Advertisement

ಆಡಳಿತಕ್ಕೆ ಕಾಣದೇ ಹದಗೆಟ್ಟ ರಂಗಮಂದಿರ ರಸ್ತೆ?‌

04:33 PM Sep 22, 2022 | Team Udayavani |

ರಾಯಚೂರು: ನಿತ್ಯ ನೂರಾರು ಜನ ಆಗಮಿಸುವ ನಗರದ ಪ್ರಮುಖ ಕೇಂದ್ರ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದ ಮುಂಭಾಗದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಕೇಳೊರಿಲ್ಲದಂತಾಗಿದೆ.

Advertisement

ಮಳೆ ಬಂದರೆ ಇಡೀ ವಾತಾವರಣ ಕೆಸರುಮಯವಾಗುತ್ತದೆ. ನಗರದಲ್ಲಿ ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮ ನಡೆದರೂ ಅದು ಈ ರಂಗಮಂದಿರದಲ್ಲಿಯೇ. ಸರ್ಕಾರಿ ಕಾರ್ಯಕ್ರಮಗಳು, ಮಹನೀಯರ ಜಯಂತಿಗಳು ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲಿ ನಡೆಯುತ್ತವೆ. ಇಂಥ ಕಾರ್ಯಕ್ರಮಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ಕೇವಲ ಜನರು ಮಾತ್ರವಲ್ಲ ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರು, ಶಾಸಕರಿಂದ ಹಿಡಿದು ನಗರಸಭೆ ಸದಸ್ಯರವರೆಗೆ ಎಲ್ಲರೂ ಬಂದು ಹೋಗುತ್ತಾರೆ. ಆದರೆ, ಇಲ್ಲಿನ ಅವ್ಯವಸ್ಥೆ ಬಗ್ಗೆ ಮಾತ್ರ ಜಿಲ್ಲಾಡಳಿತಕ್ಕಾಗಲಿ, ನಗರಾಡಳಿತಕ್ಕಾಗಲಿ ಕಾಣದಿರುವುದು ವಿಪರ್ಯಾಸ.

ಇಲ್ಲಿನ ರಸ್ತೆ ಸಂಪೂರ್ಣ ಹಾಳಾಗಿ ತಗ್ಗು ದಿನ್ನೆಗಳಿಂದ ಕೂಡಿದೆ. ಸ್ವಲ್ಪ ಮಳೆ ಬಂದರೂ ನೀರು ಶೇಖರಣೆಯಾಗುತ್ತದೆ. ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಸ್ವತ್ಛಗೊಳಿಸಿಲ್ಲ. ಚರಂಡಿಯಲ್ಲಿ ಹೂಳು ತುಂಬಿ ಮುಚ್ಚಿಕೊಂಡು ಹೋಗಿದೆ. ಮುಂದಿನ ಉದ್ಯಾನವನದ ಕಾಂಪೌಂಡ್‌ಗೆ ಹೊಂದಿಕೊಂಡು ಫುಟ್‌ಪಾತ್‌ ನಿರ್ಮಿಸಿದ್ದು, ಬಿಟ್ಟರೆ ಯಾವುದೇ ಡಾಂಬರೀಕರಣವಾಗಲಿ, ಮರಂ ಹಾಕಿ ಸಮತಟ್ಟು ಮಾಡುವುದಾಗಲಿ ಮಾಡಿಲ್ಲ. ರಂಗಮಂದಿರ ನಗರದ ಹೃದಯ ಭಾಗ ಮಾತ್ರವಲ್ಲದೇ, ಕೇಂದ್ರ ಬಿಂದುವಾಗಿದೆ.

ನಗರದಲ್ಲಿ ನಡೆಯುವ ಬಹುತೇಕ ಪ್ರಮುಖ ಕಾರ್ಯಕ್ರಮಗಳಿಗೆ ಇದೇ ಮುಖ್ಯ ವೇದಿಕೆ. ಗಣ್ಯಾತಿಗಣ್ಯರು, ಪ್ರಭಾವಿಗಳು, ಸಚಿವರು ಸೇರಿದಂತೆ ದೊಡ್ಡ-ದೊಡ್ಡ ವ್ಯಕ್ತಿಗಳು ಬರುತ್ತಾರೆ. ಅದರ ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಕೂಡ ಇದೇ ಕಟ್ಟಡದಲ್ಲಿದೆ. ಇಷ್ಟೆಲ್ಲ ಇದ್ದಾಗ್ಯೂ ಕನಿಷ್ಠ ಮೂಲ ಸೌಲಭ್ಯಗಳು ಇಲ್ಲದಿರುವುದು ಆಡಳಿತದ ವೈಫಲ್ಯ ಎತ್ತಿ ತೋರುತ್ತದೆ. ಮುಖ್ಯರಸ್ತೆ ಮಾರ್ಪಟ್ಟಿದೆ: ಇದು ಕೇವಲ ರಂಗಮಂದಿರಕ್ಕೆ ಮಾತ್ರ ಸಂಪರ್ಕ ಕಲ್ಪಿಸದೆ ಬೇರೆ ಕಡೆ ಓಡಾಡುವ ಮುಖ್ಯರಸ್ತೆಯಾಗಿ ಮಾರ್ಪಟ್ಟಿದೆ.

ರಂಗಮಂದಿರ ಮುಂಭಾಗದಿಂದಲೇ ಕನ್ನಡ ಭವನ, ಗ್ರಂಥಾಲಯ ಸೇರಿದಂತೆ ವಿವಿಧೆಡೆ ಓಡಾಡುತ್ತಾರೆ. ರಂಗಮಂದಿರ ಹಿಂಭಾಗ ಸಿಸಿ ರಸ್ತೆ ಮಾಡಿದ್ದರೂ ಅದನ್ನು ಬಹುತೇಕರು ಬಳಕೆ ಮಾಡುತ್ತಿಲ್ಲ. ವಾಹನಗಳ ಓಡಾಟ ಹೆಚ್ಚಾಗಿರುವ ಕಾರಣ ಈ ರಸ್ತೆ ಕೂಡ ಸಂಪೂರ್ಣ ಹಾಳಾಗಿದ್ದು, ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿದೆ.

Advertisement

ರಂಗಮಂದಿರ ಮುಂಭಾಗದ ರಸ್ತೆ ದುರಸ್ತಿಗಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕ್ರಿಯಾಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸುವ ಭರವಸೆ ನೀಡಿದ್ದಾರೆ. ಗ್ರಂಥಾಲಯ, ಕನ್ನಡ ಭವನ ಸೇರಿದಂತೆ ವಿವಿಧೆಡೆ ಓಡಾಡುವವರು ಇದೇ ರಸ್ತೆ ಬಳಸುತ್ತಿದ್ದಾರೆ. ಕಾಂಪೌಂಡ್‌ ನಿರ್ಮಿಸುವ ಮೂಲಕ ಅದಕ್ಕೆ ಕಡಿವಾಣ ಹಾಕುವ ಕುರಿತು ತಿಳಿಸಲಾಗಿದೆ. ಮಂಗಳಾ ನಾಯಕ, ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next