ಕೆ.ಆರ್.ನಗರ: ಕೇಂದ್ರ ರಸ್ತೆ ನಿಧಿ ಯೋಜನೆಯಡಿ ಕೆ.ಆರ್.ನಗರ ತಾಲೂಕಿನಲ್ಲಿ 8.50 ಕೋಟಿ ರೂ.ಅಂದಾಜು ವೆಚ್ಚದಲ್ಲಿ ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು.
ಕೆ.ಆರ್.ನಗರ ತಾಲೂಕಿನ ಮುದ್ದನಹಳ್ಳಿ ಗ್ರಾಮದಲ್ಲಿ ಗುರುವಾರ ಸಿಆರ್‌ಎಫ್ ಯೋಜನೆಯಡಿ 5.50ಕೋಟಿ ರೂ.ವೆಚ್ಚದಲ್ಲಿ ನಿಜಗನಹಳ್ಳಿ-ಹೊಸಕೋಟೆ ಕೊಪ್ಪಲು-ಮುದ್ದನಹಳ್ಳಿವರೆಗೆ ಒಟ್ಟು 6ಕಿ.ಮೀ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸಂಸದ ಸಿ.ಎಸ್.ಪುಟ್ಟರಾಜು ಅವರ ಮೇಲೆ ಒತ್ತಡ ಹೇರಿದ ಪರಿಣಾಮ ಕೇಂದ್ರ ರಸ್ತೆ ನಿಧಿಯಡಿ ಈ ರಸ್ತೆ ಅಭಿವೃದ್ಧಿಗೊಳ್ಳುತ್ತಿದೆ. ಇದೇ ಯೋಜನೆಯಡಿ 3 ಕೋಟಿ ರೂ ವೆಚ್ಚದಲ್ಲಿ ಕೆ.ಆರ್.ಪೇಟೆ ರಸ್ತೆಯಿಂದ ಹರಂಬಳ್ಳಿ ಕೊಪ್ಪಲು ಗ್ರಾಮದವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ಈ ಯೋಜನೆಯಡಿ ಒಟ್ಟು ತಾಲೂಕಿನ ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡಿಸಲು 40 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ದೊರೆತಿದ್ದು 8.50 ಕೋಟಿ ಎಂದ ಅವರು ತಾಲೂಕಿನಲ್ಲಿ ಹಾದು ಹೋಗಿರುವ ರಾಜ್ಯಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು ಸೇರಿದಂತೆ ಈಗಾಗಲೇ ಕ್ಷೇತ್ರದ ಬಹುತೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಉಳಿದ ರಸ್ತೆಗಳನ್ನೂ ಹಂತಹಂತವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಜಿಪಂ ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಜಿಪಂ ಸದಸ್ಯೆ ವೀಣಾಕೀರ್ತಿ, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ಟಿ.ಸೋಮಶೇಖರ್, ಎಪಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ಕುಪ್ಪೆ ಗ್ರಾಪಂ ಉಪಾಧ್ಯಕ್ಷ ನವೀನ್, ಮಾಜಿ ಅಧ್ಯಕ್ಷ ತಿಮ್ಮೇಗೌಡ, ಸದಸ್ಯರಾದ ರಾಜೇಗೌಡ, ಪ್ರಭಾಕರ್, ಅಶೋಕ್, ಪಾರ್ಥ, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಎಇಇ ಗೋವಿಂದರಾಜು, ಎಇ ಯೋಗಾನಂದ್, ಯುವ ಜೆಡಿಎಸ್ ಕಾರ್ಯಾಧ್ಯಕ್ಷ ಮಿರ್ಲೆಕಿಶೋರ್, ಪ್ರಧಾನ ಕಾರ್ಯದರ್ಶಿ ಕೆಗ್ಗೆರೆ ಕುಚೇಲ, ಮುಖಂಡ ಹಳಿಯೂರುಜಗದೀಶ್, ಪಿಡಿಒ ನಾಗೇಗೌಡ, ಬಿಲ್ ಕಲೆಕ್ಟರ್ ರಾಮೇಗೌಡ, ಗುತ್ತಿಗೆದಾರ ಶೀಗವಾಳುನಾಗೇಶ್ ಇದ್ದರು.
ನಾನು ಶಾಸಕನಾದ ಬಳಿಕ ಕ್ಷೇತ್ರದಲ್ಲಿ ರಸ್ತೆ, ಶುದ್ಧ ಕುಡಿಯುವ ನೀರು, ಸಮುದಾಯ ಭವನಗಳು, ಎಸ್‌ಸಿ, ಎಸ್‌ಟಿ ಸಮುದಾಯ ವಾಸಿಸುತ್ತಿರುವ ಬೀದಿಗಳಲ್ಲಿ ಚರಂಡಿ ಮತ್ತು ಸಿಮೆಂಟ್ ರಸ್ತೆ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅಲ್ಲದೆ, ಶಾಲಾ ಕಾಲೇಜುಗಳ ಅಭಿವೃದ್ಧಿ ಸೇರಿದಂತೆ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತು ನೀಡಿದ್ದೇನೆ.
-ಸಾ.ರಾ.ಮಹೇಶ್, ಶಾಸಕ