Advertisement

ನೋಟಿಸ್‌ ಖಂಡಿಸಿ ವಕೀಲರಿಂದ ರಸ್ತೆ ತಡೆ 

04:32 PM Apr 13, 2018 | Team Udayavani |

ಬೆಳಗಾವಿ: ಸಾರ್ವಜನಿಕ ಶಾಂತತೆ ಭಂಗ ಮಾಡುವ ಸಾಧ್ಯತೆಯ ನೆಪವೊಡ್ಡಿ ಹಿರಿಯ ನ್ಯಾಯವಾದಿ ಎಂ.ಬಿ. ಜಿರಲಿ ಅವರಿಗೆ ಪೊಲೀಸರು ನೋಟಿಸ್‌ ನೀಡಿರುವುದನ್ನು ಖಂಡಿಸಿ ವಕೀಲರು ಗುರುವಾರ ಜಿಲ್ಲಾಧಿಕಾರಿ ಆವರಣದ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

Advertisement

ಗುರುವಾರ ಕಲಾಪದಿಂದ ದೂರ ಉಳಿದು ಪ್ರತಿಭಟನೆಗೆ ನಡೆಸಿದ ವಕೀಲರು, ನ್ಯಾಯವಾದಿ ಜಿರಲಿ ಅವರಿಗೆ ನೋಟಿಸ್‌ ನೀಡುವ ಮೂಲಕ ಪೊಲೀಸರು ಅವಮಾನ ಮಾಡಿದ್ದಾರೆಂದು ಆರೋಪಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಬಂದಿದ್ದರು. ಆಗ ಗೇಟ್‌ ಬಳಿಯೇ ವಕೀಲರನ್ನು ಪೊಲೀಸರು ತಡೆ ಹಿಡಿದಿದ್ದಾರೆ. ಒಳ ಬಿಡಲು ನಿರಾಕರಿಸಿದಾಗ ಪೊಲೀಸರೊಂದಿಗೆ ವಾಗ್ವಾದ ನಡೆಯಿತು.

ಪೊಲೀಸರು ಈ ಕ್ರಮ ಖಂಡಿಸಿ ವಕೀಲರು ಅಲ್ಲಿ ಎದುರಿನ ಚನ್ನಮ್ಮ ವೃತ್ತದಿಂದ ಬರುವ ಹಾಗೂ ಇತ್ತ ಆರ್‌ಟಿಒ ವೃತ್ತ ಕಡೆಯಿಂದ ಬರುವ ಎಲ್ಲ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಆಗ ಪೊಲೀಸರು ಮಧ್ಯ ಪ್ರವೇಶಿಸಿ ರಸ್ತೆತಡೆ ನಡೆಸದಂತೆ ಮನವಿ ಮಾಡಿದರೂ ವಕೀಲರು ಇದಕ್ಕೆ ಒಪ್ಪಲಿಲ್ಲ. ಈ ವೇಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತತೆ ಭಂಗ ಮಾಡುವ ಉದ್ದೇಶದಿಂದ ಎಂ.ಬಿ. ಜಿರಲಿ ಅವರಿಗೆ ನೋಟಿಸ್‌ ನೀಡಲಾಗಿದೆ. ವಕೀಲರ ವಿರುದ್ಧ ಮಾಡಿರುವ ಆಪಾದನೆಯಾಗಿದೆ. ಜಿರಲಿ ಅವರು ಯಾವುದೇ ರೀತಿಯ ಸಾರ್ವಜನಿಕ ಶಾಂತತೆ ಭಂಗ ಮಾಡುವ ಉದ್ದೇಶ ಹೊಂದಿಲ್ಲ. ಅದೇ ರೀತಿ ಮಹದಾಯಿ ವಿವಾದ ಸೇರಿದಂತೆ ಅನೇಕ ವ್ಯಾಜ್ಯಗಳಲ್ಲಿ ಕರ್ನಾಟಕ ಸರಕಾರದ ಸುಪ್ರೀಂ ಕೋರ್ಟಿನಲ್ಲಿ ವಾದಿಸುತ್ತಿದ್ದಾರೆ. ಇವರ ಮೇಲೆ ಪೊಲೀಸರು ರೌಡಿಶೀಟರ್‌ ಪಟ್ಟ ಕಟ್ಟಲು ಪ್ರಯತ್ನಿಸಿದ್ದು ಕಂಡು ಬಂದಿದೆ. ಅದಕ್ಕೆ ಪೊಲೀಸ್‌ ಅಧಿಕಾರಿಗಳು ಯಾವುದೇ ಸಾಕ್ಷಿ, ಪುರಾವೆ ಇಲ್ಲದೇ ಐಪಿಸಿ ಕಲಂ 107ರ ಅಡಿ ನೋಟಿಸ್‌ ಜಾರಿ ಮಾಡಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಕೀಲ ಜಿರಲಿ ಅವರ ಕರ್ತವ್ಯದಲ್ಲಿ ಪೊಲೀಸರು ವಿನಾಕಾರಣ ಅಡಚಣೆ ಉಂಟು ಮಾಡಿದ್ದಾರೆ. 

ವಕೀಲರ ವಿರುದ್ಧ ಸುಳ್ಳು ಆರೋಪ ಮಾಡಿರುವ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು. ಅಧ್ಯಕ್ಷ ಎಸ್‌.ಎಸ್‌. ಕಿವಡಸಣ್ಣವರ, ಎ.ಜಿ. ಮುಳವಾಡಮಠ, ಪ್ರವೀಣ ಅಗಸಗಿ, ಮುರುಘೇಂದ್ರಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

Advertisement

ಮದುವೆ ವಾಹನಕ್ಕೂ ಪ್ರತಿಭಟನೆ ಬಿಸಿ
ನಗರದ ಚನ್ನಮ್ಮ ವೃತ್ತದಿಂದ ಬಂದ ಮದುವೆ ದಿಬ್ಬಣದ ಕಾರಿಗೆ ಪ್ರತಿಭಟನೆ ಬಿಸಿ ತಟ್ಟಿತು. ಗುರುವಾರ ವಕೀಲರು ಕೋರ್ಟ್‌ ಆವರಣ ಎದುರಿನಲ್ಲಿ ರಸ್ತೆತಡೆ ನಡೆಸುತ್ತಿದ್ದಂತೆ ಸಾರ್ವಜನಿಕರಿಗೆ ತೊಂದರೆ ಉಂಟಾಯಿತು. ವಾಹನಗಳು ನಿಂತಿದ್ದರಿಂದ ಜನ ಪರದಾಡುವಂತಾಯಿತು. ಈ ಮಧ್ಯೆ ನಡುವೆ ಸಿಕ್ಕಿ ಹಾಕಿಕೊಂಡ ಮದು ಮಗ ಇದ್ದ ಕಾರಿಗೂ ಈ ಬಿಸಿ ತಟ್ಟಿತು. ವಕೀಲರು ಪ್ರತಿಭಟನೆ ಹಿಂಪಡೆದ ಬಳಿಕವೇ ಎಲ್ಲ ವಾಹನಗಳಿಗೆ ಹೋಗಲು ಅನುಕೂಲ ಮಾಡಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next