ಪಾಟ್ನ:ರಾಜ್ಯದಲ್ಲಿನ ಕೋವಿಡ್ 19 ಪ್ರಕರಣಗಳ ಸಂಖ್ಯೆ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಸುಳ್ಳು ಹಾಗೂ ದಾರಿ ತಪ್ಪಿಸುತ್ತಿದೆ ಎಂದು ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ದ ಮುಖಂಡ ತೇಜಸ್ವಿ ಯಾದವ್ ಗುರುವಾರ (ಆಗಸ್ಟ್ 13, 2020) ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಮಾರು ಹತ್ತು ಸಾವಿರ ಮಂದಿಗೆ ಪರೀಕ್ಷೆ ನಡೆಸಿ, ಅದರಲ್ಲಿ 3,000-3,500 ಕೋವಿಡ್ 19 ಪ್ರಕರಣಗಳ ಸಂಖ್ಯೆಯನ್ನು ಬಿಹಾರ ಸರ್ಕಾರ ನೀಡುತ್ತಿದೆ ಎಂದು ದೂರಿದರು.
ಯಾವಾಗ ರಾಜ್ಯದಲ್ಲಿ 75,000 ಸಾವಿರ ಕೋವಿಡ್ 19 ಸೋಂಕಿತರ ಪರೀಕ್ಷೆಗಳನ್ನು ನಡೆಸಲಾಗಿತ್ತೋ ಆವಾಗಲೂ ದಿನಂಪ್ರತಿ 4,000 ಸಂಖ್ಯೆಯನ್ನು ತೋರಿಸುತ್ತಿದ್ದರು. ಅಂದರೆ ಕೋವಿಡ್ 19 ಅಂಕಿ ಸಂಖ್ಯೆ ವಿಚಾರದಲ್ಲಿ ಬಿಹಾರ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಅರ್ಥ ಎಂದು ಆರೋಪಿಸಿದರು.
ಅಲ್ಲದೇ ಕೋವಿಡ್ 19 ಸೋಂಕಿತರ ಜೀವ ಉಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ರಾಪಿಡ್ ಆ್ಯಂಟಿಜೆನ್ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಆರ್ ಟಿ-ಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸಬೇಕಾಗಿದೆ ಎಂದು ಒತ್ತಾಯಿಸಿದ ಯಾದವ್, ಬಿಹಾರ ಸರ್ಕಾರದ ಅಂಕಿ ಅಂಶದ ಪ್ರಕಾರ, ಸರಿಸುಮಾರು 6,100 ಆರ್ ಟಿ -ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದು ಕೋವಿಡ್ 19 ಒಟ್ಟು ಪ್ರಕರಣಗಳ ಶೇ.10ರಷ್ಟು ಮಾತ್ರ ಆರ್ ಟಿ-ಪಿಸಿಆರ್ ಮೂಲಕ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಆರ್ ಟಿ-ಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿರುವುದಾಗಿ ಯಾದವ್ ಹೇಳಿದರು.
ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಆಡಳಿತಾರೂಢ ಪಕ್ಷದ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಲು ಆರಂಭಿಸಿವೆ. ಅಲ್ಲದೇ ರಾಜ್ಯದಲ್ಲಿನ ಕೋವಿಡ್ 19 ಅಂಕಿ ಅಂಶದ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹಾಗೂ ಆರೋಗ್ಯ ಸಚಿವರನ್ನು ಪ್ರಶ್ನಿಸಿದರು.