ಯಾದಗಿರಿ: ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ ಜಾಗತಿಕ ತಾಪಮಾನದಿಂದ ಜೀವ ಸಂಕುಲಕ್ಕೆ ಅಪಾಯ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡ-ಮರ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಅಗತ್ಯವಿದೆ. ಹೀಗಾಗಿ ಗ್ರಾಪಂಗಳ ಮೂಲಕ ಗ್ರಾಮಗಳಲ್ಲಿ ಸಸಿ ನಾಟಿಸಿ ಸಮಗ್ರ ಹಸಿರೀಕರಗೊಳಿಸುವ ಜೊತೆ ಪರಿಸರ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ ಹೇಳಿದರು.
ಇಲ್ಲಿನ ತಾಪಂ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಗ್ರಾಮ ಹಸಿರೀಕರಣ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಸಿರೇ, ನಾಡಿನ ಉಸಿರು. ಗಿಡ-ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಿದರೆ ಮನುಷ್ಯನ ಉಸಿರಾಟಕ್ಕೆ ಶುದ್ಧಗಾಳಿ ಸಿಗುತ್ತದೆ. ಉಸಿರಾಟದಿಂದ ಬರುವ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಡಿಮೆಯಾಗಿ ಆರೋಗ್ಯದಿಂದ ಇರಲು ಸಾಧ್ಯ. ಪರಿಸರ ದಿನದ ಅಂಗವಾಗಿ ಯಾದಗಿರಿ ತಾಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗೆ ಒಳಪಟ್ಟ ಗ್ರಾಮಗಳಲ್ಲಿ, ಗ್ರಾಮ ಹಸಿರೀಕರಣ ಅಭಿಯಾನದ ಮೂಲಕ ಗಿಡ-ಮರ ಬೆಳೆಸಿ ಹಸಿರೀಕರಣಗೊಳಿಸಲು ಪ್ರತಿ ಗ್ರಾಪಂಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 1000 ಸಸಿ ನಾಟಿ ಮಾಡಿ ಬೆಳೆಸಲು ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ (ಪಂಚಾಯತ್ ರಾಜ್) ಸಹಾಯಕ ನಿರ್ದೇಶಕ ಖಾಲಿದ್ ಅಹ್ಮದ್, ಸಹಾಯಕ ಲೆಕ್ಕಾಧಿಕಾರಿ ಕಾಶಿನಾಥ, ನರೇಗಾ ಯೋಜನೆಯ ವಿಷಯ ನಿರ್ವಾಹಕ ಅನಸರ ಪಟೇಲ್, ಶಶಿಧರ ಸ್ವಾಮಿ, ಗ್ರಾಪಂ ಕಾರ್ಯದರ್ಶಿ ಗೀತಾರಾಣಿ, ಶರಣಪ್ಪ ಬಂದರವಾಡ, ತಮ್ಮಾರಡ್ಡಿ ಪಾಟೀಲ್, ನರೇಗಾ ತಾಂತ್ರಿಕ ಸಂಯೋಜಕರು, ಬಸಪ್ಪ ಹಾಗೂ ತಾಪಂ ಸಿಬ್ಬಂದಿ ಹಾಜರಿದ್ದರು.