ಚರಿಕೆ ನೀಡಿದರು.

Advertisement

ನಗರದ ಹೊರ ವರ್ತುಲ ರಸ್ತೆಯ ರವೀಂದ್ರನಾಥ್‌ ಟಾಗೂರ್‌ ನಗರದ ಬಳಿ ಇರುವ ಮಾರಮ್ಮನ ದೇವ ಸ್ಥಾನದ ಮುಂಭಾಗ 120 ಕೋಟಿ ರೂ. ವೆಚ್ಚದ ಹೊರವರ್ತುಲ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಹೊರ ವರ್ತುಲ ರಸ್ತೆಯಲ್ಲಿ ಬಿದ್ದಿದ್ದ ಕಟ್ಟಡ ತ್ಯಾಜ್ಯಗಳನ್ನು (ಡೆಬ್ರಿಸ್‌ ) ಈಗಾಗಲೇ ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. ಇದಲ್ಲದೆ ಹುಣಸೂರು, ನಂಜನಗೂಡು, ಬೆಂಗಳೂರು ಮಾರ್ಗದ ಅಕ್ಕಪಕ್ಕದಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿದೆ. ಇನ್ನು ಮುಂದೆ ಎಲ್ಲೆಂದರಲ್ಲಿ ಯಾರೇ ಆಗಿದ್ದರೂ ತ್ಯಾಜ್ಯ ಸುರಿದರೆ ಅವರನ್ನು ಪತ್ತೆ ಹಚ್ಚಿ ಕ್ರಿಮಿನಲ್‌ ಮೊಕದ್ದಮೆ ಹೂಡಿ ದಂಡದ ಜತೆಗೆ ಜೈಲಿಗೆ ಕಳುಹಿಸಲಾಗುವುದು.ಮಾಲೀಕರ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗುವುದು. ಕಸ ತಂದು ಹಾಕುವ ವಾಹನ ಮಾಲೀಕರು ಸಹ ಕಾರಾಗೃಹ ವಾಸ ಅನುಭವಿಸಬೇಕಾಗುತ್ತದೆ. ಡೆಬ್ರಿಸ್‌ ಸ್ವತ್ಛತಾ ಕಾರ್ಯ ಪೂರ್ಣಗೊಂಡಿದೆ. ಒಂದು ವೇಳೆ ಮತ್ತೆ ಯಾರಾದರೂ ಡಬ್ರೀಸ್‌ ಹಾಕಿದರೆ ಜೈಲುವಾಸ ಕಾಯಂ ಆಗಲಿದೆ. ಮುಡಾದವರು ತೋರಿಸಿದ ಜಾಗದಲ್ಲಿ ಹಾಕಬೇಕು. ಅದು ಬಿಟ್ಟು ಎಲ್ಲಾ ಕಡೆ ಈ ಮೊದಲಿನಂತೆ ಹಾಕಲು ಹೋದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಗರದ 43 ಕಿ.ಮೀ.ರಿಂಗ್‌ ರಸ್ತೆಗೆ ಡಾಂಬರೀಕರಣ ಮಾಡಲು ಚಾಲನೆ ನೀಡಲಾಗಿದೆ. ಈಗಾಗಲೇ ವಿದ್ಯುತ್‌ ದೀಪಗಳು ಉರಿಯುವಂತೆ ಮಾಡಿದ್ದು, ಪ್ರಮುಖ ಸರ್ಕಲ್‌ಗ‌ಳಲ್ಲಿ ಹೈಮಾಸ್ಕ್ ದೀಪಗಳನ್ನು ಅಳವಡಿಸಲಾಗಿದೆ. ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಮತ್ತು ರಸ್ತೆಗಳಲ್ಲಿ ಹಳ್ಳಕೊಳ್ಳಗಳು ಬಿದ್ದಿರುವುದರಿಂದ ಡಾಂಬರೀಕರಣ ಮಾಡಲಾಗುತ್ತದೆ ಎಂದರು.

ಪಂಚಮಸಾಲಿ ಹೋರಾಟಕ್ಕೆ ಸಂಬಂಧಪಟ್ಟಂತೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳುಈ ಸಂಬಂಧ ತೀರ್ಮಾನ ತೆಗೆದುಕೊಳ್ಳುತ್ತಾರೆ.ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬಗ್ಗೆ ಸಂಪುಟ ಸಭೆಯಲ್ಲೂ ಸಹ ಒಂದು ಮಟ್ಟದ ಚರ್ಚೆಗಳೂ ಆಗಿವೆ ಎಂದು ತಿಳಿಸಿದರು. ಸಂಸದ ಪ್ರತಾಪ್‌ ಸಿಂಹ, ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

ಚಿತ್ರದುರ್ಗ ಮಾದರಿ ಎಪಿಎಂಸಿ :

ಚಿತ್ರದುರ್ಗದಲ್ಲಿ ಎಪಿಎಂಸಿ ಮಾದರಿಯಲ್ಲಿ ಖಾಸಗಿ ಮಾರುಕಟ್ಟೆ ನಿರ್ಮಾಣವಾಗುವ ಬಗ್ಗೆ ತಾನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ಈ ಮಾರುಕಟ್ಟೆ ಸುಮಾರು 100 ಎಕರೆ ವಿಸ್ತೀರ್ಣದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಇಂತಹ ಬೆಳವಣಿಗೆಗಳು ಆಗಬೇಕು. ರೈತರಿಗೆ ಉತ್ತಮ ಬೆಲೆ ಸಿಗಬೇಕು. ಈ ನಿಟ್ಟಿನಲ್ಲಿ ಪೈಪೋಟಿ ಎದುರಾದರೆ ತಪ್ಪೇನಿಲ್ಲ. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ನಾನು ಸಹ ಚಿತ್ರದುರ್ಗಕ್ಕೆ ಹೋದಾಗ ಆ ಯೋಜನೆ ಬಗ್ಗೆ ಪರಿಶೀಲಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next