Advertisement

ಅಧಿಕ ಭಾರದ ವಾಹನಗಳ ಓಡಾಟದಿಂದ ರಸ್ತೆ ಕುಸಿತ

05:10 AM Jul 22, 2017 | |

ಕೋಟ: ಅಧಿಕ ಭಾರದ ಸರಕು ಸಾಗಾಟ ನಡೆಸುವ‌ ವಾಹನಗಳ ಓಡಾಟದಿಂದ ಕೋಟ-ಗೋಳಿಯಂಗಡಿ ಜಿಲ್ಲಾ ಮುಖ್ಯ ರಸ್ತೆಯ ಉಪ್ಲಾಡಿಯಲ್ಲಿ ಶುಕ್ರವಾರ ರಸ್ತೆ ಕುಸಿತ ಉಂಟಾಗಿದೆ.

Advertisement

ರಸ್ತೆಯ ಮಧ್ಯ ಭಾಗದಲ್ಲಿ ಆಳವಾದ‌ ಕಂದಕ ಸೃಷ್ಟಿಯಾಗಿದ್ದು ಲಾರಿ, ಬಸ್ಸು ಮುಂತಾದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಇದೀಗ  ಕುಸಿದ ಭಾಗಕ್ಕೆ  ತಾತ್ಕಾಲಿಕ ಕಾಮಗಾರಿ ನಡೆಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲು ಮುಂದಾಗಲಾಗಿದೆ.

ಈ ಮೊದಲು ಕಿರುಸೇತುವೆ ಕುಸಿತ
ಭಾರದ ವಾಹನಗಳ ಓಡಾಟದಿಂದ ಈ ಮೊದಲು ಬೆಟ್ಲಕ್ಕಿ ಎಂಬಲ್ಲಿ ಕಿರುಸೇತುವೆ ಕುಸಿದು ಸಾರ್ವಜನಿಕರು ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಅನಂತರ ತಾತ್ಕಾಲಿಕ ಕಾಮಗಾರಿ ನಡೆಸಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದೀಗ  ರಸ್ತೆ ಕುಸಿತ ಉಂಟಾಗಿದ್ದು  ವಾಹನ ಸಂಚಾರ ಇನ್ನಷ್ಟು ದುಸ್ತರಗೊಂಡಿದೆ.

ಸಾರ್ವಜನಿಕರ ಆಕ್ರೋಶ: ಎರಡು-ಮೂರು  ವರ್ಷದ ಹಿಂದೆ ಈ ರಸ್ತೆ ಉತ್ತಮ ಸ್ಥಿತಿಯಲ್ಲಿತ್ತು. ಅನಂತರ ಅಧಿಕ ಭಾರದ ವಾಹನಗಳ ಓಡಾಟದಿಂದ  ಸಂಪೂರ್ಣ ಹಡಗೆಟ್ಟಿದ್ದು, ಈ  ಕುರಿತು ಕ್ರಮಕೈಗೊಳ್ಳುವಂತೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದೇವೆ. ಆದರೆ ಈ ಕುರಿತು ಕ್ರಮಕೈಗೊಳ್ಳಬೇಕಾದ ಆರ್‌.ಟಿ.ಒ.,ಅಥವಾ  ಪೊಲೀಸ್‌ ಇಲಾಖೆಯವರು ಯಾವ ಕಾರಣಕ್ಕಾಗಿ  ಕೈಕಟ್ಟಿ ಕುಳಿತ್ತಿದ್ದಾರೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.  ಈ ರೀತಿ ಅಕ್ರಮಕ್ಕೆ ಸಹಕರಿಸಿದರೆ ಸಂಬಂಧಪಟ್ಟ ಇಲಾಖೆಗೇನಾದರು ಲಾಭವಿದೆಯೇ ? ಎಂದು ಸಾರ್ವಜನಿಕರು ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ.

ಉದಯವಾಣಿ ವರದಿಯ ಮೂಲಕ ಎಚ್ಚರಿಕೆ
ಕೋಟ-ಗೋಳಿಯಂಗಡಿ ಹಾಗೂ ಬ್ರಹ್ಮಾವರ-ಬಿದ್ಕಲ್‌ಕಟ್ಟೆ  ಜಿಲ್ಲಾ ಮುಖ್ಯ ರಸ್ತೆಯಲ್ಲಿ ಅಧಿಕಭಾರದ ವಾಹನಗಳ ಓಡಾಟದಿಂದ ರಸ್ತೆ ಹಾಗೂ ಸೇತುವೆಗಳು ಕುಸಿಯುವ ಭೀತಿಯಲ್ಲಿದೆ. ಇದೇ ರೀತಿ ಮುಂದುವರಿದಲ್ಲಿ ಮುಂದೆ ದೊಡ್ಡಮಟ್ಟದ ಅಪಾಯ ಖಚಿತ. ಆದ್ದರಿಂದ ಈ ಕುರಿತು ಸಂಬಂಧಪಟ್ಟ ಇಲಾಖೆ ಕ್ರಮಕೈಗೊಂಡು  ಅಧಿಕ ಭಾರದ ವಾಹನಗಳ ಓಡಾಟವನ್ನು ತಡೆಯಬೇಕು ಎಂದು ಉದಯವಾಣಿ ಜು.15ರಂದು ಜನಪರ ಕಾಳಜಿಯ ವರದಿ ಪ್ರಕಟಿಸಿತ್ತು. ಆರ್‌.ಟಿ.ಒ. ಅಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳುವುದಾಗಿ ಆ ಸಂದರ್ಭ ಭರವಸೆ ನೀಡಿದ್ದರು. ಆದರೆ ಅನಂತರ ಸಂಬಂಧಪಟ್ಟ ಇಲಾಖೆಯವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಸಮಸ್ಯೆ ಇನ್ನಷ್ಟು ಮುಂದುವರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next