ಕುಂದಾಪುರ/ ಮಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 2019ಕ್ಕೆ ಹೋಲಿಸಿದರೆ 2020ರಲ್ಲಿ ರಸ್ತೆ ಅಪಘಾತಗಳು ಕಡಿಮೆಯಾಗಿದ್ದು, ಜನರಿಗೆ ನೆಮ್ಮದಿ ತಂದಿದೆ. ಕೊರೊನಾ ಲಾಕ್‌ಡೌನ್, ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳು ಮತ್ತು ರಸ್ತೆಗಳ ಸುಸ್ಥಿತಿ ಈ ಸಕಾರಾತ್ಮಕ ಬೆಳವಣಿಗೆಗೆ ಪ್ರಮುಖ ಕಾರಣಗಳು.
2019ರಲ್ಲಿ ಉಭಯ ಜಿಲ್ಲೆ ಗಳಲ್ಲಿ ಒಟ್ಟು 3,162 ರಸ್ತೆ ಅವಘಡಗಳು ನಡೆ ದಿದ್ದರೆ 2020ರಲ್ಲಿ ಇದು 2,335ಕ್ಕೆ ಇಳಿದಿದೆ. ಮೃತಪಟ್ಟವರ ಸಂಖ್ಯೆಯೂ ಕಡಿಮೆಯಿದೆ. ಉಭಯ ಜಿಲ್ಲೆಗಳ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳು ಕಡಿಮೆಯಾಗಿರುವುದು ಅಪಘಾತ ಕಡಿಮೆಯಾಗಿರುವುದನ್ನು ಸಾಬೀತುಪಡಿಸುತ್ತಿವೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಹೆದ್ದಾರಿಗಳಲ್ಲೇ ಗರಿಷ್ಠ ರಸ್ತೆ ಅವಘಡಗಳು ಸಂಭವಿಸಿವೆ. ಹೆದ್ದಾರಿಗಳಲ್ಲಿ 2020ರಲ್ಲಿ 429 ಅವಘಡಗಳು ನಡೆದು 108 ಮಂದಿ ಮೃತಪಟ್ಟು, 480 ಮಂದಿ ಗಾಯಗೊಂಡಿದ್ದಾರೆ. ರಾಜ್ಯ ಹೆದ್ದಾರಿಗಳಲ್ಲಿ 153 ಅಪಘಾತಗಳಾ ಗಿದ್ದು, 27 ಮಂದಿ ಮೃತಪಟ್ಟು, 195 ಮಂದಿ ಗಾಯಗೊಂಡಿದ್ದಾರೆ. ಇತರ ರಸ್ತೆಗಳಲ್ಲಿ 408 ಅಪಘಾತಗಳಾಗಿದ್ದು, 58 ಮಂದಿ ಸಾವನ್ನಪ್ಪಿದ್ದಾರೆ. 420 ಮಂದಿ ಗಾಯಗೊಂಡಿದ್ದಾರೆ.
ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಹೆಚ್ಚು :
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಹೆಚ್ಚಿನ ರಸ್ತೆ ಅಪಘಾತಗಳು ಘಟಿಸಿವೆ. 2019ರಲ್ಲಿ 1,028 ಅಪಘಾತ ಸಂಭವಿಸಿ, 148 ಮಂದಿ ಮೃತಪಟ್ಟಿದ್ದರು. 2020ರಲ್ಲಿ 692 ಅಪಘಾತಗಳು ನಡೆದು, 115 ಮಂದಿ ಮೃತಪಟ್ಟಿದ್ದರು. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2019ರಲ್ಲಿ 920 ಅಪಘಾತ ಸಂಭವಿಸಿ, 154 ಮಂದಿ ಮೃತಪಟ್ಟಿದ್ದರೆ 2020ರಲ್ಲಿ ಸಂಭವಿಸಿದ 653 ರಸ್ತೆ ಅಪಘಾತಗಳಲ್ಲಿ 109 ಮಂದಿ ಮೃತಪಟ್ಟಿದ್ದರು.
ಅಪಘಾತಕ್ಕೆ ಕಾರಣಗಳು :
ಮಿತಿ ಮೀರಿದ ವೇಗ, ಪಾನಮತ್ತರಾಗಿ ವಾಹನ ಚಾಲನೆ, ರಸ್ತೆ ನಿಯಮ ಉಲ್ಲಂಘನೆ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳು. ಕೆಲವೆಡೆಗಳಲ್ಲಿ ಅವೈಜ್ಞಾನಿಕ – ಅಸಮರ್ಪಕ ಕಾಮಗಾರಿ, ರಸ್ತೆ ಹೊಂಡ -ಗುಂಡಿಗಳು, ರಾತ್ರಿ ವೇಳೆ ಬೀದಿ ದೀಪದ ಸಮಸ್ಯೆಯೂ ಕಾರಣವಾಗುತ್ತಿವೆ.
ಲಾಕ್‌ಡೌನ್ ಸಮಯದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ತಪಾಸಣೆ ನಡೆಸಲಾಗುತ್ತಿತ್ತು. ಇದಲ್ಲದೆ ಕಠಿನ ಸಂಚಾರ ನಿಯಮಗಳನ್ನು ಕೂಡ ಜಾರಿಗೆ ತರಲಾಗಿದೆ.
– ಕುಮಾರಚಂದ್ರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಡುಪಿ
ಲಾಕ್‌ಡೌನ್‌ನಿಂದ ವಾಹನ ದಟ್ಟಣೆ ಶೇ. 30ರಷ್ಟು ಕಡಿಮೆಯಾಗಿದೆ. ಒಟ್ಟು ಅಪಘಾತ ಪ್ರಕರಣ ಗಳು ಶೇ. 28ರಷ್ಟು ಕಡಿಮೆಯಾಗಿವೆ.
– ಬಿ.ಎಂ. ಲಕ್ಷ್ಮೀಪ್ರಸಾದ್, ಎಸ್‌ಪಿ, ದ.ಕ.
- ಉದಯವಾಣಿ ಟೀಂ