ಬೆಂಗಳೂರು: ಈಚೆಗೆ ಕಾರಿನ ಮೇಲೆ ಮರಬಿದ್ದು ಮೃತಪಟ್ಟ ಜಗದೀಶ್ ಅವರ ಕುಟುಂಬಕ್ಕೆ ಬಿಬಿಎಂಪಿ ನೀಡಿದ್ದ ಪರಿಹಾರ ಮೊತ್ತದ ಹಂಚಿಕೆ ವಿಚಾರದಲ್ಲಿ ಜಗದೀಶ್ ಪತ್ನಿ ಹಾಗೂ ಪೋಷಕರ ನಡುವೆ ತಿಕ್ಕಾಟ ಶುರುವಾಗಿದೆ.
ಕಳೆದ ಸೆ. 8ರಂದು ಸಂಜೆ ನಗರದಲ್ಲಿ ಸುರಿದ ಗಾಳಿಸಹಿತ ಭಾರಿ ಮಳೆಗೆ ಕಾರಿನ ಮೇಲೆ ಮರಬಿದ್ದು ಜಗದೀಶ್ ಸೇರಿದಂತೆ ಒಂದೇ ಕುಟುಂಬದ ಮೂವರು ಮೃತ ಪಟ್ಟಿದ್ದರು. ಆಗ ಬಿಬಿಎಂಪಿಯು ಮೃತ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಹಾಗೂ ಉದ್ಯೋಗ ನೀಡುವ ಭರವಸೆ ನೀಡಿತ್ತು. ಬಳಿಕ ಸೆ. 11ರಂದು ಮೇಯರ್ ಜಿ. ಪದ್ಮಾವತಿ, ಜಗದೀಶ್ ಪತ್ನಿ ರೂಪಾಗೆ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದ್ದರು.
ನಂತರದಲ್ಲಿ ರೂಪಾ ಹಾಗೂ ಜಗದೀಶ್ ಫೋಷಕರ ನಡುವೆ ಪರಿಹಾರದ ಮೊತ್ತಕ್ಕಾಗಿ ಪರಸ್ಪರ ತಿಕ್ಕಾಟ ಶುರುವಾಗಿದೆ. ಈ ಮಧ್ಯೆ ಮೇಯರ್ ಅವರನ್ನು ಭೇಟಿ ಮಾಡಿದ ಜಗದೀಶ್ ತಂದೆ-ತಾಯಿ, “ಇರುವ ಒಬ್ಬ ಮಗ ಜಗದೀಶ್ ಮೃತಪಟ್ಟಿದ್ದಾನೆ. ನಮ್ಮನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಹಾಗಾಗಿ,ಪರಿಹಾರದ ಮೊತ್ತದಲ್ಲಿ ತಮಗೂ ಪಾಲು ನೀಡಬೇಕು’ ಎಂದು ಮನವಿ ಮಾಡಿದರು.
ಈ ಹಿನ್ನೆಲೆಯಲ್ಲಿ ಮೇಯರ್ ಹಾಗೂ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ಜಗದೀಶ್ ತಂದೆ-ತಾಯಿಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಹಾಗೂ ಪರಿಹಾರದ ಮೊತ್ತದಲ್ಲಿ ಪೋಷಕರಿಗೂ ಸ್ವಲ್ಪ ಹಣ ನೀಡುವಂತೆ ರೂಪಾಗೆ ತಿಳಿಸಿದರು. ಆದರೆ, ಇದಕ್ಕೆ ಒಪ್ಪದ ರೂಪಾ, ತಮಗೂ ಮಕ್ಕಳು ಇರುವುದರಿಂದ ಅವರನ್ನು ಸಾಕುವ ಹೊಣೆ ಇದೆ. ಹಾಗಾಗಿ, ಸಂಪೂರ್ಣ ಪರಿಹಾರ ಮೊತ್ತವನ್ನು ತನಗೇ ನೀಡಬೇಕು ಎಂದು ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಜಿ. ಪದ್ಮಾವತಿ, ಮೃತ ಜಗದೀಶ್‌ಗೆ ವೃದ್ಧ ತಂದೆ-ತಾಯಿಗಳಿದ್ದಾರೆ. ಅವರಿಗೆ ಬೇರೆ ಯಾರೂ ಇಲ್ಲ. ಹಾಗಾಗಿ, ಅವರಿಗೂ ನೆರವು ನೀಡುವ ಉದ್ದೇಶದಿಂದ ಪರಿಹಾರದ ಮೊತ್ತ ಡ್ರಾ ಮಾಡಿಕೊಳ್ಳದಂತೆ ತಡೆಹಿಡಿಯಲಾಗಿದೆ. ಉಳಿದಂತೆ ಅಂದಿನ ಘಟನೆಯಲ್ಲಿ ಮೃತಪಟ್ಟ ಅರುಣ್, ಭಾರತಿ, ರಮೇಶ್ ಅವರಿಗೆ ನೀಡಿದ್ದ ಪರಿಹಾರದ ಮೊತ್ತ ಬಿಡುಗಡೆ ಮಾಡಲಾಗಿದೆ. ಜಗದೀಶ್ ತಂದೆ ಮತ್ತು ತಾಯಿಗೆ ತಲಾ 50 ಸಾವಿರ ರೂಪಾಯಿ ಹಾಗೂ ಜಗದೀಶ್ ಪತ್ನಿಗೆ 4 ಲಕ್ಷ ರೂಪಾಯಿ, ರೂಪಾಗೆ ಉದ್ಯೋಗದ ಭರವಸೆ ನೀಡಲಾಗಿದೆ ಎಂದರು.
ಮೃತ ಜಗದೀಶ್ ತಂದೆ ತಾಯಿ ಪರಿಹಾರ ವಿಚಾರದಲ್ಲಿ ತಕರಾರು ಅರ್ಜಿ ಸಲ್ಲಿಸಿದ ಹಿನ್ನೆಯಲ್ಲಿ ಪರಿಹಾರವನ್ನು ತಡೆಹಿಡಿಯಲಾಗಿದೆ. ಪಾಲಿಕೆಯಲ್ಲಿ ಹಣದ ಲಭ್ಯತೆಯಿದ್ದು. ಯಾವುದೇ ಚೆಕ್‌ಗಳು ಬೌನ್ಸ್ ಆಗಿಲ್ಲ.
-ಮಹದೇವ್ ಮುಖ್ಯ ಲೆಕ್ಕಾಧಿಕಾರಿ ಬಿಬಿಎಂಪಿ
ನನಗೆ ಇಬ್ಬರೂ ಮಕ್ಕಳಿದ್ದಾರೆ ಅವರ ಭವಿಷ್ಯ ನೋಡಬೇಕಾಗಿದೆ. ಬೇರೆ ಯಾವುದೇ ಆದಾಯವಿಲ್ಲ. ಜಗದೀಶ್ ಬದುಕಿದ್ದ ಸಂದರ್ಭದಲ್ಲಿ ಯಾರೂ ನಮ್ಮನ್ನು ನೀಡಿಲ್ಲ. ಈಗ ಪರಿಹಾರಕ್ಕಾಗಿ ಬಂದಿದ್ದಾರೆ.
-ರೂಪಾ (ಮೃತ ಜಗದೀಶ್ ಪತ್ನಿ)