ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ಜಲಮೂಲಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಎಲ್ಲ ಕೆರೆಗಳನ್ನು ಅಭಿವೃದ್ಧಿ ಮಾಡಲಾಗುವುದು ಹಾಗೂ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಬೆಂಗಳೂರಿನ ಗಾಂಧಿನಗರದಲ್ಲಿ ಇಂದು ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ಕೊಟ್ಟು ಐದು ವರ್ಷಗಳ ಸರಕಾರ ರಚನೆ ಮಾಡಲು ಜನರು ಬೆಂಬಲ ನೀಡಿದರೆ, ನೀರಿನ ವಿಷಯದಲ್ಲಿ ಬೆಂಗಳೂರು ಜನರು ಎದುರಿಸುತ್ತಿರುವ ಎಲ್ಲ ಸಂಸ್ಥೆಗಳನ್ನು ಬಗೆಹರಿಸಲಾಗುವುದು ಎಂದು ಘೋಷಣೆ ಮಾಡಿದರು.
ಜಲ ಮೂಲಗಳು ರಕ್ಷಿಸಿ ಅದನ್ನು ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜಲಧಾರೆ ಕಾರ್ಯಕ್ರಮ ರೂಪಿಸಲಾಗಿದೆ. ಕೆರೆಗಳನ್ನು ಉತ್ತಮಪಡಿಸಿ ಅವುಗಳಿಗೆ ನದಿ ನೀರು ತುಂಬಿಸುವ ಕೆಲಸ ಮಾಡಲಾಗುವುದು ಎಂದರು.
ದೇವೇಗೌಡರು ಅಧಿಕಾರದಲ್ಲಿ ಇದ್ದಾಗ ರಾಜ್ಯಕ್ಕೆ ಅನೇಕ ನೀರಾವರಿ ಯೋಜನೆ ಕೊಟ್ಟಿದ್ದಾರೆ. ಅದರಲ್ಲೂ ಬೆಂಗಳೂರಿಗೆ ಅನೇಕ ಕಾರ್ಯಕ್ರಮ ಕೊಟ್ಟಿದ್ದಾರೆ. ಕಾವೇರಿ ನದಿಯಿಂದ 9 ಟಿ ಎಂ ಸಿ ನೀರು ಸಿಕ್ಕಿದ್ದು ದೇವೇಗೌಡರು ಪ್ರಧಾನಿಯಾಗಿ ಮಾಡಿದ ಒಂದು ಆದೇಶ ಕಾರಣ. ಇವತ್ತು ನಗರದ ಜನ ಕಾವೇರಿ ನೀರು ಕುಡಿಯುತ್ತಿದ್ದರೆ ಅದಕ್ಕೆ ಕಾರಣ ಗೌಡರು ಎಂದರು.
Related Articles
ಇದನ್ನೂ ಓದಿ : ಚನ್ನಪಟ್ಟಣದ ಜೆಡಿಎಸ್ ಮುಖಂಡ, ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಗೆ ಅಡಿಗಲ್ಲು ಹಾಕಿ ಮೊದಲ ಹಂತಕ್ಕೆ ಚಾಲನೆಗೆ ಕಾರಣವಾಗಿದ್ದು ನಾನು. ನಗರದ ಐಟಿ ಕ್ರಾಂತಿಗೆ ಮುನ್ನುಡಿ ಬರೆದವರು ದೇವೇಗೌಡರು. ನಗರಕ್ಕೆ ಐಟಿ ಪಾರ್ಕ್ ಬರಲು ಕೂಡ ಅವರೇ ಕಾರಣ. ವರ್ತುಲ ರಸ್ತೆ ಇತ್ಯಾದಿ ಮೂಲಸೌಕರ್ಯವನ್ನು ಕಲ್ಪಿಸದವರು ದೇವೇಗೌಡರೇ. ಇದನ್ನು ಬೆಂಗಳೂರು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ನೆಲಮಂಗಲದಲ್ಲಿ ನಾಳೆ ಜಲಧಾರೆಯ ಬೃಹತ್ ಸಮಾವೇಶ ನಡೆಯುತ್ತಿದೆ. ಸುಮಾರು ಐದರಿಂದ ಆರು ಲಕ್ಷ ಜನರು ಭಾಗವಹಿಸಲಿದ್ದಾರೆ. ತಾಯಿ ಅಣ್ಣಮ್ಮ ದೇವಿಯ ಕೃಪೆಯಿಂದ ಮಳೆಗೆ ಕೊಂಚ ಬಿಡುವು ಸಿಗಲಿದೆ. ಯಾವುದೇ ಸಮಸ್ಯೆ ಇಲ್ಲದೆ ಸಮಾವೇಶ ನಡೆಯಲಿದೆ. ಸಾರ್ವಜನಿಕರು ನಿರಾತಂಕವಾಗಿ ಸಮಾವೇಶದಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ಹೇಳಿದರು.
ಗಾಂಧಿನಗರದ ಜೆಡಿಎಸ್ ಮುಖಂಡ ನಾರಾಯಣ ಸ್ವಾಮಿ, ಪಕ್ಷದ ನಗರ ಅಧ್ಯಕ್ಷ ಪ್ರಕಾಶ್ ಮುಂತಾದ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮಕ್ಕೂ ಮುನ್ನ ತಾಯಿ ಅಣ್ಣಮ್ಮ ದೇವಿಗೆ ಕುಮಾರಸ್ವಾಮಿ ಅವರು ವಿಶೇಷ ಪೂಜೆ ಸಲ್ಲಿಸಿದರು.