ಲಂಡನ್: ಬ್ರಿಟನ್‌ನ ಪ್ರಧಾನಮಂತ್ರಿ ಹುದ್ದೆಗೆ ಸ್ಪರ್ಧಿಸುವುದಾಗಿ ವಿತ್ತ ಖಾತೆ ಮಾಜಿ ಸಚಿವ, ಇನ್ಫೋಸಿಸ್ ಸಂಸ್ಥಾಪಕ ಡಾ.ಎನ್.ಆರ್.ನಾರಾಯಣಮೂರ್ತಿಯವರ ಅಳಿಯ ರಿಷಿ ಸುನಕ್ ಘೋಷಣೆ ಮಾಡಿದ್ದಾರೆ. ಸದ್ಯ ಅವರಿಗೆ 133 ಸಂಸದರು ಬೆಂಬಲ ಘೋಷಿಸಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು “ನಮ್ಮ ಯುಕೆ ಅದ್ಭುತ ದೇಶ. ಅಂಥ ದೇಶಕ್ಕೆ ಈಗ ವಿತ್ತೀಯ ಬಿಕ್ಕಟ್ಟು ಕಾಡುತ್ತಿದೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕನ್ಸರ್ವೇಟಿವ್ ಪಕ್ಷದ ನಾಯಕನ ಹುದ್ದೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ನಿಮ್ಮ ಮುಂದಿನ ಪ್ರಧಾನಿಯಾಗಲು ಬಯಸುತ್ತೇನೆ. ನಮ್ಮ ದೇಶದ ಅರ್ಥ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ. ಜತೆಗೆ ಪಕ್ಷವನ್ನೂ ಬಲಪಡಿಸುತ್ತೇನೆ, ಸದೃಢ ದೇಶ ನಿರ್ಮಾಣದ ಬಯಕೆ ಹೊಂದಿದ್ದೇನೆ’ ಎಂದು ಬರೆದುಕೊಂಡಿದ್ದೇನೆ. ಅದಕ್ಕೆ ಪೂರಕವಾಗಿ ಗೃಹ ಸಚಿವ ಗ್ರ್ಯಾಂಟ್ ಶಾಪ್ಸ್ ಕೂಡ ಸುನಕ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಜಾನ್ಸನ್ ಸ್ಪರ್ಧೆ:
ಇದೇ ವೇಳೆ, ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ 2ನೇ ಅವಧಿಗೆ ಅದೃಷ್ಟ ಪರೀಕ್ಷೆಗೆ ಇಳಿಯಲು ಮುಂದಾಗಿದ್ದಾರೆ. ಗಮನಾರ್ಹ ಅಂಶವೆಂದರೆ, ಜಾನ್ಸನ್ ಬೆಂಬಲಿಗರು ಕೂಡ 100 ಸಂಸದರ ಬೆಂಬಲ ಇದೆ ಎಂದು ಹೇಳಿಕೊಂಡಿದ್ದರೂ, ಅಧಿಕೃತವಾಗಿ ಅವರನ್ನು ಬೆಂಬಲಿಸಿದವರ ಸಂಖ್ಯೆ 60 ಮೀರಿಲ್ಲ.
ಇಬ್ಬರ ಭೇಟಿ:
ಈ ಎಲ್ಲಾ ಬೆಳವಣಿಗೆಗಳ ನಡುವೆ, ಬೋರಿಸ್ ಹಾಗೂ ಸುನಕ್ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದು ಬೆಳವಣಿಗೆಯಲ್ಲಿ ಪ್ರಧಾನಿ ಹುದ್ದೆ ಆಕಾಂಕ್ಷಿಯಾಗಿರುವ ಪೆನ್ನಿ ಮಾರ್ಡೆಂಟ್, ಬೋರಿಸ್‌ರನ್ನು ಭೇಟಿಯಾಗಿ, ಬೆಂಬಲ ವ್ಯಕ್ತಪಡಿಸಿರುವ ವರದಿಗಳು ಸುಳ್ಳು ಎಂದಿದ್ದಾರೆ.