Advertisement

ಆರ್‌.ಎನ್‌. ಶೆಟ್ಟಿ ಅವರಿಗೆ 90ನೇ ಜನ್ಮದಿನದ ಸಂಭ್ರಮ

06:00 AM Aug 15, 2018 | |

ಬೆಂಗಳೂರು: ಅರವತ್ತರ ದಶಕದಲ್ಲಿ ಆರಂಭಿಸಿದ ಮೂಲ ಸೌಕರ್ಯ ಕಂಪೆನಿಯ ಮೂಲಕ ಹೆದ್ದಾರಿ, ರೈಲ್ವೆ ಸುರಂಗ, ಜಲಾಶಯ, ಅಣೆಕಟ್ಟು, ಕಟ್ಟಡಗಳು ಸೇರಿದಂತೆ ಮಹತ್ವದ ಜನೋಪಕಾರಿ ಯೋಜನೆಗಳನ್ನು ಸಾಕಾರ ಗೊಳಿಸುವ ಜತೆಗೆ 15,000 ಉದ್ಯೋಗ ಕಲ್ಪಿಸಿದ ಹಿರಿಮೆಗೆ
ಪಾತ್ರರಾದ ಉದ್ಯಮಿ ಡಾ.ಆರ್‌. ಎನ್‌.ಶೆಟ್ಟಿ ಅವರಿಗೆ ಬುಧವಾರ 90ನೇ ಹುಟ್ಟುಹಬ್ಬದ ಸಂಭ್ರಮ. ಮೂಲ ಸೌಕರ್ಯ, ಕೈಗಾರಿಕಾ, ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈದ್ಯಕೀಯ, ಆತಿಥ್ಯ, ವಸತಿ, ವಾಣಿಜ್ಯ, ಶೈಕ್ಷಣಿಕ, ಇಂಧನ ಹಾಗೂ ನೀರಾವರಿ ಸೇರಿ ಇತರೆ ಕ್ಷೇತ್ರದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಆರ್‌.ಎನ್‌.ಶೆಟ್ಟಿ ಅವರು ಜನೋಪಕಾರಿ ಜತೆಗೆ ಸಮಾಜಮುಖೀ ಕಾರ್ಯದಲ್ಲೂ ತೊಡಗಿಸಿಕೊಂಡು ಮಾದರಿ ಎನಿಸಿದ್ದಾರೆ. 

Advertisement

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಮಧ್ಯಮ ವರ್ಗದ ಕುಟುಂಬದಲ್ಲಿ 1928ರ ಆ.15ರಂದು ಜನಿಸಿದ ಡಾ. ರಾಮ ನಾಗಪ್ಪ ಶೆಟ್ಟಿ ಅವರು ಡಿಪ್ಲೊಮಾ ಶಿಕ್ಷಣ ಪಡೆದಿದ್ದಾರೆ. ನಂತರ ತಮ್ಮ ಕೌಶಲ್ಯ ಹಾಗೂ ಉದ್ಯಮಶೀಲತೆಯ ಮೂಲಕ ನಾನಾ ಕ್ಷೇತ್ರಗಳಲ್ಲಿ ಹೊಸ ಮೈಲುಗಲ್ಲು
ಗಳನ್ನು ಸೃಷ್ಟಿಸಿ ಅನುಕರಣೀಯರೆನಿಸಿದ್ದಾರೆ. ಹಿಡಕಲ್‌ ಜಲಾಶಯ, ತಳ್ಳಿಹಳ್ಳ ಜಲಾಶಯ,  ಸೂಪಾ ಜಲಾಶಯ, ಗೇರುಸೊಪ್ಪ ಜಲಾಶಯ, ಮಾಣಿ ಅಣೆಕಟ್ಟು, ವಾರಾಹಿ ಜಲವಿದ್ಯುತ್‌ ಯೋಜನೆ, ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಕೊಂಕಣ ರೈಲ್ವೆ ಸುರಂಗ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿ ಇತರೆ ಮಹತ್ವದ ಮೈಲುಗಲ್ಲುಗಳನ್ನು ಮೂಲ ಸೌಕರ್ಯ ಕ್ಷೇತ್ರದಲ್ಲಿ ಸೃಷ್ಟಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕನಸಿನ ಕೂಸಾಗಿದ್ದ ಸುವರ್ಣ ಚತುಷ್ಪಥ ಯೋಜನೆಯಡಿ ಹೆದ್ದಾರಿ 4ರಡಿ ಧಾರವಾಡ- ಬೆಳಗಾವಿ ನಡುವೆ ಕಡಿಮೆ ಅವಧಿಯಲ್ಲಿ
ಗುಣಮಟ್ಟದ ರಸ್ತೆ ನಿರ್ಮಿಸಿದ ಪ್ರಶಂಸೆಗೂ ಪಾತ್ರರಾಗಿದ್ದಾರೆ. 

ಬಾಲ್ಯದಿಂದಲೂ ತಾವು ನಿತ್ಯ ಆರಾಧಿಸುತ್ತಾ ಬಂದ ಮುರುಡೇಶ್ವರದ ಪುರಾತನ ಶಿವ ದೇವಾಲಯದ ನವೀಕರಣದ ಜತೆಗೆ 249 ಅಡಿ ಎತ್ತರದ ರಾಜಗೋಪುರ ಹಾಗೂ ಬೆಟ್ಟದ ಮೇಲೆ 123 ಅಡಿ ಎತ್ತರದ ಭವ್ಯ ಶಿವನಮೂರ್ತಿ ನಿರ್ಮಿಸಿದ್ದಾರೆ. ಲಿಫ್ಟ್ ಸೌಕರ್ಯವುಳ್ಳ ಬೃಹತ್‌ ರಾಜ ಗೋಪುರದಲ್ಲಿ ರಾಮಾಯಣದ ಕಲಾಕೃತಿಗಳನ್ನು ಪ್ರತಿಷ್ಠಾಪಿಸಿ ಪುಣ್ಯ ತಾಣವಾಗಿ ಮಾತ್ರವಲ್ಲದೆ ಪ್ರವಾಸಿ ತಾಣವನ್ನಾಗಿಯೂ ರೂಪಿಸಿದ ಹೆಗ್ಗಳಿಗೆ ಆರ್‌.ಎನ್‌.ಶೆಟ್ಟಿ ಅವರಿಗೆ ಸಲ್ಲುತ್ತದೆ.

ಔದ್ಯೋಗಿಕ ಕಾರ್ಯಗಳಷ್ಟೇ ಅಲ್ಲದೇ ಡಾ.ಆರ್‌.ಎನ್‌.ಶೆಟ್ಟಿ ಟ್ರಸ್ಟ್‌ ವತಿಯಿಂದ ಹಲವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ನಗರ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣದವರೆಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಹೀಗೆ ನಾನಾ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿರುವ ಆರ್‌.ಎನ್‌.ಶೆಟ್ಟಿಯವರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್‌ ಪದವಿ, ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಸ್ಮಾರಕ
ಪ್ರಶಸ್ತಿ, ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕಾಸಿಯಾದ “ಕೈಗಾರಿಕಾ ರತ್ನ’ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳು ಅರಸಿ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next