ನವದೆಹಲಿ: ಮುಂಬರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಗೈರು ಭಾರತವನ್ನು ಖಂಡಿತವಾಗಿಯೂ ಕಾಡಲಿದೆ ಎಂಬುದಾಗಿ ಕಾಂಗರೂ ನಾಡಿನ ಮಾಜಿ ಆಟಗಾರ ಇಯಾನ್ ಚಾಪೆಲ್ ಹೇಳಿದ್ದಾರೆ.
ರಿಷಭ್ ಪಂತ್ ಕೇವಲ ಕೀಪರ್ ಮಾತ್ರವಲ್ಲ, ಮಧ್ಯಮ-ಕೆಳ ಕ್ರಮಾಂಕದ ಹಾರ್ಡ್ ಹಿಟ್ಟಿಂಗ್ ಬ್ಯಾಟರ್ ಕೂಡ ಆಗಿದ್ದಾರೆ. ಟೆಸ್ಟ್‌ನಲ್ಲೂ ಬಿರುಸಿನ ಗತಿಯಲ್ಲಿ ರನ್ ಪೇರಿಸಬಲ್ಲ ಸಾಮರ್ಥ್ಯ ಅವರಲ್ಲಿದೆ. ಈ ಸ್ಥಾನಕ್ಕೆ ಯಾರೇ ಬಂದರೂ ಅವರಿಗೆ ಪಂತ್ ಅವರಂತೆ ಎದುರಾಳಿ ಬೌಲರ್‌ಗಳ ಮೇಲೆ ಪ್ರಭುತ್ವ ಸಾಧಿಸಲು ಸಾಧ್ಯವಿಲ್ಲ ಎಂಬುದಾಗಿ ಚಾಪೆಲ್ ಅಭಿಪ್ರಾಯಪಟ್ಟರು.
ಸ್ಪಿನ್ನರ್ ನಥನ್ ಲಿಯಾನ್ ಭಾರತದ ಟ್ರ್ಯಾಕ್‌ಗಳಲ್ಲಿ ಮಿಂಚುವ ಎಲ್ಲ ಸಾಧ್ಯತೆ ಇದೆ. ಆಸ್ಟ್ರೇಲಿಯದ ವೇಗದ ಪಡೆಯೂ ಘಾತಕವಾಗಿದೆ. ಪ್ಯಾಟ್ ಕಮಿನ್ಸ್, ಜೋಶ್ ಹೇಝಲ್‌ವುಡ್, ಮಿಚೆಲ್ ಸ್ಟಾರ್ಕ್ ಅಗ್ರ ಕ್ರಮಾಂಕದ ಮೇಲೆರಗುವ ಎಲ್ಲ ಸಾಧ್ಯತೆ ಇದೆ. ಆಲ್‌ರೌಂಡರ್ ಕ್ಯಾಮರಾನ್ ಗ್ರೀನ್ ಶೀಘ್ರವೇ ಲಯ ಕಂಡುಕೊಳ್ಳುವ ವಿಶ್ವಾಸವಿದೆ.
2004ರ 4 ಪಂದ್ಯಗಳ ಸರಣಿಯಲ್ಲಿ ಗ್ಲೆನ್ ಮೆಕ್‌ಗ್ರಾತ್, ಜೇಸನ್ ಗಿಲೆಸ್ಪಿ ಜೋಡಿ 34 ವಿಕೆಟ್ ಕೆಡವಿತ್ತು. ಇದೇ ಸರಣಿಯಲ್ಲಿ ಶೇನ್ ವಾರ್ನ್ 14 ವಿಕೆಟ್ ಉರುಳಿಸಿದ್ದರು’ ಎಂಬುದಾಗಿ ಚಾಪೆಲ್ ಹೇಳಿದರು.