Advertisement

ವೆಂಕಟ್ರಮಣ ಹೊಳ್ಳ ಅಪಘಾತ ಪ್ರಕರಣ: ಢಿಕ್ಕಿ ಹೊಡೆದು ಪರಾರಿಯಾಗಿದ್ದ ಟಿಪ್ಪರ್ ಚಾಲಕನ ಬಂಧನ

01:21 PM Dec 20, 2020 | keerthan |

ಪುತ್ತೂರು: ಕಬಕ ಸಮೀಪದ ಪೋಳ್ಯದಲ್ಲಿ ದ.15ರಂದು ನಡೆದಿದ್ದ ಅಪಘಾತದಲ್ಲಿ ಬೈಕ್ ಸವಾರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮವಿಕಾಸ ಮಂಗಳೂರು ವಿಭಾಗ ಪ್ರಮುಖ್ ವೆಂಕಟ್ರಮಣ ಹೊಳ್ಳ ಅವರು ಮೃತಪಟ್ಟ ಘಟನೆಗೆ ಸಂಬಂಧಿಸಿ, ಅವರ ಬೈಕ್‌ಗೆ ಢಿಕ್ಕಿ ಹೊಡೆದು ನಾಪತ್ತೆಯಾಗಿದ್ದ ಟಿಪ್ಪರ್ ಲಾರಿಯನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಸಂಚಾರಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಅರಿಯಡ್ಕದ ದಿನೇಶ್ ಕುಮಾರ್ ಮಾಲಕತ್ವದ ಟಿಪ್ಪರ್ (ಕೆ.ಎ 21 ಬಿ 3501) ಚಾಲಕ ಪಾಣಾಜೆ ನಿವಾಸಿ ಚರಣ್ ಕುಮಾರ್ ಬಂಧಿತ ಆರೋಪಿ.

ಮರಳು ಲೋಡ್‌ಗಾಗಿ ಮಂಗಳೂರು ಕಡೆ ತೆರಳುತ್ತಿದ್ದ ವೇಳೆ ಪೋಳ್ಯ ಸಮೀಪ ಅವರ ಟಿಪ್ಪರ್ ಬೈಕ್‌ಗೆ ಢಿಕ್ಕಿ ಹೊಡೆದಿತ್ತಾದರೂ ಟಿಪ್ಪರ್‌ನ್ನು ನಿಲ್ಲಿಸದೆ ಆರೋಪಿ ಪರಾರಿಯಾಗಿದ್ದ. ಅಪಘಾತದಿಂದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮ ವಿಕಾಸ ಮಂಗಳೂರು ವಿಭಾಗ ಪ್ರಮುಖ್ ಆಗಿದ್ದ ಬಂಟ್ವಾಳ ಅಗರ್ತಬೈಲು ನಿವಾಸಿ ವೆಂಕಟ್ರಮಣ ಹೊಳ್ಳ ಮೃತಪಟ್ಟಿದ್ದರು. ಘಟನೆಯಲ್ಲಿ ವೆಂಕಟ್ರಮಣ ಹೊಳ್ಳ ಅವರ ತಲೆ ಜಜ್ಜಿ ಹೋಗಿದ್ದರಿಂದ ಯಾವುದೋ ಅಪರಿಚಿತ ವಾಹನದ ಚಕ್ರ ಇವರ ತಲೆಯ ಮೇಲೆ ಹೋಗಿರುವ ಕುರಿತು ಬಲವಾದ ಸಂಶಯದ ಮೇಲೆ ಪುತ್ತೂರು ಸಂಚಾರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಢಿಕ್ಕಿ ಹೊಡೆದ ಟಿಪ್ಪರ್ ಅನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಜಮಖಂಡಿ: ತುತ್ತೂರಿ ಊದುತ್ತಾ ಗ್ರಾಮ ಪಂಚಾಯತ್ ಅಭ್ಯರ್ಥಿಯ ಮತಬೇಟೆ

ಸಿಸಿ ಕ್ಯಾಮರಾ, ಜಿಪಿಎಸ್‌ನಿಂದ ಪತ್ತೆ ಕಾರ್ಯ: ವೆಂಕಟ್ರಮಣ ಹೊಳ್ಳ ಅವರು ಪಂಚವಟಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರದಲ್ಲಿ ರಾತ್ರಿ ತಂಗಿ ಡಿ.15 ರ ನಸುಕಿನ ಜಾವ 5 ಗಂಟೆಯ ಸುಮಾರಿಗೆ ಬಂಟ್ವಾಳದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಪೋಳ್ಯ ಸಮೀಪದ ತಿರುವಿನಲ್ಲಿ ವಾಹನ ವೇಗ ನಿಯಂತ್ರಿಸಲು ಅಳವಡಿಸಿದ್ದ ಬ್ಯಾರಿಕೇಡ್ ಬಳಿ ಹಿಂದಿನಿಂದ ಬಂದ ಟಿಪ್ಪರ್ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು.

Advertisement

ಘಟನೆ ನಸುಕಿನ ಜಾವ ಸಂಭವಿಸಿದ್ದರಿಂದ ಸರಿಯಾದ ಬೆಳಕು ಇಲ್ಲದ ಹಿನ್ನೆಲೆಯಲ್ಲಿ ಅಪಘಾತ ಎಸಗಿದ ವಾಹನವನ್ನು ಪತ್ತೆ ಮಾಡಲು ಪೊಲೀಸರಿಗೆ ತಲೆ ನೋವಾಗಿತ್ತು. ಸ್ಥಳೀಯ ಸಿ.ಸಿ ಕ್ಯಾಮರಾದಲ್ಲೂ ಟಿಪ್ಪರ್‌ಗಳು ಹೋಗುವುದು ಕಂಡರೂ ಟಿಪ್ಪರ್ ನಂಬರ್ ಸರಿಯಾಗಿ ಗೋಚರಿಸುತ್ತಿರಲಿಲ್ಲ. ಆದರೆ ಮುಂದಿನ ರಸ್ತೆಯಲ್ಲಿ ಸಿಕ್ಕಿದ ಸಿಸಿ ಕ್ಯಾಮರಾದಲ್ಲಿ ಟಿಪ್ಪರ್‌ಗಳು ಒಂದರ ಹಿಂದೆ ಇನ್ನೊಂದರಂತೆ ವೇಗವಾಗಿ ಹೋಗುತ್ತಿರುವುದು ಬೆಳಕಿಗೆ ಬಂದಿತ್ತು. ಈ ನಡುವೆ ಟಿಪ್ಪರ್ ಜಿಪಿಎಸ್ ಮತ್ತು ಚಾಲಕನ ಮೊಬೈಲ್ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದು ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next