ಕಲಬುರಗಿ: ರಸ್ತೆ ಬದಿ ನಿಂತಿದ್ದ ಲಾರಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಕಲಬುರಗಿ ತಾಲೂಕಿನ ಸಾವಳಗಿ ಕ್ರಾಸ್ ಬಳಿ ತಡರಾತ್ರಿ ನಡೆದಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಒಂದೇ ಕುಟುಂಬದ ಐವರು ಮೃತ ಪಟ್ಟಿದ್ದಾರೆ. ಸಂಜಯಕುಮಾರ್ ಚಡಚಣ (29), ರಾಣಿ ಚಡಚಣ (26), ಭಾಗ್ಯಶ್ರೀ ಆಳಗಿ (22) ಹಾಗೂ ಮೂರು ವರ್ಷದ ಶ್ರೇಯಾಂಶ್ ಚಡಚಣ, ಎರಡು ವರ್ಷದ ಮಗು ಧೀರಜ್ ಮೃತ ದುರ್ದೈವಿಗಳಾಗಿದ್ದಾರೆ.
ಇನ್ನುಳಿದ ಮೂವರಿಗೆ ಗಂಭೀರ ಗಾಯವಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರಗಿಯಿಂದ ಸೊಲ್ಲಾಪುರಕ್ಕೆ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ ಎಂದು ಗೊತ್ತಾಗಿದ್ದು, ನಿನ್ನೆ ಕಡೆಯ ಶ್ರಾವಣ ಸೋಮವಾರ ಹಿನ್ನೆಲೆ ಶರಣಬಸವೇಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತ ಬಂದಿದ್ದರು ಎನ್ನಲಾಗಿದೆ.
ಕಲಬುರಗಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ