ವಾಡಿ: ಮುಖ್ಯ ರಸ್ತೆ ಅಭಿವೃದ್ಧಿ ನೆಪದಲ್ಲಿ ಕಳೆದೊಂದು ತಿಂಗಳಿಂದ ಪಟ್ಟಣಕ್ಕೆ ಬಸ್ ಪ್ರವೇಶ ನಿಷೇಧಿಸಲಾಗಿದ್ದು, ಜನಾಕ್ರೋಶ ಭುಗಿಲೆದ್ದಿದೆ.
ಅತ್ತ ರಸ್ತೆ ಅಭಿವೃದ್ಧಿಯೂ ನಡೆಯುತ್ತಿಲ್ಲ. ಇತ್ತ ಬಸ್ ಸಂಚಾರವೂ ಇಲ್ಲ. ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಪುರಸಭೆಯ ಜನಪ್ರತಿನಿಧಿಗಳ ಬೇಜವಾಬ್ದಾರಿ ಧೋರಣೆಯಿಂದ ಸ್ಥಳೀಯರು ಪರದಾಡುವಂತಾಗಿದೆ.
ಪಟ್ಟಣದ ಶ್ರೀನಿವಾಸ ಗುಡಿ ವೃತ್ತದಿಂದ ರೆಸ್ಟ್‌ಕ್ಯಾಂಪ್ ತಾಂಡಾ ಮೇಲ್ಸೇತುವೆ ವರೆಗಿನ ಪ್ರಮುಖ ರಸ್ತೆ ಅಭಿವೃದ್ಧಿಪಡಿಸಿ ಪುಟ್‌ಪಾತ್ ಹಾಗೂ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯಕ್ಕೆ ಮಂಜೂರಾದ ಐದು ಕೋಟಿ ರೂ. ಅನುದಾನದ ಸದ್ಬಳಕೆ ದೃಷ್ಟಿಯಿಂದ ಚಾಲನೆ ನೀಡಲಾಗಿದ್ದ ಸಿಸಿ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿದೆ. ಇದೇ ನೆಪ ಮುಂದಿಟ್ಟುಕೊಂಡು ನಗರ ಪ್ರವೇಶಿಸುತ್ತಿದ್ದ 40ಕ್ಕೂ ಹೆಚ್ಚು ಬಸ್‌ಗಳ ಸಂಚಾರ ನಿಷೇಧಿಸಿ ತಿಂಗಳುಗಳೇ ಉರುಳಿವೆ.
ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಕೇಂದ್ರಗಳಿಗೆ ಪ್ರಯಾಣ ಬೆಳೆಸುವ ಸ್ಥಳೀಯ ಪ್ರಯಾಣಿಕರು ನಗರ ಹೊರವಲಯದ ಎರಡು ಕಿ.ಮೀ ದೂರದ ಬಳಿರಾಮ ಚೌಕ್‌ಗೆ ಹೋಗಬೇಕಾಗಿದೆ. ಅದೇ ರೀತಿ ಕಲಬುರಗಿ ನಗರದಿಂದ ವಾಡಿ ಪಟ್ಟಣಕ್ಕೆ ಬರುವವರು ನಾಲ್ಕು ಕಿ.ಮೀ ಅಂತರದ ರಾವೂರು ಗ್ರಾಮದಲ್ಲಿ ಇಳಿದು ಆಟೋ-ಲಾರಿ ಹತ್ತಿ ಬರಬೇಕಾದ ಸಂಕಷ್ಟ ಎದುರಾಗಿದೆ.
Related Articles
ಸಾರಿಗೆ ಸೌಲಭ್ಯ ಸ್ಥಗಿತಗೊಳಿಸಿ ನೆಮ್ಮದಿ ಕಸಿದುಕೊಂಡ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳಿಗೆ ಜನರು ಶಾಪ ಹಾಕುತ್ತಿದ್ದಾರೆ. ಮುಖ್ಯರಸ್ತೆ ಹದಗೆಡುವ ಮೊದಲೇ ಮತ್ತೊಮ್ಮೆ ರಸ್ತೆ ಮಂಜೂರಾಗಿರುವುದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ರಸ್ತೆ ಎತ್ತರದಿಂದ ಬಡಾವಣೆ ಮನೆಗಳು ತಗ್ಗಿಗೆ ಜಾರಿವೆ. ಮಳೆಗಾಲದಲ್ಲಿ ಜಲಾವೃತಕ್ಕೆ ತುತ್ತಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಇಂಥಹದ್ದರಲ್ಲಿ ಎತ್ತರದ ರಸ್ತೆಯನ್ನೇ ಮತ್ತಷ್ಟು ಎತ್ತರಕ್ಕೆ ಏರಿಸಿ ಅಭಿವೃದ್ಧಿ ಮಾಡಲಾಗುತ್ತಿರುವ ಐದು ಕೋಟಿ ರೂ. ವೆಚ್ಚದ ರಸ್ತೆ ಜನರಿಗೆ ದಿಗಿಲು ಮೂಡಿಸಿದೆ. ಮೂರಿಂಚು ಡಾಂಬರ್ ಹಾಕಿ ರಸ್ತೆ ಅಭಿವೃದ್ಧಿ ಮಾಡಿದ್ದರೆ ಯಾರಿಗೂ ತೊಂದರೆಯಿರಲಿಲ್ಲ.
ಇನ್ನೊಂದೆಡೆ ಜನರ ಅಸಮಾಧಾನದ ನಡುವೆಯೂ ಭರದಿಂದ ಸಾಗಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಏಕಾಏಕಿ ಸ್ಥಗಿತವಾಗಿದೆ. ರಸ್ತೆಯುದ್ದಕ್ಕೂ ಹಾಕಲಾಗಿರುವ ಜಲ್ಲಿಕಲ್ಲುಗಳ ರಾಶಿ ಸಣ್ಣ ವಾಹನಗಳ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಕಾಮಗಾರಿ ಸ್ಥಗಿತವಾದರೂ ಬಸ್ ಸಂಚಾರ ಆರಂಭವಾಗಿಲ್ಲ. ಸಿಮೆಂಟ್ ಲಾರಿಗಳ ಸಂಚಾರಕ್ಕೇನೂ ನಿರ್ಬಂಧವಿಲ್ಲ. ಅಧಿಕಾರಿಗಳ ಇಂತಹ ಚೆಲ್ಲಾಟದ ಧೋರಣೆಯಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಬಸ್ ಸಂಚಾರ ಸ್ಥಗಿತವಾಗಿ ತಿಂಗಳು ಕಳೆದಿದೆ. ಪ್ರಯಾಣಿಕರನ್ನು ತುಂಬಿಕೊಂಡು ಬರುವ ಯಾದಗಿರಿ-ಕಲಬುರಗಿ ಬಸ್‌ಗಳು ಬೈಪಾಸ್ ರಸ್ತೆಯಿಂದ ಸಾಗುತ್ತಿವೆ. ಬಸ್ ಚಾಲಕರಿಗೆ ಇದೊಂದೇ ನೆಪ ಸಾಕಿತ್ತು. ಪರಿಣಾಮ ಈಗ ಯಾವ ಬಸ್ ಕೂಡ ನಗರದೊಳಗೆ ಬರುತ್ತಿಲ್ಲ. ಇದರಿಂದ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಲಾರಿಗಳಿಗೆ ಓಡಾಡಲು ಅವಕಾಶ ನೀಡಿ ಬಸ್ ಸಂಚಾರ ಸ್ಥಗಿತಗೊಳಿಸಿರುವುದು ಸರಿಯಲ್ಲ. –ಸತೀಶ ಸಾವಳಗಿ, ಸ್ಥಳೀಯ ಯುವ ಮುಖಂಡ
ಸೋಮವಾರದಿಂದ ಕಾಮಗಾರಿ ಪುನಃ ಶುರುವಾಗಲಿದೆ. ನಗರದೊಳಕ್ಕೆ ಬಸ್ ಸಂಚಾರ ಆರಂಭಿಸುವಂತೆ ಶೀಘ್ರ ಸಾರಿಗೆ ಸಂಸ್ಥೆಗೆ ಪತ್ರ ರವಾನಿಸುತ್ತೇವೆ. ಕೆಲವೇ ದಿನಗಳಲ್ಲಿ ಬಸ್ ಸಂಚಾರ ಶುರುವಾಗಲಿದೆ. –ಮರೆಪ್ಪ, ಅಭಿಯಂತರ, ಪಿಡಬ್ಲ್ಯೂಡಿ
–ಮಡಿವಾಳಪ್ಪ ಹೇರೂರ