Advertisement

ಗಲಭೆ ಪ್ರಚೋದನೆಗೆ ಅವಕಾಶ ನೀಡುವುದಿಲ್ಲ: ಎಸ್‌ಪಿ

06:25 PM Jan 19, 2022 | Team Udayavani |

ನರಗುಂದ: ಪಟ್ಟಣದಲ್ಲಿ ಎರಡು ಕೋಮುಗಳ ಮಧ್ಯೆ ನಡೆದ ಗಲಭೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ಕೋಮು ಗಲಭೆ ಪ್ರಚೋದನೆಗೆ ಅವಕಾಶ ನೀಡುವುದಿಲ್ಲ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.

Advertisement

ಕೋಮು ಗಲಭೆ ಹಿನ್ನೆಲೆಯಲ್ಲಿ ಪಟ್ಟಣದಲ್ಲೇ ಠಿಕಾಣಿ ಹೂಡಿರುವ ಅವರು, ಮಂಗಳವಾರ ಸಾಯಂಕಾಲ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಘಟನೆಯ ಪ್ರಚೋದನೆಗೆ ಕಾರಣರಾದವರನ್ನು ವಶಕ್ಕೆ ಪಡೆಯುವ ಕಾರ್ಯ ನಡೆದಿದೆ. ಘಟನೆಗೆ ಸಂಬಂ ಧಿಸಿದಂತೆ ಸಾಮಾಜಿಕ ಜಾಲತಾಣ, ಫೇಸ್‌ಬುಕ್‌, ವಾಟ್ಸ್ ಆ್ಯಪ್‌ಗ್ಳಲ್ಲಿ ಯಾವುದೇ ಪ್ರಚೋದನಕಾರಿ ಸಂದೇಶ ಕಳಿಸುವಂತಿಲ್ಲ. ಈ ಬಗ್ಗೆ ನಿಗಾ ವಹಿಸಲಾಗಿದೆ.

ನ.27ರಿಂದ ಇದುವರೆಗೂ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ಎರಡೂ ಕೋಮುಗಳಲ್ಲಿ 150 ಜನರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಘಟನೆಗೆ ಸಂಬಂ ಧಿಸಿದಂತೆ ಮಲ್ಲಿಕಾರ್ಜುನ ಹಿರೇಮಠ(22), ಚನ್ನು ಅಕ್ಕಿ(19), ಸಕ್ರೆಪ್ಪ ಕಾಕನೂರ(19), ಸಂಜೀವ ನಲವಡೆ(42) ಸೇರಿದಂತೆ ನಾಲ್ವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಓರ್ವ ತಲೆಮರೆಸಿಕೊಂಡಿದ್ದಾನೆ ಎಂದರು.

ಚಾಕು ಇರಿತ-ಓರ್ವ ಸಾವು: ಸೋಮವಾರ ರಾತ್ರಿ 7.15 ಗಂಟೆಗೆ ಸ್ಥಳೀಯ ಪುರಸಭೆ ಹಿಂಭಾಗ ಬೈಕ್‌ನಲ್ಲಿ ಹೊರಟಿದ್ದ ಇಬ್ಬರನ್ನು ತಡೆದು ಚಾಕುವಿನಿಂದ ಇರಿಯಲಾಗಿತ್ತು. ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನೂ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆ ಪೈಕಿ ಸಮೀರ ಸುಬಾನಸಾಬ ಶಹಪುರ(20) ಮಂಗಳವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇನ್ನೋರ್ವ ಗಾಯಾಳು ಶಮಸೀರಖಾನ ಪಠಾಣ(22) ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದೆ ಎಂದರು. ಡಿಎಸ್‌ಪಿಗಳಾದ ಶಂಕರ ರಾಗಿ, ಶಿವಾನಂದ ಪವಾಡಶೆಟ್ಟಿ, ವಿಜಯ ಬಿರಾದಾರ, ಸಿಪಿಐ ನಂದೀಶ್ವರ ಕುಂಬಾರ ಇದ್ದರು.

ಭಾರೀ ಬಿಗಿ ಬಂದೋಬಸ್ತ್
ನರಗುಂದ: ಪಟ್ಟಣದಲ್ಲಿ ಎರಡು ಕೋಮುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಗಲಭೆ ನಡೆದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿದೆ. ಪಟ್ಟಣ ಹೊರವಲಯದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಹಾಗೂ ಸವದತ್ತಿ ರಾಜ್ಯ ಹೆದ್ದಾರಿಯಲ್ಲಿ ಎರಡು ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. 4 ಡಿಎಆರ್‌ ತುಕಡಿ ಸದ್ಯ ಕಾರ್ಯನಿರ್ವಹಿಸುತ್ತಿದ್ದು, 1 ಕೆಎಸ್‌ಆರ್‌ಪಿ ತುಕಡಿ ಬರುವ ನಿರೀಕ್ಷೆಯಿದೆ. 2 ಡಿಎಸ್‌ಪಿ, 5 ಸಿಪಿಐ, 7 ಪಿಎಸ್‌ಐ, ಜಿಲ್ಲೆಯಿಂದ 60 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next