ಕೋಲ್ಕತಾ: ಆತಿಥೇಯ ಕೋಲ್ಕತಾ ನೈಟ್‌ರೈಡರ್ ಎದುರಿನ ಸೋಮವಾರ ರಾತ್ರಿಯ ಪಂದ್ಯ ವನ್ನು ಪಂಜಾಬ್ ಕಿಂಗ್ಸ್ ಕೊನೆಯ ಎಸೆತದಲ್ಲಿ ಕಳೆದುಕೊಂಡಿದೆ. ಅಂತಿಮ ಓವರ್‌ನಲ್ಲಿ ಕೇವಲ 6 ರನ್ ಗಳಿಸಬೇಕಿದ್ದ ಕೆಕೆಆರ್‌ಗೆ
ಪೇಸ್ ಬೌಲರ್ ಅರ್ಷದೀಪ್ ಸಿಂಗ್ ಜಿಗುಟಾಗಿ ಪರಿಣಮಿಸಿದ್ದರು. ಗೆಲುವಿನ ರನ್ ಬಿಟ್ಟುಕೊಟ್ಟ ಬಳಿಕ ಅವರು ಕಣ್ಣೀರು ಸುರಿಸುತ್ತ ಅಂಗಳ ತೊರೆದ ದೃಶ್ಯ ಕ್ರಿಕೆಟ್ ಪ್ರೇಮಿಗಳ ಮನ ಕಲಕುವಂತಿತ್ತು.
ಅದೊಂದು ಬ್ರಿಲಿಯಂಟ್ ಸ್ಪೆಲ್ ಆಗಿತ್ತು. 6 ರನ್ ಉಳಿಸುವ ಸವಾಲು ಸುಲಭದ್ದಾಗಿರಲಿಲ್ಲ. ಒಂದು ಸಿಕ್ಸರ್ ಬಿದ್ದರೆ ಪಂದ್ಯ ಮುಗಿದೇ ಹೋಗುತ್ತಿತ್ತು. ಹೀಗಾಗಿ ಕೆಕೆಆರ್ ಗೆಲುವಿನ ಬಗ್ಗೆ ಯಾರಿಗೂ ಅನುಮಾನ ಉಳಿದಿರಲಿಲ್ಲ. ಆದರೆ ಅರ್ಷದೀಪ್ ಪಟ್ಟು ಸಡಿಲಿಸಲಿಲ್ಲ. ಇದಕ್ಕೂ ಹಿಂದಿನ ಓವರ್‌ನಲ್ಲಿ ಸ್ಯಾಮ್ ಕರನ್ ಅವರಿಗೆ 3 ಸಿಕ್ಸರ್‌ಗಳ ರುಚಿ ತೋರಿಸಿದ್ದ ಆ್ಯಂಡ್ರೆ ರಸೆಲ್ ಇಲ್ಲಿ ಪರದಾಡಿ ದರು. ಮೊದಲ ಎಸೆತ ಡಾಟ್ ಆಗಿತ್ತು. ಮುಂದಿನೆರಡು ಎಸೆತಗಳಲ್ಲಿ ಲಭಿಸಿದ್ದು ಒಂದೊಂದು ಸಿಂಗಲ್ ಮಾತ್ರ. 4ನೇ ಎಸೆತದಲ್ಲಿ ರಸೆಲ್ 2 ರನ್ ತೆಗೆದರು. 5ನೇ ಎಸೆತದಲ್ಲಿ ರನೌಟ್ ಆಗಿ ವಾಪಸಾದರು.
ಅಂತಿಮ ಎಸೆತವನ್ನು ಎದುರಿಸುವ ಸರದಿ ಹಾರ್ಡ್ ಹಿಟ್ಟರ್ ರಿಂಕು ಸಿಂಗ್ ಅವರದಾಗಿತ್ತು. ಕೆಕೆಆರ್ ಗೆಲುವಿಗೆ 2 ರನ್ ಅಗತ್ಯವಿತ್ತು. ಅರ್ಷದೀಪ್ ಇಲ್ಲಿ ಸಂಪೂರ್ಣ ಎಡವಿದರು. ಲೈನ್-ಲೆಂತ್ ಎರಡನ್ನೂ ಕಳೆದುಕೊಂಡರು. ಈ ಎಸೆತವನ್ನು ಡೀಪ್ ಸ್ಕ್ವೇರ್ ಲೆಗ್ ಬೌಂಡರಿಗೆ ಬಡಿದಟ್ಟಿ ರಿಂಕು ತಂಡದ ಗೆಲುವನ್ನು ಸಾರಿದರು.
ರಿಂಕು ಸಿಂಗ್ ಗೆಲುವಿನ ಸಂಭ್ರಮ ಆಚರಿಸುತ್ತಿದ್ದರೆ, ಇತ್ತ ಅರ್ಷದೀಪ್ ಹತಾಶರಾಗಿ ಕ್ರೀಸ್‌ನಲ್ಲಿ ಕುಳಿತ್ತಿದ್ದರು. ಬಳಿಕ ದುಃಖದಿಂದ ಪೆವಿಲಿಯನ್ ಕಡೆ ಭಾರವಾದ ಹೆಜ್ಜೆಯನ್ನಿಡತೊಡಗಿದರು.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ 7 ವಿಕೆಟಿಗೆ 179 ರನ್ ಗಳಿಸಿದರೆ, ಕೆಕೆಆರ್ ಭರ್ತಿ 20 ಓವರ್‌ಗಳಲ್ಲಿ 5 ವಿಕೆಟಿಗೆ 182 ರನ್ ಬಾರಿಸಿತು. ಈ ಜಯದಿಂದ ಕೆಕೆಆರ್ 5ನೇ ಸ್ಥಾನಕ್ಕೆ ಏರಿತು. ಪಂಜಾಬ್ 7ನೇ ಸ್ಥಾನಿಯಾಗಿದೆ.
Related Articles
ಕೋಲ್ಕತಾದ ನೂತನ ಹೀರೋ
ಶಾರುಕ್ ಖಾನ್ ಅಲ್ಲ, ಆ್ಯಂಡ್ರೆ ರಸೆಲ್ ಅಲ್ಲ, ನಿತೀಶ್ ರಾಣಾ ಕೂಡ ಅಲ್ಲ… ಕೋಲ್ಕತಾದ “ಈಡನ್ ಗಾರ್ಡನ್ಸ್’ನಲ್ಲಿ ಈಗ ಮಾರ್ದನಿಸುವುದು, ಭೋರ್ಗರೆಯುತ್ತಿರುವುದು ಒಂದೇ ಹೆಸರು, ಅದು ರಿಂಕು ಸಿಂಗ್!
ಗುಜರಾತ್ ಟೈಟಾನ್ಸ್ ವಿರುದ್ಧ ಯಶ್ ದಯಾಳ್ ಅವರ ಅಂತಿಮ ಓವರ್‌ನ ಕೊನೆಯ 5 ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟಿದ ಬಳಿಕ ರಿಂಕು ಸಿಂಗ್ ಹೆಸರು ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ. ಹಾಗೆಯೇ ಎದುರಾಳಿ ಬೌಲರಗಳ ಪಾಲಿಗೆ ಈ ಹೆಸರು ಸಿಂಹಸ್ವಪ್ನವಾಗಿ ಗೋಚರಿಸಿರುವುದೂ ಸುಳ್ಳಲ್ಲ.
ಒತ್ತಡದ ವೇಳೆಯಲ್ಲೂ ಎದೆಗುಂದದೆ ಬ್ಯಾಟಿಂಗ್ ನಡೆಸಿ “ಫಿನಿಶಿಂಗ್’ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುವುದು ರಿಂಕು ಸಿಂಗ್ ಹೆಚ್ಚುಗಾರಿಕೆ. ಪಂಜಾಬ್ ಕಿಂಗ್ಸ್ ಎದುರಿನ ಸೋಮವಾರದ ಪಂದ್ಯದಲ್ಲೂ ರಿಂಕು ಸಿಂಗ್ ಗೆಲುವಿನ ಹೀರೋ ಆಗಿ ಮೂಡಿ ಬಂದರು. ಅರ್ಷದೀಪ್ ಸಿಂಗ್ ಅವರ ಅಂತಿಮ ಎಸೆತವನ್ನು ಬೌಂಡರಿಗೆ ಬಡಿದಟ್ಟುವುದರೊಂದಿಗೆ ಅವರು ಮತ್ತೂಮ್ಮೆ ಕೋಲ್ಕತಾ ತಂಡದ ಗೆಲುವನ್ನು ಸಾರಿದರು.
ಆಗಷ್ಟೇ ಆ್ಯಂಡ್ರೆ ರಸೆಲ್ ರನೌಟ್ ಆಗಿ ನಿರ್ಗಮಿಸಿದ್ದರು. ಪಂದ್ಯಕ್ಕೊಂದು ಟ್ವಿಸ್ಟ್ ಸಿಕ್ಕಿತ್ತು. ಆದರೆ ರಿಂಕು ಸಿಂಗ್ ಈ ಅವಕಾಶವನ್ನು ಎದುರಾಳಿಗೆ ಬಿಟ್ಟುಕೊಡಲಿಲ್ಲ. ಈ ಸಂದರ್ಭವನ್ನು ನೆನೆದ ಆ್ಯಂಡ್ರೆ ರಸೆಲ್, “ಸಾಮಾನ್ಯವಾಗಿ ನಾನು ಇಂಥ ರಿಸ್ಕಿ ಸಿಂಗಲ್ ತೆಗೆಯಲು ಬಯಸುವುದಿಲ್ಲ. ಹಿಂದೆಂದೂ ಹೀಗೆ ಓಡಿರಲಿಲ್ಲ. ಕೊನೆಯ ಎಸೆತದ ತನಕ ನಿಂತು ತಂಡವನ್ನು ಗೆಲ್ಲಿಸುವುದೇ ನನ್ನ ಗುರಿ ಆಗಿತ್ತು. ಆದರೆ ರಿಂಕು ಸಿಂಗ್ ಜತೆಗಾರನಾಗಿದ್ದರೆಂಬ ಏಕೈಕ ಕಾರಣಕ್ಕೆ ಓಡಿದೆ. ಅವರ ಮೇಲೆ ನನಗೆ ಬಹಳ ವಿಶ್ವಾಸವಿತ್ತು. ಕೊನೆಯ ಎಸೆತದಲ್ಲಿ ತಂಡವನ್ನು ಗೆಲ್ಲಿಸುವ ಛಾತಿ ಅವರಿಗೆ ಸಿದ್ಧಿಸಿದೆ’ ಎಂದರು.
ಈ ಸಂದರ್ಭದಲ್ಲಿ ರಿಂಕು ಸಿಂಗ್ ಪ್ರತಿಕ್ರಿಯೆ ಹೀಗಿತ್ತು-“ಕೊನೆಯ ಎಸೆತ ಎಂಬ ಕುರಿತು ನಾನು ಯೋಚಿಸುವುದಿಲ್ಲ. ಅಂದು 5 ಸಿಕ್ಸರ್ ಸಿಡಿಸಿದಾಗಲೂ ಇದನ್ನೆಲ್ಲ ಯೋಚಿಸುತ್ತ ಕೂರಲಿಲ್ಲ. ಎಸೆತದ ಯೋಗ್ಯತೆಯನ್ನು ಅಳೆದು ನೋಡುತ್ತೇನೆ. ಪಂದ್ಯವನ್ನು ಫಿನಿಶ್ ಮಾಡಬಲ್ಲೆ, ತಂಡವನ್ನು ಗೆಲ್ಲಿಸಬಲ್ಲೆ ಎಂಬ ನಂಬಿಕೆ ನನ್ನಲ್ಲಿದೆ. ಇದು ಸಾಕಾರಗೊಳ್ಳುತ್ತದೆ…’