Advertisement

ರಾಕೆಟ್ ಉಡಾವಣೆಯಲ್ಲಿ ರಿಸ್ಕ್ ಇದ್ದದ್ದೇ!

05:58 PM Jul 17, 2019 | mahesh |

ತಾಂತ್ರಿಕ ದೋಷ ಎದುರಾದ ಕಾರಣ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಉಡಾವಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಅನೇಕರು ಈ ಅಡಚಣೆಯಿಂದಾಗಿ ನಿರಾಸೆಗೊಂಡಿರುವುದು ಸಹಜವೇ. ಆದರೆ ಉಡಾವಣೆಗೂ ಮುನ್ನವೇ ದೋಷ ಪತ್ತೆಯಾದದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು, ಸಂಭಾವ್ಯ ಅಪಾಯ ತಪ್ಪಿತು ಎನ್ನುತ್ತಾರೆ ಇಸ್ರೋದ ಮಾಜಿ ಅಧ್ಯಕ್ಷ ಜಿ. ಮಾಧವನ್‌ ನಾಯರ್‌. ಈ ಕುರಿತು ರೆಡಿಫ್ ಜಾಲತಾಣಕ್ಕೆ ಅವರು ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ…

Advertisement

•ಚಂದ್ರಯಾನ-2, ತಾಂತ್ರಿಕ ಅಡಚಣೆಗಳಿಂದಾಗಿ ಮುಂದೂಡಲ್ಪಟ್ಟಿದೆ. ಈ ರೀತಿಯ ಯೋಜನೆಗಾಗಿ ವರ್ಷಗಳಿಂದ ದುಡಿದು ಉತ್ಸಾಹದಲ್ಲಿದ್ದವರ ಮೂಡ್‌ ಈಗ ಹೇಗಿದೆ?

ರಾಕೆಟ್ ಲಾಂಚ್ ಎನ್ನುವುದು ಯಾವಾಗಲೂ ರಿಸ್ಕಿ ಕೆಲಸವೇ. ಯಾವ ಸಮಯದಲ್ಲಾದರೂ ಏನಾದರೊಂದು ಅಡಚಣೆ ಎದುರಾಗಬಹುದು. ರಾಕೆಟ್ ಉಡಾವಣೆಗೆ ಸಂಬಂಧಿಸಿದವರಿಗೆಲ್ಲ ಈ ಸಂಗತಿ ತಲೆಯಲ್ಲಿರುತ್ತದೆ. ಭಾರತವಷ್ಟೇ ಅಲ್ಲ, ಬೇರೆ ದೇಶಗಳ ಉದಾಹರಣೆಯನ್ನು ನೋಡಿದರೂ, ಉಡಾವಣಾ ಸ್ಥಳದಲ್ಲಷ್ಟೇ ಅಲ್ಲದೇ, ಹಾರಾಟದ ಸಮಯದಲ್ಲೋ ಅಥವಾ ಕೊನೆಯ ಹಂತದಲ್ಲೋ ವೈಫ‌ಲ್ಯಗಳು ಎದುರಾಗಿರುವುದು ತಿಳಿಯುತ್ತದೆ. ಈ ಬಾರಿ ಕೌಂಟ್ಡೌನ್‌ ಪ್ರಕ್ರಿಯೆಯ ವೇಳೆ ವೈಫ‌ಲ್ಯ ಎದುರಾಯಿತು.

•ಈ ಕ್ಷೇತ್ರದಲ್ಲಿ ವೈಫ‌ಲ್ಯದ ಪ್ರಮಾಣ ಎಷ್ಟಿದೆ?

ಜಾಗತಿಕ ಸರಾಸರಿ ತೆಗೆದುಕೊಂಡರೆ, ಯಶಸ್ಸಿನ ಪ್ರಮಾಣ 90 ಪ್ರತಿಶತದಷ್ಟಿದೆ. ಅಂದರೆ, 10 ಪ್ರತಿಶತದಷ್ಟು ವೈಫ‌ಲ್ಯಗಳು ವಿವಿಧ ಹಂತದಲ್ಲಿ ಎದುರಾಗುತ್ತವೆ. ಸತ್ಯವೇನೆಂದರೆ, ಉಡಾವಣೆಗೂ ಕೆಲ ಕ್ಷಣಗಳ ಮುನ್ನವೇ ತಾಂತ್ರಿಕ ದೋಷಗಳನ್ನು ನಮ್ಮವರು ಪತ್ತೆಹಚ್ಚಿದ್ದಾರೆ, ಅಂದರೆ, ನಮ್ಮ ತಂತ್ರಜ್ಞಾನ ಎಷ್ಟು ಯಶಸ್ವಿಯಾಗಿದೆ ಎನ್ನುವುದನ್ನಿದು ತೋರಿಸುತ್ತದೆ. ತಾಂತ್ರಿಕ ಸಮಸ್ಯೆ ಇದೆ ಎಂದು ರಾಕೆಟ್ನಿಂದ ಎಚ್ಚರಿಕೆ ಬಂದಿತು, ಆ ಎಚ್ಚರಿಕೆಯ ಆಧಾರದಲ್ಲಿ ಉಡಾವಣೆಯನ್ನು ನಿಲ್ಲಿಸಲಾಯಿತು.

Advertisement

•ಇಸ್ರೋದ ಮುಂದಿನ ನಡೆ ಹೇಗಿರಲಿದೆ?

ದೋಷವನ್ನು ಸರಿಪಡಿಸುವ ಕೆಲಸ ಸಾಗುತ್ತಿದೆ. ಒಂದೇ ದಿನದಲ್ಲಿ ಅದು ಪರಿಹಾರವಾಗಬಹುದು, ಇಲ್ಲವೇ, ಒಂದುವಾರವೂ ಹಿಡಿಯಬಹುದು. ಚಂದ್ರಯಾನ ಕಾರ್ಯಕ್ರಮದ ಬಗ್ಗೆ ಹೇಳುವುದಾದರೆ, ಸಮಯದ ನಿರ್ಬಂಧವಿದೆ.

ನಾವು ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗಬೇಕಾದ್ದರಿಂದ, ಚಂದ್ರನ ದಿಕ್ಕನ್ನು ನೋಡಿ ಸರಿಯಾದ ಸಮಯದಲ್ಲಿ ಉಡಾವಣೆ ಕೈಗೊಳ್ಳಬೇಕಾಗುತ್ತದೆ. ಈಗ ಅವಕಾಶವನ್ನು ಕಳೆದುಕೊಂಡರೆ, ಮುಂದಿನ ಅವಕಾಶ ಎದುರಾಗುವುದು ಸೆಪ್ಟೆಂಬರ್‌ನಲ್ಲೇ.

•ಚಂದ್ರ ಯಾವ ಸ್ಥಾನದಲ್ಲಿದ್ದಾನೆ ಎನ್ನುವುದು ನಿರ್ಣಾಯಕವೇ?

ಖಂಡಿತ. ನಾವು ನೇರವಾಗಿ ದಕ್ಷಿಣ ಧ್ರುವದಲ್ಲಿ ಇಳಿಯುವುದಕ್ಕೆ ಅನುಕೂಲವಾಗುವಂಥ ಸ್ಥಾನದಲ್ಲಿ ಚಂದ್ರ ಬರಬೇಕು. ಏನೇ ಇರಲಿ, ಈ ಸಮಸ್ಯೆಯ ಮೇಲೆ ಎಲ್ಲ ಕೆಲಸ ಮಾಡುತ್ತಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಇನ್ನೊಂದೆರಡು ದಿನದಲ್ಲಿ ನಮಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಜುಲೈ ಅಂತ್ಯದವರೆಗೂ ನಮಗೆ ಸಮಯವಿದೆ. ಅದನ್ನು ತಪ್ಪಿಸಿಕೊಂಡರೆ, ಆಗಲೇ ಹೇಳಿದಂತೆ, ಸೆಪ್ಟೆಂಬರ್‌ವರೆಗೂ ಕಾಯಲೇಬೇಕು.

•ಇದುವರೆಗೂ ಯಾವ ದೇಶವೂ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್‌ ಮಾಡಿಲ್ಲ. ಈ ಕಾರ್ಯಕ್ರಮದ ಯಶಸ್ಸು ಭಾರತದ ಪಾಲಿಗೆ ಎಷ್ಟು ಪ್ರಮುಖವಾದದ್ದು?

ಹೌದು, ದಕ್ಷಿಣ ಧ್ರುವವು ಈಗಲೂ ಅಜ್ಞಾತ ಸ್ಥಳವಾಗಿಯೇ ಉಳಿದಿದೆ. ಆ ಪ್ರದೇಶಕ್ಕೆ ಹೋಗಿ, ಸ್ಯಾಂಪಲ್ಗಳನ್ನು ಸಂಗ್ರಹಿಸಿ ಹಿಂದಿರುಗುವುದು ಮಹತ್ತರ ಕಾರ್ಯವೇ ಸರಿ. ನಾವು ಇಲ್ಲಿಂದ ಕಳುಹಿಸುವ ಯಂತ್ರಗಳು ಚಂದ್ರನ ಅಂಗಳದಲ್ಲಿ ಯಾವುದೇ ತೊಂದರೆ ಎದುರಿಸದಿರುವುದು ಬಹಳ ಮುಖ್ಯ. ನಾವು ಸಾಫ್ಟ್ ಲ್ಯಾಂಡಿಂಗ್‌ ಪ್ರಕ್ರಿಯೆಯನ್ನು ಬಳಸಲಿದ್ದೇವೆ. ಈ ರೀತಿಯ ತಂತ್ರಜ್ಞಾನ ಇದುವರೆಗೂ ಅಮೆರಿಕ, ರಷ್ಯಾ ಮತ್ತು ಚೀನಾದ ಬಳಿಯಷ್ಟೇ ಇತ್ತು. ನಮ್ಮ ಕಾರ್ಯಕ್ರಮ ಯಶಸ್ವಿಯಾದರೆ, ಈ ತಂತ್ರಜ್ಞಾನವನ್ನು ಬಳಸಿದ ನಾಲ್ಕನೇ ರಾಷ್ಟ್ರವಾಗುತ್ತೇವೆ. ಲ್ಯಾಂಡರ್‌ ಮತ್ತು ರೋವರ್‌ಗಳನ್ನು ಚಂದ್ರನ ಮೇಲಿಳಿಸಿ, ಅಲ್ಲಿ ರೋವರ್‌ ಸುತ್ತಾಡಿ ಮಣ್ಣಿನ ಗುಣಲಕ್ಷಣಗಳನ್ನು ಹಾಗೂ ನೀರಿನ ಅಂಶವಿರುವ ಭಾಗಗಳನ್ನು ಗುರುತಿಸಲಿವೆ. ಅಲ್ಲದೇ, ಭವಿಷ್ಯದಲ್ಲಿ ಇಂಧನಕ್ಕಾಗಿ ಅಲ್ಲಿ ಹೀಲಿಯಂ ಇದೆಯೇ ಎನ್ನುವುದನ್ನೂ ಈ ಯಂತ್ರ ಪತ್ತೆಹಚ್ಚಲಿದೆೆ. ಇದನ್ನೆಲ್ಲ ನೋಡಿದಾಗ, ನಿಜಕ್ಕೂ ಇದು ವಿಶಿಷ್ಟ ತಂತ್ರಜ್ಞಾನವೇ ಸರಿ.

•ದಕ್ಷಿಣ ಧ್ರುವವನ್ನೇ ಅನ್ವೇಷಿಸಲು ಭಾರತ ನಿರ್ಧರಿಸಿದ್ದೇಕೆ?

ಆ ಭಾಗ ಸೌರ ವಿಕಿರಣಗಳಿಗೆ ಅಷ್ಟಾಗಿ ತೆರೆದುಕೊಂಡಿಲ್ಲ. ಇನ್ನು ಧ್ರುವೀಯ ಭಾಗಗಳಲ್ಲಿ ನೀರು ಇರುವ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ, ಆ ಭಾಗವೇ ಸೂಕ್ತ.

•ನೀವು ಇಸ್ರೋ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲೂ ಹಲವು ಉಡಾವಣೆಗಳು ವಿಫ‌ಲವಾಗಿವೆ. ಅಷ್ಟೆಲ್ಲಾ ಉತ್ಸಾಹದಿಂದ ಸಿದ್ಧಪಡಿಸಿದ ಯೋಜನೆಯೊಂದು ವಿಫ‌ಲವಾದಾಗ ಎದುರಾಗುವ ನಿರಾಸೆೆಯನ್ನು ಹೇಗೆ ತಡೆದುಕೊಂಡಿರಿ?

ನೋಡಿ, ಉಡಾವಣಾ ಸಮಯದಲ್ಲಿ ಸವಾಲು-ವೈಫ‌ಲ್ಯ ಎದುರಾಗಬಹುದು ಎನ್ನುವುದು ನಮಗೆಲ್ಲ ತಿಳಿದಿರುತ್ತದೆ. ಈ ಕಾರಣಕ್ಕಾಗಿಯೇ ಯಾವುದೇ ರೀತಿಯ ಸಂಭವನೀಯ ಘಟನೆಗಳಿಗೂ ನಾವು ಸಿದ್ಧರಿರುತ್ತೇವೆ. ವೈಫ‌ಲ್ಯ ಎದುರಾದಾಗ ನಿರಾಸೆ ಆಗುವುದು ಸಹಜವೇ. ಆದರೆ ಈ ಭಾವನೆಗಳು ಹೆಚ್ಚು ಹೊತ್ತು ಇರುವುದಿಲ್ಲ. ಒಂದು ವೈಫ‌ಲ್ಯದ ನಂತರ ಇಡೀ ತಂಡದ ತಾರ್ಕಿಕ ಯೋಚನೆ ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯ ಎಷ್ಟು ತೀವ್ರವಾಗುತ್ತದೆಂದರೆ, ಸರಿಯಾದ ಫ‌ಲಿತಾಂಶಗಳನ್ನು ಅವರು ತ್ವರಿತವಾಗಿ ಕಂಡುಕೊಳ್ಳುತ್ತಾರೆ.

ಒಂದರ್ಥದಲ್ಲಿ ಈಗಿನ ವೈಫ‌ಲ್ಯದ ಪತ್ತೆಯು ಪರೋಕ್ಷವಾಗಿ ಒಳ್ಳೆಯದೇ ಆಯಿತು. ಉಡ್ಡಯನಕ್ಕೂ ಮುನ್ನವೇ ಸಮಸ್ಯೆಯನ್ನು ಪತ್ತೆಹಚ್ಚಿಬಿಟ್ಟಿದ್ದೇವೆ.

•ತಾಂತ್ರಿಕ ದೋಷ ಎದುರಾಗಿದೆ ಎಂದಾಗ ನಿಮ್ಮ ಭಾವನೆ ಹೇಗಿತ್ತು?

ಆಗಲೇ ಹೇಳಿದೆನಲ್ಲ…ಸಮಸ್ಯೆ ಮೊದಲೇ ಪತ್ತೆಯಾದದ್ದು ಒಳ್ಳೆಯದೇ ಆಯಿತು. ಇದು ಗಮನಕ್ಕೆ ಬರದೇ ಹೋಗಿದ್ದರೆ ಇಡೀ ಮಿಷನ್‌ ಹಾಳಾಗುವ ಸಾಧ್ಯತೆಯಿತ್ತು. ಭೂಮಿಯ ಮೇಲೆ ಬಹುತೇಕ ದೋಷಗಳನ್ನು ಪರಿಹರಿಸಿದರೆ, ಆಕಾಶದಲ್ಲಿ ಕಡಿಮೆ ಸಮಸ್ಯೆಗಳು ಎದುರಾಗುತ್ತವೆ.

•ಭಾರತಕ್ಕೆ ಚಂದ್ರಯಾನ ಮತ್ತು ಮಂಗಳಯಾನದಲ್ಲಿ ಯಾವುದು ಅತೀ ಮುಖ್ಯ ಯೋಜನೆ?

ಇನ್ನೂ 10 ವರ್ಷದಲ್ಲಿ ಈ ಎರಡೂ ಕಾರ್ಯಕ್ರಮಗಳು ಭಾರತಕ್ಕೆ ಸಮಾನವಾಗಿ ಮುಖ್ಯವಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next