ಬೆಂಗಳೂರು: ʼಕಾಂತಾರʼದ ಬಳಿಕ ಗ್ಲೋಬಲ್ ಸ್ಟಾರ್ ಆದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಹೊಸತೊಂದು ಹೆಜ್ಜೆಯಿಡುವ ಮೂಲಕ ನವ ಕನಸಿನ ಯಾತ್ರೆಯನ್ನು ಶುರು ಮಾಡಲು ಹೊರಟಿದ್ದಾರೆ.
400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ʼಕಾಂತಾರʼ ಗ್ಲೋಬಲ್ ಮಟ್ಟದಲ್ಲಿ ಮಿಂಚು ಹರಿಸಿತ್ತು. ಸಿನಿಮಾದ ಎರಡನೇ ಭಾಗದ ಬಗ್ಗೆಯೂ ಅಷ್ಟೇ ದೊಡ್ಡಮಟ್ಟದ ನಿರೀಕ್ಷೆಯಿದೆ. ʼಕೆರಾಡಿʼ ರಿಷಬ್ ಶೆಟ್ಟಿ ಹುಟ್ಟಿ ಬೆಳೆದ ಊರು, ಬಾಲ್ಯ ಕಳೆದ ಊರು. ಬಾಲ್ಯದ ಹೆಜ್ಜೆಯಿಟ್ಟ ಊರನ್ನು ಸಿನಿಮಾ ಪರದೆ ಮೇಲೆ ತೋರಿಸಿದ ರಿಷಬ್ ಇದೀಗ ಅದೇ ಊರನ್ನು ಮತ್ತೆ ದೊಡ್ಡಮಟ್ಟದಲ್ಲಿ ʼಪ್ರಚಾರʼ ಮಾಡಲು ಹೊರಟಿದ್ದಾರೆ.
ಸಿನಿಮಾ ಸಂಬಂಧಿತ ಪ್ರಚಾರ, ಮಾರ್ಕೆಟಿಂಗ್ , ಇವೆಂಟ್ ಲಾಂಚ್ ಮುಂತಾದ ಕೆಲಸಕ್ಕಾಗಿ ʼಕೆರಾಡಿ ಸ್ಟುಡಿಯೋಸ್ʼ ವೇದಿಕೆಯಾಗಲಿದೆ.
ಈ ಬಗ್ಗೆ ರಿಷಬ್ ಟ್ವೀಟ್ ಮಾಡಿದ್ದೀಗೆ.. ಒಂದು ಸಿನಿಮಾದ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ.. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ಇಂದು ನಮ್ಮ ತಂಡ ಹೊಸ ಹೆಜ್ಜೆ ಇರಿಸುತ್ತಿದೆ, ‘ಕೆರಾಡಿ ಸ್ಟುಡಿಯೋಸ್ ಎಂಬ ವೇದಿಕೆಯ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ್ದೇವೆ. ಇದು ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ನಡುವೆ ಸೇತುವೆ ಆಗಬೇಕೆಂಬುದೇ ನಮ್ಮ ಆಶಯ.
Related Articles
ಅಂದ ಹಾಗೆ ಕೆರಾಡಿ.. ನಾನು ಹುಟ್ಟಿ ಬೆಳೆದ, ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಊರು. ಎಲ್ಲಕ್ಕಿಂತಲೂ ಹೆಚ್ಚಾಗಿ, ನನ್ನೊಳಗೆ ಸಿನಿಮಾದ ಕನಸು ಹುಟ್ಟಿದ್ದು ಇಲ್ಲೇ! ಈ ಪ್ರಯತ್ನವನ್ನು ನನ್ನ ಕೆರಾಡಿಗೆ ಅರ್ಪಿಸಿ, ಚಿತ್ರರಂಗಕ್ಕೆ ನಮ್ಮ ಅಳಿಲು ಸೇವೆಯನ್ನು ಮುಂದುವರೆಸಲಿದ್ದೇವೆ. ನಿಮ್ಮ ಸಹಕಾರವಿರಲಿ ಎಂದು ರಿಷಬ್ ಹೇಳಿದ್ದಾರೆ.
ಈಗಾಗಲೇ ʼರಿಷಬ್ ಶೆಟ್ಟಿ ಫಿಲ್ಮ್ಸ್ʼ ಮೂಲಕ ಅನೇಕ ಸಿನಿಮಾ, ಕಿರುಚಿತ್ರದ ನಿರ್ಮಾಣ ಮಾಡಿರುವ ರಿಷಬ್ ಶೆಟ್ಟಿ ಅವರು ಈಗ ʼಕೆರಾಡಿ ಸ್ಟುಡಿಯೋಸ್ʼ ಮೂಲಕ ಸಿನಿಮಾರಂಗದಲ್ಲಿ ಹೊಸ ಹೆಜ್ಜೆಯನ್ನಿಟ್ಟಿದ್ದಾರೆ.