ಹೊಸದಿಲ್ಲಿ: ಎಟಿಎಂನಿಂದ ಸುಲಭವಾಗಿ ದುಡ್ಡೇನೂ ತೆಗೆಯಬಹುದು. ಆದರೆ ಹೀಗೆ ದುಡ್ಡು ತೆಗೆಯುವಾಗ, ತೆಗೆದು ಹೊರಗೆ ಬರುವಾಗ ಸುರಕ್ಷತೆಯಿಲ್ಲ. ಎಟಿಎಂ ಗ್ರಾಹಕರನ್ನೂ ಸೇರಿದಂತೆ ಎಟಿಎಂ ದರೋಡೆ, ಕಳವು ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. 2018 ವರ್ಷವೊಂದರಲ್ಲೇ ಇಂತಹ 303 ಪ್ರಕರಣಗಳು ದಾಖಲಾಗಿದ್ದು, 2018-19 ಆರ್ಥಿಕ ವರ್ಷದಲ್ಲಿ ಇದರ ಪ್ರಮಾಣ 515ಕ್ಕೇರಿದೆ.
ಈ ವಿಚಾರವನ್ನು ಹಣಕಾಸು ಇಲಾಖೆ ಕಾರ್ಯದರ್ಶಿಗಳೇ ಲೋಕಸಭೆಗೆ ಹೇಳಿದ್ದಾರೆ. ಪ್ರಶ್ನೆಯೊಂದಕ್ಕೆ ಮಾಹಿತಿ ನೀಡಿದ ಅವರು, ಹೆಚ್ಚಿನ ಪ್ರಕರಣಗಳು ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣಾಗಳಲ್ಲಿ ವರದಿಯಾಗಿದೆ ಎಂದು ಹೇಳಿದ್ದಾರೆ.
ಇದರೊಂದಿಗೆ ಎಟಿಎಂನಲ್ಲಿ ಕಾರ್ಡ್ ಹಾಕುವ ವೇಳೆ ಮಾಹಿತಿ ಕದ್ದು, ಅಕೌಂಟ್‌ನಿಂದ ಹಣ ಕದಿಯುವ ಪ್ರಕರಣಗಳೂ ಹೆಚ್ಚಾಗಿವೆ. 2019ರ ಆರ್ಥಿಕ ವರ್ಷದಲ್ಲಿ ಮಹಾರಾಷ್ಟ್ರದಲ್ಲಿ ಇಂತಹ 233 ಪ್ರಕರಣಗಳು ವರದಿಯಾಗಿದ್ದರೆ, ದಿಲ್ಲಿಯಲ್ಲಿ 179 ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ದೂರುಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್ಸಿ ಬ್ಯಾಂಕ್‌ಗಳಲ್ಲಿ ದಾಖಲಾಗಿವೆ.
ಎಟಿಎಂ ಕುಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸುರಕ್ಷತೆಗೆ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಇವಿಎಂ ಚಿಪ್ ಆಧರಿತ, ಪಿನ್ ಆಧರಿತವಾಗಿ ಹಣ ಡ್ರಾ ಮಾಡುವಂತೆ ಮಾಡುವುದು, ಕಳ್ಳ ಜಾಲಗಳನ್ನು ನಿಯಂತ್ರಿಸುವುದು, ವಿವಿಧ ರೀತಿಯಲ್ಲಿ ಗ್ರಾಹಕರ ಖಾತೆಗೆ ಕನ್ನ ಹಾಕುವುದನ್ನು ನಿಯಂತ್ರಿಸುವುದು, ಅನಧಿಕೃತ ವ್ಯವಹಾರಗಳನ್ನು ತಡೆಯುವುದು ಇತ್ಯಾದಿಗಳನ್ನು ಮಾಡಲು ಸೂಚನೆ ನೀಡಿದೆ.