Advertisement

6 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ

03:04 PM Sep 13, 2022 | Team Udayavani |

ಕುಣಿಗಲ್‌: ಎರಡು ದಶಕಗಳಿಂದ ಡಾಂಬರೀಕರಣ ಕಾಣದ ತಾಲೂಕಿನ ಗಡಿಭಾಗ ಸುಗ್ಗನಹಳ್ಳಿ ಯಿಂದ ಕೊಡವತ್ತಿ ಹಾಗೂ ಕೆಶಿಪ್‌ ರಸ್ತೆಯಿಂದ ತೊರೆಬೊಮ್ಮನ ಹಳ್ಳಿ ವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಾ.ಎಚ್‌.ಡಿ.ರಂಗನಾಥ್‌ ಭೂಮಿಪೂಜೆ ನೆರವೇರಿಸುವ ಮೂಲಕ ಈ ಭಾಗದ ಜನರ ಬಹು ದಿನಗಳ ರಸ್ತೆ ಡಾಂಬರೀಕರಣ ಕನಸು ನೆರವೇರಿತು.

Advertisement

ತಾಲೂಕಿನ ಹುಲಿಯೂರುದುರ್ಗ ಹೋಬಳಿ ಕುಣಿಗಲ್‌ ಹಾಗೂ ಮದ್ದೂರು ತಾಲೂಕು ಗಡಿಭಾಗದಲ್ಲಿ ಇರುವ ಸುಗ್ಗನಹಳ್ಳಿಯಿಂದ ಕೊಡವತ್ತಿ ಹಾಗೂ ಕೆಶಿಪ್‌ ರಸ್ತೆಯಿಂದ ತೊರೆಬೊಮ್ಮನಹಳ್ಳಿ ವರೆಗೆ ಸಮರ್ಪಕವಾಗಿ ರಸ್ತೆ ಇಲ್ಲದೇ ಇಲ್ಲಿನ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದರು. ಇದನ್ನು ಮನಗೊಂಡ ಶಾಸಕರು, ಹೇಮಾವತಿ ಇಲಾಖೆಯಿಂದ 6 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಕೊನೆಗೂ ರಸ್ತೆಗೆ ಮುಕ್ತಿ ಸಿಕ್ಕಿದ್ದು, ಮೂರು ಗ್ರಾಮದ ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲದಂತ್ತಾಗಿದೆ.

ಗ್ರಾಮಸ್ಥರಿಗೆ ತೊಂದರೆ: ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಡಾ.ಎಚ್‌.ಡಿ. ರಂಗನಾಥ್‌, ಗ್ರಾಮದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುವನೇ ನಿಜವಾದ ಜನಪ್ರತಿ ನಿಧಿಯಾಗಿರುತ್ತಾನೆ. ಈ ಭಾಗದ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಯಾಗಿ 20 ವರ್ಷ ಕಳೆದಿದೆ. ಆದರೆ ಈ ರಸ್ತೆ ಹಾಳಾಗಿ ವಾಹನ, ಎತ್ತಿನಗಾಡಿಗಳ ಸಂಚಾರಕ್ಕೆ ತೊಂದರೆ ಉಂಟಾಗಿದ್ದಲ್ಲದೇ, ಗ್ರಾಮಸ್ಥರು ತಮ್ಮ ಊರಿನಿಂದ ಡೇರಿಗೆ ಹಾಲು ಸರಬರಾಜು ಮಾಡಲು ತೊಂದರೆ ಉಂಟಾಗಿದೆ ಎಂದು ನನಗೆ ತಿಳಿಸಿದ್ದರು.

ಅನುಕೂಲ ಕಲ್ಪಿಸಿ: ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ ಹೇಮಾವತಿ ಇಲಾಖೆ ಅನುದಾನದಲ್ಲಿ ಆರು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕೂಡಲೇ ಕಾಮಗಾರಿ ಪ್ರಾರಂಭಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಮಾವತಿ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮಗಳ ನಿರ್ಲಕ್ಷ್ಯ: ಸರ್ಕಾರದ ಬೊಕ್ಕಸಕ್ಕೆ ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ತೆರಿಗೆ ರವಾನಿ ಯಾಗುತ್ತಿದೆ. ಈ ತೆರಿಗೆ ಹಣವನ್ನು ಬೆಂಗಳೂರಿನ ಅಭಿವೃದ್ಧಿಗೆ ಬಳಸಿಕೊಂಡು ಗ್ರಾಮೀಣ ಪ್ರದೇಶದ ಅಭಿವೃದ್ಧಿಯನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಗ್ರಾಮಸ್ಥರಿಗೆ ಊಟ ಬಡಿಸಿದ ಶಾಸಕ: ಕೊಡವತ್ತಿ ಗ್ರಾಮದಲ್ಲಿ ಕೈಗೊಂಡ ರಸ್ತೆ ಕಾಮಗಾರಿ ವೇಳೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಮುಗಿಯುತ್ತಿದಂತೆ ಊಟಕ್ಕೆ ಸಾಲಾಗಿ ಕುಳಿತ್ತಿದ್ದ ಗ್ರಾಮಸ್ಥರಿಗೆ ಸ್ವತಃ ಶಾಸಕರೇ ಊಟ ಬಡಿಸಿ ಗ್ರಾಮಸ್ಥರೊಂದಿಗೆ ಸಂತಸ ಹಂಚಿಕೊಂಡರು.

ಹೇಮಾವತಿ ಎಇಇ ಮುರುಳಿ, ಎಇ ಜಯರಾಜು, ತಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಗ್ರಾಪಂ ಸದಸ್ಯ ಬಾ.ನ.ರವಿ ಮತ್ತಿತರರು ಇದ್ದರು.

ಸಮಿಶ್ರ ಸರ್ಕಾರವು ತಾಲೂಕಿನ ರಸ್ತೆ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸ ಗಳಿಗೆ ಮಂಜೂರು ಮಾಡಿದ ನೂರಾರು ಕೋಟಿ ರೂ.ಬಿಜೆಪಿ ಹಿಂಪಡೆದ ಕಾರಣ ರಸ್ತೆ ಕಾಮಗಾರಿಗೆ ಹಿನ್ನಡೆ ಆಗಿದೆ. ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಿ ಅನುದಾನ ಮಂಜೂರು ಮಾಡಿಸಿ ಕಾಮಗಾರಿಯನ್ನು ಹಂತ ಹಂತವಾಗಿ ಎಲ್ಲಾ ಗ್ರಾಮಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಡಾ.ಎಚ್‌.ಡಿ.ರಂಗನಾಥ್‌, ಶಾಸಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next