Advertisement

ಸುಳ್ಯ: ಮಡುಗಟ್ಟಿದ ತ್ಯಾಜ್ಯಕ್ಕೆ ಮರುಗುತ್ತಿವೆ ನದಿ-ಹೊಳೆ

11:26 PM Feb 09, 2020 | Team Udayavani |

ಸುಳ್ಯ: ನಗರದೊಳಗೇ ನದಿ, ಹೊಳೆ ಇದ್ದರೂ ಅವುಗಳನ್ನು ಶುದ್ಧವಾಗಿ ಕಾಪಾಡಿ ಕೊಳ್ಳುವಲ್ಲಿ ಸ್ಥಳೀಯಾಡಳಿತ ಸಂಪೂರ್ಣ ವಿಫಲವಾಗಿದೆ ಅನ್ನುವುದಕ್ಕೆ ನದಿ, ಹೊಳೆ ಪಾಲಾಗುತ್ತಿರುವ ತ್ಯಾಜ್ಯದ ರಾಶಿ ನಿದರ್ಶನ.

Advertisement

ಮಳೆಗಾಲದಲ್ಲಿ ನೀರಿನೊಂದಿಗೆ ಕೊಚ್ಚಿ ಹೋಗುವ ಈ ತ್ಯಾಜ್ಯದ ನಿಜರೂಪ ಬೇಸಗೆಯಲ್ಲಿ ಸಂಪೂರ್ಣವಾಗಿ ಗೋಚರ ವಾಗುತ್ತದೆ. ಇದರಿಂದ ಹೊಸ ಹೊಸ ರೋಗ ಸೃಷ್ಟಿಸುವ ತಾಣ ವಾಗುವ ಅಪಾಯ, ಆತಂಕ ಕಣ್ಣ ಮುಂದಿದೆ. ಇದು ಸ್ಥಳೀಯಾಡಳಿತ ಪ್ರಾಯೋಜಕತ್ವದ ಕೊಡುಗೆ ಎಂದರೂ ತಪ್ಪೇನಿಲ್ಲ.

ಬಹುತೇಕ
ತ್ಯಾಜ್ಯ ನದಿಗೆ
ಸುಳ್ಯ ನಗರದೊಳಗೆ ಪಯಸ್ವಿನಿ ನದಿ ಮತ್ತು ಕಂದಡ್ಕ ಹೊಳೆ ಹರಿಯುತ್ತವೆ. ಮೊಗರ್ಪಣೆ ಬಳಿ ಪಯಸ್ವಿನಿ ಸೇರುವ ಕಂದಡ್ಕ ಹೊಳೆ ಬೇಸಗೆ ಹೊತ್ತಲ್ಲಿ ತ್ಯಾಜ್ಯ ತುಂಬುವ ಡಂಪಿಂಗ್‌ ಯಾರ್ಡ್‌ ತರಹ ಕಾಣುತ್ತದೆ. ನಗರದ ಆಸ್ಪತ್ರೆ, ಹೊಟೇಲ್‌, ವಾಣಿಜ್ಯ ಕಟ್ಟಡ ಸಹಿತ ಸಾವಿರಾರು ದಿಕ್ಕುಗಳಿಂದ ದಿನಂಪ್ರತಿ ಉತ್ಪತ್ತಿಯಾಗುವ ಬಹುತೇಕ ತ್ಯಾಜ್ಯ ನೀರು ಒಳಚರಂಡಿ ಯೋಜನೆ ವಿಫಲವಾದ ಕಾರಣ ಕಂದಡ್ಕ ಹೊಳೆಗೆ ಸೇರುತ್ತಿದೆ. ಅಲ್ಲಿಂದ ಪಯಸ್ವಿನಿಗೆ ಹರಿಯತ್ತದೆ. ಕೆಲವೆಡೆ ನೇರವಾಗಿ ಪಯಸ್ವಿನಿ ನದಿಗೆ ಸೇರುವುದುಂಟು. ಇದರಿಂದ ನಗರ ಹಾಗೂ ನದಿ ಹರಿದು ಹೋಗುವ ನದಿ ತಟದ ಜನರಿಗೆ ಕಲುಷಿತ ನೀರು ಸೇವಿಸುವ ಪ್ರಮೇಯ ಸೃಷ್ಟಿಯಾಗಿದೆ. ಜತೆಗೆ ತ್ಯಾಜ್ಯ ಹರಿಯುವ ದುರ್ವಾಸನೆಗೆ ನೂರಾರು ಮನೆಗಳ ಮಂದಿ ಹೈರಣಾಗಿದ್ದಾರೆ.

ಬೇಡಿಕೆಗಳಿಗಿಲ್ಲ ಮನ್ನಣೆ
ನದಿ ಕಲುಷಿತ ಗೊಳ್ಳುವುದನ್ನು ತಡೆಗಟ್ಟುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ದಿನಕರ ಕಾನತ್ತಿಲ 23 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಜನಪ್ರತಿನಿಧಿಗಳಿಂದ ಮತ್ತು ಅಧಿಕಾರಿ ವರ್ಗದಿಂದ ಸ್ಪಂದನೆ ಸಿಕ್ಕಿಲ್ಲ. ಈ ಬಗ್ಗೆ ಹೈಕೋರ್ಟ್‌ ಕದ ತಟ್ಟಿದ್ದೂ ಉಂಟು. ಪಯಸ್ವಿನಿ ನದಿ ಸುರಕ್ಷತೆಗೋಸ್ಕರ ಒಳಚರಂಡಿ ಯೋಜನೆ ಸಮರ್ಪಕತೆಗೆ ರಾಜ್ಯದ ಎಲ್ಲ ಶಾಸಕರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಮೈಸೂರಿನ ಓರ್ವ ಶಾಸಕರು ಮಾತ್ರ ಉತ್ತರ ನೀಡಿದ್ದರು. ಕರಾವಳಿಯ ಯಾವೊಬ್ಬ ಶಾಸಕರೂ ಪ್ರತಿಕ್ರಿಯೆ ನೀಡಲಿಲ್ಲ. ನದಿ ಸುರಕ್ಷತೆ ಬಗ್ಗೆ ನಿರ್ಲಕ್ಷé ಧೋರಣೆ ತಳೆದಿರುವುದಕ್ಕೆ ಇದೇ ಉದಾಹರಣೆ ಎನ್ನುತ್ತಾರೆ ದಿನಕರ ಕಾನತ್ತಿಲ.

ರೋಗ ಹರಡುವ ಭೀತಿಯಲ್ಲಿ ಜನತೆ
ಹಲವು ರೋಗಗಳ ಉಗಮ ಕೇಂದ್ರ ವಾಗಿದ್ದ ಸುಳ್ಯ ಸ್ವತ್ಛತೆ ಕುರಿತು ಗಂಭೀರ ವಾಗಿ ಯೋಚಿಸ ಬೇಕಿದೆ. ನಗರದ ನೀರಿನ ದಾಹ ನೀಗಿಸುವ ನದಿ, ಹೊಳೆ ಮಡಿಲನ್ನು ಹತ್ತಾರು ಸಾಂಕ್ರಾಮಿಕ ರೋಗಗಳು ಹಬ್ಬುವ ತಾಣವನ್ನಾಗಿಸುವ ಯತ್ನಕ್ಕೆ ತಡೆ ಒಡ್ಡುವ ಆವಶ್ಯಕತೆ ಇದೆ. ಇಲ್ಲದಿದ್ದರೆ ಮುಂದೊಂದು ದಿನ ನಗರದಲ್ಲಿ ಶುದ್ಧ ನೀರಿಗಾಗಿ ಯುದ್ಧ ನಡೆದರೂ ಅಚ್ಚರಿಯೇನಿಲ್ಲ.

Advertisement

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next