ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹರಿಯುತ್ತಿರುವ ಧಾರಾಕಾರ ಮಳೆಗೆ ಭದ್ರಾ ನದಿ ಸೇರಿದಂತೆ ಅದರ ಉಪನದಿಗಳು ಉಕ್ಕಿ ಹರಿಯುತ್ತಿದ್ದು, ಹೊರನಾಡು – ಕಳಸ ಮಧ್ಯ ಭಾಗದಲ್ಲಿ ರಸ್ತೆ ಕುಸಿತವಾಗಿದ್ದು ಸಂಚಾರ ಸ್ಥಗಿತವಾಗಿದೆ.
ಭದ್ರೆಯ ಉಪ ನದಿ ರಭಸದಿಂದ ಹರಿಯುತ್ತಿದ್ದು, ಜನರು ನೋಡ-ನೋಡುತ್ತಿದ್ದಂತೆ ರಸ್ತೆ ಕೊಚ್ಚಿಹೋಗಿದೆ. ಹೊರನಾಡಿನಿಂದ 2 ಕಿ.ಮೀ ಅಂತರದಲ್ಲಿ ರಸ್ತೆ ಕೊಚ್ಚಿಹೋಗಿದೆ.
ಹೊರನಾಡಿಗೆ ಸಂಪರ್ಕಿಸುವ ಎಲ್ಲಾ ಮಾರ್ಗ ಬಂದ್ ಆಗಿರುವ ಪರಿಣಾಮ ಅನ್ನಪೂರ್ಣೇಶ್ವರಿ ದರ್ಶನ ಅಸಾಧ್ಯವಾಗಿದೆ. ಕಳೆದ ತಿಂಗಳು ಮಳೆಗಾಗಿ ಅನ್ನಪೂರ್ಣೇಶ್ವರಿಗೆ ಪರ್ಜನ್ಯ ಜಪ ಮಾಡಲಾಗಿತ್ತು. ಭದ್ರಾ ನದಿ ಮಧ್ಯೆ ನಿಂತು ಶಾಸ್ತ್ರೋಕ್ತವಾಗಿ ಪೂಜೆ ಮಾಡಲಾಗಿತ್ತು. ಆದರೆ ಈಗ ಭದ್ರೆ ಉಕ್ಕಿ ಹರಿಯುತ್ತಿದ್ದು, ಮಳೆ ನಿಲ್ಲಲು ಜನ ಪ್ರಾರ್ಥನೆ ಮಾಡುತ್ತಿದ್ದಾರೆ.
ಮಲೆನಾಡಲ್ಲಿ ಮಳೆಯ ರೌದ್ರ ನರ್ತನ ಮುಂದುವರಿದಿದೆ. ಹಲವು ಮನೆಗಳು ಕುಸಿದು ಬಿದ್ದಿವೆ.
ಕಳಸ, ಬಾಳೆಹೊನ್ನೂರು, ಬಾಳೂರು ಭಾಗದಲ್ಲಿ ಹಲವಾರು ಮನೆಗಳು ಕುಸಿದು ಬಿದ್ದಿದ್ದು, ಮನೆ ಕಳೆದುಕೊಂಡವರ ಜೀವನ ಅತಂತ್ರವಾಗಿದೆ.