ಮಂಡ್ಯ: ಮಾದಕ ವಸ್ತುಗಳು ಮನುಷ್ಯನ ವಿರೋಧಿ ವಸ್ತುಗಳು. ಯುವಕರನ್ನು ದಾಸರಾಗಿ ಮಾಡಿಕೊಂಡು ಅವರ ಜೀವನವನ್ನು ನಾಶ ಮಾಡುತ್ತದೆ. ಪ್ರಾಥಮಿಕವಾಗಿಯೇ ಯುವಜನರಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಅರಿವು ಮೂಡಿಸುವುದು ಅವಶ್ಯ ಎಂದು ಡೀಸಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರಕ್ಷಕ ಇಲಾಖೆ, ಅಬಕಾರಿ ಇಲಾಖೆ, ಮನೋರೋಗ ವಿಭಾಗ ಮಿಮ್ಸ್ ಸಂಯುಕ್ತಾಶ್ರದಲ್ಲಿ ನಡೆದ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧ ದಿನಾಚರಣೆಯಲ್ಲಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುವ ಸಾಧ್ಯತೆ ಇದೆ.
ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಸರ್ಕಾರಗಳು ಕಠಿಣ ಶಿಕ್ಷೆ ನೀಡುವ ಕಾನೂನು ಜಾರಿ ಮಾಡಿವೆ. ಈ ಸೇವನೆಯಿಂದ ದೂರವಿದ್ದು, ಇದರ ಬಗ್ಗೆ ಜಾಗೃತರಾಗಿರಬೇಕು ಎಂದರು.
ಯುವಕರಲ್ಲಿ ಜಾಗೃತಿ ಮೂಡಿಸಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ ಮಾತನಾಡಿ, ಯುವ ಸಮೂಹವು ಒಳ್ಳೆಯ ವಿಚಾರ, ಸಂಸ್ಕೃತಿ ರೂಢಿಸಿಕೊಳ್ಳಬೇಕು. ಈ ವಿಚಾರವಾಗಿ ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರು ಮಕ್ಕಳು, ಯುವಕರಲ್ಲಿ ಜಾಗೃತಿ ಮೂಡಿಸಬೇಕು. ಡ್ರಗ್ಸ್‌ನಂತಹ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಕಂಡುಬಂದಲ್ಲಿ ನಾಗರಿಕ ಸಮಾಜದವರು ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಸ್ತ್ರದ್‌ಮಠ, ಜಿಲ್ಲಾ ಆರೋಗ್ಯಾಧಿಕಾರಿ ಮಂಚೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಉಪಸ್ಥಿತರಿದ್ದರು.