Advertisement

ಕುಳಂಜೆ ಗ್ರಾಮದ ನಿವಾಸಿಗಳಿಗೆ ನದಿ ದಾಟುವ ಸಂಕಷ್ಟ

09:47 PM Oct 06, 2019 | Sriram |

ಕುಂದಾಪುರ: ಶಂಕರ ನಾರಾಯಣ ಸಮೀಪದ ಕುಳಂಜೆ ಗ್ರಾಮದ ಶಿಂಗಿನಕೋಡ್ಲು – ಭರತ್ಕಲ್‌ ಎಂಬಲ್ಲಿ ವಾರಾಹಿ ನದಿಗೆ ನಿರ್ಮಿಸಿದ ಮುಳುಗು ಸೇತುವೆ ತಡೆಬೇಲಿಯಿಲ್ಲದೇ ಗ್ರಾಮಸ್ಥರಿಗೆ ಸಂಕಷ್ಟ ತಂದೊಡ್ಡಿದೆ. ನದಿ ದಾಟುವ ಆತಂಕ ಸದಾ ಇದ್ದೇ ಇದೆ. ಇದಕ್ಕಾಗಿ ಜನ ಸುತ್ತು ಬಳಸುವ ದಾರಿ ಉಪಯೋಗಿಸುತ್ತಿದ್ದಾರೆ.

Advertisement

ಭರತ್ಕಲ್‌ನಲ್ಲಿ ವಾರಾಹಿ ಬಲ ದಂಡೆ 19ನೆ ಕಿ.ಮೀ.ನಲ್ಲಿ ಮೇಲ್ಸೇತುವೆ ವಾರಾಹಿ ಎಡ ದಂಡೆಗೆ ಸಂಪರ್ಕ ಸಾಧಿಸಿದ್ದು ಭರತ್ಕಲ್‌ ಎಂಬ ಈ ಪ್ರದೇಶದಲ್ಲಿ. ಇಲ್ಲಿ ಅಂದು ಮೇಲ್ಸೇತುವೆ ಕೆಳಗಡೆ ನೀರಾವರಿ ಇಲಾಖೆಯವರು ಸ್ಥಳೀಯರ ಆರೋಪದಂತೆ ಅವೈಜ್ಞಾನಿಕವಾಗಿ ಮುಳುಗೇಳುವ  ಸೇತುವೆ ಮಾಡಿದ್ದಾರೆ. ವಾರಾಹಿ ನದಿ ನೀರಿನ ಮಟ್ಟಕ್ಕೆ ಯಾವುದೇ ತಡೆಬೇಲಿ (ಸೇಫ್‌ ಗಾರ್ಡ್‌) ಇಲ್ಲದೆ ನಿರ್ಮಿಸಿದ ಕಾರಣದಿಂದ ಕುಳಂಜೆ ಗ್ರಾಮದ 1ನೆ ವಾರ್ಡ್‌ ಜನರು ಮಳೆ ಇಲ್ಲದ ಸಮಯ, ಅಪಾಯವನ್ನು ಮೈ ಮೇಲೆ ಹಾಕಿಕೊಂಡು ದಾಟಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಸುತ್ತಿ ಬಳಸಿ ತಮ್ಮ ದೈನಂದಿನ ಕೆಲಸಗಳಾದ ಪಂಚಾಯತ್‌ ಕಚೇರಿ ಕೆಲಸ, ಸಹಕಾರಿ ಸಂಘ, ಪಶು ಆಸ್ಪತ್ರೆ, ಪೊಲೀಸ್‌ ಠಾಣೆ, ಅರಣ್ಯ ಇಲಾಖೆ, ಮೆಸ್ಕಾಂಗೆ ಬರಬೇಕಿದೆ. ಇತ್ತೀಚೆಗಂತೂ ಸೇತುವೆಯನ್ನು ಬೆಸೆಯುವ ಕೂಡು ಮಣ್ಣು ರಸ್ತೆಯು ಮಳೆ ನೀರ ರಭಸಕ್ಕೆ ಕೊಚ್ಚಿ ಹೋಗಿದೆ.

ಯಾರಿಗೆಲ್ಲ ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಗೆ ಶಂಕರನಾರಾಯಣ ಹಾಗೂ ಕುಳಂಜೆ ಎಂಬ ಎರಡು ಗ್ರಾಮಗಳು ಸೇರಿ ಒಂದು ಪಂಚಾಯತ್‌ ಆಗಿದೆ. ಕುಳಂಜೆ ಗ್ರಾಮದ 1ನೆ ವಾರ್ಡಿನ ಸುಮಾರು 20 ರಿಂದ 30 ಮನೆಗಳಿರುವ ಮಾವಿನಕೋಡ್ಲು, ಹೆಗ್ಗೊàಡ್ಲು, ಬಾಗಿಮನೆ, ಮಾಂಜುರು, ಭರತ್ಕಲ್‌ ಪ್ರದೇಶವು ಶಂಕರನಾರಾಯಣ ಗ್ರಾಮ ಪಂಚಾಯತ್‌ ಕೇಂದ್ರ ಸ್ಥಳದಿಂದ ಕೇವಲ 1.5 ಕಿ.ಮೀ.ನಿಂದ 2 ಕಿ.ಮೀ. ದೂರದಲ್ಲಿದೆ. ಮಧ್ಯದಲ್ಲಿ ವಾರಾಹಿ ನದಿ ಶಿಂಗಿನಕೋಡ್ಲು – ಭರತ್ಕಲ್‌ ಎಂಬಲ್ಲಿ ಅಡ್ಡ ಬಂದಿರುವುದರಿಂದ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಕುಂದಾಪುರ ವಿಧಾನ ಸಭಾ ಕ್ಷೇತ್ರದ 76- ಹಾಲಾಡಿ ಮತ್ತು 28- ಹಾಲಾಡಿ ಗ್ರಾಮಗಳನ್ನು ಸುತ್ತಿ 8- 10 ಕಿ.ಮೀ. ಸುತ್ತಿ ಹಾಲಾಡಿ ಪೇಟೆಗೆ ಬಂದು ತಮ್ಮ ಗ್ರಾಮ ಪಂಚಾಯತ್‌ ಕೇಂದ್ರ ಸ್ಥಳ ಶಂಕರನಾರಾಯಣಕ್ಕೆ ಬರಬೇಕಾಗಿದೆ. ಜನರಿಗಷ್ಟೇ ಅಲ್ಲ ಜಾನುವಾರುಗಳಿಗೂ ತೊಂದರೆ. ಒಂದು ದಡದಿಂದ ಇನ್ನೊಂದು ದಡಕ್ಕೆ ಹೋಗಲು ಕಷ್ಟಪಡಲೇ ಬೇಕು.

ಉಡುಪಿ ನಗರಕ್ಕೆ ಇಲ್ಲಿಂದಲೇ ಕುಡಿಯುವ ನೀರು
ಇಲ್ಲಿನ ಜನರಿಗೆ ನದಿ ದಾಟಲು ಸರಿಯಾದ ವ್ಯವಸ್ಥೆ ಇಲ್ಲದೆ ಇದ್ದರೂ ಇಲ್ಲಿನ ಭರತ್ಕಲ್‌ ಎಂಬಲ್ಲಿಂದ 170 ಕೋ. ರೂ. ಶುದ್ಧ ಕುಡಿಯುವ ನೀರು ಉಡುಪಿ ನಗರಕ್ಕೆ ಒಂದೆರಡು ವರ್ಷದಲ್ಲೇ ಹೋಗುತ್ತದೆ. ಅದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿದೆ ಎಂದು ಈ ಭಾಗದ ಜನರು ಹೆಮ್ಮೆಯಿಂದ ಹೇಳುತ್ತಾರೆ.

ಕ್ರಮ ಕೈಗೊಳ್ಳಲಾಗುವುದು
ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಮುಳುಗು ಸೇತುವೆಗೆ ಎರಡೂ ಬದಿ ತಡೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಜನರಿಗೆ ತೊಂದರೆಯಾಗಲು ಬಿಡುವುದಿಲ್ಲ.
-ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next