Advertisement

ಕೊಲ್ಲೂರಿನ ಸಂಪರ್ಕಕ್ಕೆ ಹೆದ್ದಾರಿಗೆ ರಿಂಗ್‌ ರೋಡ್‌

09:09 PM Nov 10, 2019 | Sriram |

ಕುಂದಾಪುರ: ರಾಜ್ಯದ ವಿವಿಧೆಡೆಯಿಂದಷ್ಟೇ ಅಲ್ಲ ವಿವಿಧ ರಾಜ್ಯಗಳಿಂದಲೂ ವಾರ್ಷಿಕ ಲಕ್ಷಾಂತರ ಭಕ್ತರು ಭೇಟಿ ನೀಡುವ ಕೊಲ್ಲೂರು ದೇವಾಲಯ ಸಂಪರ್ಕಿಸಲು ಹೊರವರ್ತುಲ ರಸ್ತೆ ನಿರ್ಮಿಸಲು ಸರಕಾರ ನಿರ್ಧರಿಸಿದೆ. ಬೈಂದೂರು ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಲ್ಲೂರಿನಲ್ಲಿ ರಿಂಗ್‌ ರೋಡ್‌ ಮಾಡುವ ಮೂಲಕ ಕೊಲ್ಲೂರು ದೇವಸ್ಥಾನ ಸನಿಹದ ರಸ್ತೆ ಸಮಸ್ಯೆಗೆ ಕೊನೆಚುಕ್ಕೆ ಇಡುವ ಪ್ರಯತ್ನಕ್ಕೆ ಮುಂದಾಗಿದೆ.

Advertisement

ದ್ವಿಪಥ ತೀರ್ಥ ಕ್ಷೇತ್ರ ಕೊಲ್ಲೂರು ಹಾಗೂ ಸಿಗಂದೂರು ಸಂಪರ್ಕಿಸುವ ಪ್ರಮುಖ ರಸ್ತೆ ವರ್ಷವೊಂದಕ್ಕೆ ಅಸಂಖ್ಯ ಯಾತ್ರಿಕರು ಬರುವ ಈ ಕ್ಷೇತ್ರಗಳ ಸಂಪರ್ಕ ಕಲ್ಪಿಸುವ ರಸ್ತೆ ಹೊಂಡಗುಂಡಿಗಳಿಂದ ಆವೃತವಾಗಿದ್ದು ದುರಸ್ತಿಯಿಲ್ಲದೇ ಅನಾಥವಾದಂತಿತ್ತು. ಕನಿಷ್ಟ ತೇಪೆ ಹಚ್ಚುವ ಕಾರ್ಯವು ನಡೆಯದೇ ದೂರದೂರದಿಂದ ಬರುವ ಯಾತ್ರಿಕರ ಹಿಡಿಶಾಪಕ್ಕೆ ಗುರಿಯಾಗಿದೆ. ಅದಕ್ಕಾಗಿ ಹೆಮ್ಮಾಡಿಯಿಂದ ಕೊಲ್ಲೂರಿಗೆ ತೆರಳುವ ರಸ್ತೆ 20 ಕೋ.ರೂ. ಅನುದಾನದಲ್ಲಿ ದ್ವಿಪಥವಾಗಿ ಅಗಲಗೊಳಿಸಿ ತತ್‌ಕ್ಷಣ ಕಾಮಗಾರಿ ಆರಂಭಿ ಸಲು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ತತ್‌ಕ್ಷಣ ಹಣ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿ ಎಂದು ಷರಾ ಬರೆದಿದ್ದಾರೆ.

ಇದೀಗ ಕೊಲ್ಲೂರಿಗೆ ಹೋಗುವ ಇನ್ನೊಂದು ರಸ್ತೆಗೆ ಕಾಯಕಲ್ಪ ನೀಡಲು ತೀರ್ಮಾನಿಸಲಾಗಿದೆ. ಸಾವಿರಾರು ವಾಹನಗಳು, ಲಕ್ಷಾಂತರ ಪ್ರಯಾಣಿಕರು ಸಂದರ್ಶಿಸುವ ಕ್ಷೇತ್ರವೊಂದಕ್ಕೆ ಹೋಗುವ ರಸ್ತೆ ಅಗಲ ಕಿರಿದಾಗಬಾರದು ಎಂದು ಬೈಂದೂರು ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಲ್ಲೂರಿನಲ್ಲಿ ರಿಂಗ್‌ ರೋಡ್‌ ಮಾಡಲು ನಿರ್ಧರಿಸಲಾಗಿದೆ. ಕೊಲ್ಲೂರಿನಲ್ಲಿ ಇರುವ ರಸ್ತೆಯನ್ನು ಇನ್ನಷ್ಟು ಅಗಲಗೊಳಿಸಲು ಸಾಧ್ಯವಿಲ್ಲ. ಸ್ಥಳಾವಕಾಶದ ಕೊರತೆಯಿದೆ. ಇಕ್ಕಟ್ಟಾಗಿದೆ. ಆದ್ದರಿಂದ ಹೊರವರ್ತುಲ ರಸ್ತೆಯೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ.

ಬೈಂದೂರು ರಾಣೆಬೆನ್ನೂರು ಹೆದ್ದಾರಿಯಲ್ಲಿ ಕೊಲ್ಲೂರಿ ನಲ್ಲಿ ಸ್ವಾಗತ ಗೋಪುರದಿಂದ ಹೊರವರ್ತುಲ ರಸ್ತೆ ನಿರ್ಮಿಸಬೇಕು. ಇದಕ್ಕೆ ಒಟ್ಟು 35.6 ಕೋ.ರೂ. ವೆಚ್ಚ ತಗುಲಲಿದೆ. ಇದಕ್ಕಾಗಿ ಈಗಾಗಲೇ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದೆ.

ಸಾಮಾನ್ಯವಾಗಿ ಇಲಾಖೆಗಳು ಹೊರಗುತ್ತಿಗೆ ಮೂಲಕ ಡಿಪಿಆರ್‌ ಸಿದ್ಧಪಡಿಸುತ್ತವೆ. ಆದರೆ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಂಜಿನಿಯರ್‌ಗಳೇ ಎರಡು ತಿಂಗಳ ಅವಧಿಯಲ್ಲಿ ಡಿಪಿಆರ್‌ ಮಾಡಿದ್ದಾರೆ. ಹೆದ್ದಾರಿಯಿಂದ ಸ್ವಾಗತದ್ವಾರದವರೆಗೆ, ಸ್ವಾಗತದ್ವಾರದಿಂದ ದೇವಾಲಯವರೆಗೆ, ಒಟ್ಟು 3 ಕಿ.ಮೀ. ಕಾಂಕ್ರಿಟ್‌ ರಸ್ತೆಯ ನಿರ್ಮಾಣವಾಗಲಿದೆ. 28 ಕೋ.ರೂ.ಗಳನ್ನು ರಾಜ್ಯ ಸರಕಾರದ ಹೆದ್ದಾರಿ ಅಭಿವೃದ್ಧಿ ಮಂಡಳಿ ಹಾಗೂ ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮೂಲಕ ಭರಿಸಿ, 7 ಕೋ.ರೂ.ಗಳನ್ನು ಕೊಲ್ಲೂರು ದೇವಾಲಯ ವತಿಯಿಂದ ನೀಡಬೇಕೆಂದು ಬೇಡಿಕೆ ಸಲ್ಲಿಸುವ ಇರಾದೆಯಿದೆ.

Advertisement

ಪ್ರಶ್ನೆಗಳು
ರಾಜ್ಯದ ಅತಿಹೆಚ್ಚು ಆದಾಯದ ದೇಗುಲಗಳ ಪೈಕಿ ಒಂದೆನಿಸಿದ ಕೊಲ್ಲೂರು ಕ್ಷೇತ್ರದ ಮೂಲಕ ಹೊಸ ರಸ್ತೆ ಅಭಿವೃದ್ಧಿಗೆ ಅನುದಾನ ವಿನಿಯೋಗವಾಗಲಿದೆಯೇ, ದೇವಾಲಯದ ಆಡಳಿತ ಮಂಡಳಿ ಸಮ್ಮತಿಸಲಿದೆಯೇ, ದೇವಾಲಯದ ಸೊತ್ತಲ್ಲದ ರಸ್ತೆ ಅಭಿವೃದ್ಧಿಗೆ ಕಾಣಿಕೆ ಹಣ ನೀಡಲು ಮುಜರಾಯಿ ಕಾನೂನಿನಲ್ಲಿ ಅವಕಾಶ ಇದೆಯೇ ಎನ್ನುವ ಕುರಿತು ಇನ್ನಷ್ಟೇ ಚಿಂತನೆ ಮಾಡಬೇಕಿದೆ. ಒಂದೊಮ್ಮೆ ದೇವಾಲಯದ ಹಣ ದೊರೆಯದಿದ್ದರೆ ಪೂರ್ಣ ಪ್ರಮಾಣದ ಹಣ ಸರಕಾರವೇ ಭರಿಸಬೇಕಿದೆ. ಡಿಪಿಆರ್‌ ಸಿದ್ಧಗೊಂಡು ಅನುದಾನ ಮಂಜೂರಾತಿಗೆ ಮನವಿ ಮಾಡಲಾಗಿದ್ದು ಒಂದು ತಿಂಗಳ ಅವಧಿಯಲ್ಲಿ ಮಂಜೂರಾತಿ ನಿರೀಕ್ಷೆಯಿದೆ.

ರಸ್ತೆ ಅಭಿವೃದ್ಧಿಗೆ ಆದ್ಯತೆ
ಕೊಲ್ಲೂರಿಗೆ ಬರುವ ಯಾತ್ರಿಗಳಿಗೆ ತೊಂದರೆಯಾಗಬಾರದು. ರಸ್ತೆಗಳ ಸಮಸ್ಯೆಯಾದರೆ ಕ್ಷೇತ್ರಗಳಿಗೆ ಜನರು ಭೇಟಿ ನೀಡಲು ಪರದಾಡುತ್ತಾರೆ. ಹೆಮ್ಮಾಡಿ ಕೊಲ್ಲೂರು ರಸ್ತೆಗೆ ಅನುದಾನ ಮಂಜೂರಾಗಿದ್ದು ರಾಣಿಬೆನ್ನೂರು ಬೈಂದೂರು ಹೆದ್ದಾರಿಗೆ ಕೊಲ್ಲೂರಿನಲ್ಲಿ ರಿಂಗ್‌ರೋಡ್‌ ಮಾಡಲು ಡಿಪಿಆರ್‌ ಆಗಿದ್ದು ಅನುದಾನಕ್ಕೆ ಮನವಿ ಮಾಡಲಾಗಿದೆ.
-ಬಿ.ಎಂ. ಸುಕುಮಾರ ಶೆಟ್ಟಿ,
ಶಾಸಕರು, ಬೈಂದೂರು

ಸಭೆ
ಬಿ.ವೈ.ರಾಘವೇಂದ್ರ , ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎನ್‌. ಎಸ್‌. ನಾಗರಾಜ್‌ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಗೃಹಕಚೇರಿಯಲ್ಲಿ ಈ ಸಂಬಂಧ ಸಭೆ ನಡೆಸಲಾಗಿದೆ. ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಕೊಲ್ಲೂರಿಗೆ ಬರುವವರಿಗೆ ರಸ್ತೆ ವ್ಯವಸ್ಥೆ ಸರಿಯಾಗಿರಬೇಕು ಎಂಬ ನಿಟ್ಟಿನಲ್ಲಿ ರಸ್ತೆ ಅಗಲಗೊಳಿಸಲು ಇರುವ ಅಡೆತಡೆಗಳ ನಿವಾರಣೆಗೆ ಅಧಿಕಾರಿಗಳ ಬಳಿ ಸಮಾಲೋಚನೆ ನಡೆಸಲಾಗಿದೆ.

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next