ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ ರಿಷಬ್ ಶೆಟ್ಟಿ ಅವರ ʼಕಾಂತಾರʼ ಸಿನಿಮಾದ 100 ದಿನದ ಸಂಭ್ರಮದ ಕಾರ್ಯಕ್ರಮ ಬೆಂಗಳೂರಿನ ವಿಜಯನಗರದಲ್ಲಿರುವ ಬಂಟರ ಭವನದಲ್ಲಿ ನಡೆಯಿತು.
ಕಾರ್ಯಕ್ರಮಕ್ಕಾಗಿ ಬಂಟರ ಭವನ ʼಕಾಂತಾರʼದ ಸೆಟ್ ನ ಹಾಗೆ ಬದಲಾಗಿತ್ತು. ಇಡೀ ಬಂಟರ ಭವನವನ್ನು ತುಳುನಾಡಿನ ಸಂಪ್ರದಾಯದಂತೆ ಶೃಂಗರಿಸಲಾಗಿತ್ತು.
ಸಿನಿಮಾದ ಯಶಸ್ವಿಗಾಗಿ ದುಡಿದ ಪ್ರತಿಯೊಬ್ಬ ಕಲಾವಿದ, ತಾಂತ್ರಿಕ ತಂಡದವರಿಗೆ ಚಿತ್ರ ತಂಡ ಸ್ಮರಣಿಕೆಯನ್ನು ನೀಡಿತು.
ಕನ್ನಡ ಸಿನಿಮಾ ರಂಗದಲ್ಲಿ 100 ಡೇಸ್ ಕಾರ್ಯಕ್ರಮ ಇತ್ತೀಚಿನ ದಿನಗಳಲ್ಲಿ ನಡೆಯುವುದು ಕಡಿಮೆ. ಕಾಂತಾರ ತಂಡ ಸಿನಿಮಾ ನೂರು ದಿನ ಓಡಿದ ಸಂಭ್ರಮವನ್ನು ಕಾರ್ಯಕ್ರಮ ಮಾಡಿ, ಸಿನಿಮಾದ ಯಶಸ್ಸಿಗೆ ಕಾರಣಿಕರ್ತರಾದ ಪ್ರೇಕ್ಷಕರಿಗೆ ಧನ್ಯವಾದವನ್ನು ಸಲ್ಲಿಸಿತು.
Related Articles
ವೇದಿಕೆಯಲ್ಲಿ ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ”ಎಲ್ಲರೂ ಕಾಂತಾರ -2 ಸಿನಿಮಾ ಯಾವಾಗ ಬರುತ್ತದೆ ಎಂದು ಕೇಳುತ್ತಿದ್ದಾರೆ. ಸಿನಿಮಾವನ್ನು ನೋಡಲು ಜನ ಕುತೂಹಲದಿಂದ ಕಾಯುತ್ತಿದ್ದಾರೆ. ಈಗ ನೀವು ನೋಡಿರುವುದೇ ʼಕಾಂತಾರ-2”, ಮುಂದೆ ಬರುವುದು ಕಾಂತಾರ ಪಾರ್ಟ್ -1. ಶೀಘ್ರದಲ್ಲಿ ಇದರ ಕೆಲಸ ಆರಂಭವಾಗುತ್ತದೆ ಎಂದು ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ನೀಡಿದರು.
ಮುಂದುವರೆದು ಮಾತನಾಡಿದ ಅವರು ಕುಂದಾರಪುರದ ಕೆರಾಡಿ ಅಂತಹ ಒಂದು ಸಣ್ಣ ಊರಿನಲ್ಲಿ ಚಿತ್ರೀಕರಣಗೊಂಡ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಬೇಕಾದರೆ ಅದಕ್ಕೆ ಕಾರಣ ಹೊಂಬಾಳೆ ಫಿಲ್ಮ್ಸ್. ಹೊಂಬಾಳೆ ಫಿಲ್ಮ್ಸ್ ನಿಂದಲೇ ಇವತ್ತು ʼಕಾಂತಾರʼ ಇಷ್ಟು ಮಟ್ಟದಲ್ಲಿ ಸೌಂಡ್ ಮಾಡಿರುವುದು. ಸಿನಿಮಾಕ್ಕೆ ಬಜೆಟ್ ಎನ್ನುವುದು ಮುಖ್ಯವಲ್ಲ ಕಂಟೆಂಟ್ ಮುಖ್ಯ ಎನ್ನುವುದು ನಮ್ಮ ಚಿತ್ರ ಚಿತ್ರ ತೋರಿಸಿಕೊಟ್ಟಿದೆ ಎಂದರು.
ನೆಟ್‌ಫ್ಲಿಕ್ಸ್ ಅವರು ಇಂಗ್ಲೀಷ್ ನಲ್ಲಿ ಡಬ್ ಮಾಡಿ ರಿಲೀಸ್ ಮಾಡಲು ರೆಡಿಯಾಗಿದ್ದಾರೆ. ಒಂದು ವೇಳೆ ಅದು ಸಾಧ್ಯವಾದರೆ 7 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಅದಂತೆ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಿರ್ಮಾಪಕರು, ಕಲಾವಿದರು ಸೇರಿದಂತೆ ಅನೇಕ ಮಂದಿ ಭಾಗಿಯಾಗಿದ್ದರು.