ಬೆಳಗಾವಿ: ಇಲ್ಲಿಯ ರಾಷ್ಟೀಯ ಹೆದ್ದಾರಿ 4ರ ಸುತಗಟ್ಟಿ ಬಳಿ ಲಾರಿ, ಕಂಟೈನರ್, ಕ್ಯಾಂಟರ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಚಾಲಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಮಧ್ಯರಾತ್ರಿ ಸಂಭವಿಸಿದೆ.
ಉತ್ತರ ಪ್ರದೇಶ ಕಾಡಿಯಾ ಅಮಿಲೋದಾ ನಿವಾಸಿ ನೀರಜ್ ಬಲ್ಲೂರ ಉರುಫ್ ರಾಮಲಖನ್ ಹಾಗೂ ಮಹಾರಾಷ್ಟ್ರದ ಭೀಡ ಜಿಲ್ಲೆಯ ಕೈಜ್ ತಾಲೂಕಿನ ಘಾಟಂದೂರ ಗ್ರಾಮದ ರಾಜೇಂದ್ರ ರಾಮಬಾಹು ಧೋಯಿಪಡೆ ಎಂಬವರು ಮೃತಪಟ್ಟಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಕಡೆಯಿಂದ ಮೆಕ್ಕೆಜೋಳ ಹಿಟ್ಟಿನ ಚೀಲ ತುಂಬಿಕೊಂಡು ಕಂಟೈನರ್ ಮಹಾರಾಷ್ಟ್ರದ ಕಡೆಗೆ ಹೊರಟಿತ್ತು. ಸುತಗಟ್ಟಿಯ ಘಾಟ್‌ನ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಬದಿಯ ರಸ್ತೆಗೆ ಬಂದಿದೆ. ಇತ್ತ ಮಹಾರಾಷ್ಟ್ರದಿಂದ ಬೆಳಗಾವಿಗೆ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಅಡ್ಡಲಾಗಿ ಕಂಟೈನರ್ ಢಿಕ್ಕಿ ಹೊಡೆದಿದೆ. ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಇಲ್ಲಿಯೇ ಸಮೀಪದಲ್ಲಿ ನಿಲ್ಲಿಸಿದ್ದ ಔಷಧಿ ತುಂಬಿಕೊಂಡಿದ್ದ ಕ್ಯಾಂಟರ್ ಗೆ ಢಿಕ್ಕಿ ಹೊಡೆದು ಭೀಕರ ಅಪಘಾತವಾಗಿದೆ.
ಇದನ್ನೂ ಓದಿ:ಶಿವಾಪುರದಲ್ಲಿ ವೀರ ಯೋಧನ ಅಂತಿಮ ಮೆರವಣಿಗೆಯಲ್ಲಿ ಅಪಾರ ಜನಸ್ತೋಮ
ಮೂರೂ ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಲಾರಿಯಲಿದ್ದ ಈರುಳ್ಳಿ ಹಾಗೂ ಮೆಕ್ಕೆಜೋಳ ಹಿಟ್ಟು ರಸ್ತೆ ಪಾಲಾಗಿದೆ. ಕೆಲ ಹೊತ್ತು ರಾಷ್ಟೀಯ ಹೆದ್ದಾರಿ ಮಾರ್ಗದಲ್ಲಿ ಸಂಚಾರ ದಟ್ಟಣೆಯಾಗಿ ಕಿ.ಮೀ. ಗಟ್ಟಲೇ ವಾಹನಗಳು ನಿಂತಿದ್ದವು.
ಸ್ಥಳಕ್ಕೆ ಎಸಿಪಿ ಗುಡಾಜಿ, ಕಾಕತಿ ಇನ್ಸಪೆಕ್ಟರ್ ರಾಘವೇಂದ್ರ ಹಳ್ಳೂರ, ಪಿಎಸ್‌ಐ ಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.