Advertisement

ರಿಕ್ಷಾ ಟ್ಯಾಕ್ಸಿ ಚಾಲಕರ ಪರಿಹಾರ ಧನ ವಿತರಣೆಯಲ್ಲಿ ವಿಳಂಬವಾಗಬಾರದು : ಬಿ.ಎಸ್.ಯಡಿಯೂರಪ್ಪ

06:14 PM Jun 03, 2020 | sudhir |

ಬೆಂಗಳೂರು: ಆಟೋ ರಿಕ್ಷಾ ಮತ್ತು ಟ್ಯಾಕ್ಷಿ ವಾಹನ ಚಾಲಕರಿಗೆ 5,000 ರೂ.ಗಳ ಪರಿಹಾರ ಧನ ಒದಗಿಸಲು ಅಗತ್ಯವಿರುವ ಎಲ್ಲ ಕ್ರಮ ವಹಿಸಬೇಕು ಹಾಗೂ ಪರಿಹಾರ ಧನ ವಿತರಣೆಯಲ್ಲಿ ಯಾವುದೇ ವಿಳಂಬವಾಗಬಾರದು ಎಂದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

Advertisement

ಅವರು ಇಂದು ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.

ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಂದ ಪರಿಹಾರ ಧನಕ್ಕೆ ಈಗಾಗಲೇ ಒಟ್ಟು 198929 ಅರ್ಜಿಗಳು ಸ್ವೀಕೃತವಾಗಿದ್ದು, ಈಗಾಗಲೇ ವಾಹನ ಚಾಲಕರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಜಮಾ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಾರಿಗೆ ಸಂಸ್ಥೆ ಬಸ್ಸುಗಳನ್ನು ಬಳಸಲು ಹಿಂಜರಿಯುತ್ತಿದ್ದು, ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಸಾರಿಗೆ ಇಲಾಖೆಯ ವಾಹನಗಳನ್ನು ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸುವ ಕೆಲಸವೂ ಆಗಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಮಹಾರಾಷ್ಟ್ರ ಬಿಟ್ಟು ಅಂತರ ರಾಜ್ಯ ಸಾರಿಗೆ ಸೇವೆಯನ್ನು ಕಲ್ಪಿಸಲು ಇತರೆ ರಾಜ್ಯಗಳ ಸಾರಿಗೆ ಸಂಸ್ಥೆಗಳೊಂದಿಗೆ ಸಂಪರ್ಕಿಸಿ ಬಸ್ಸುಗಳ ಸಂಚಾರ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಸಾಮಾಜಿಕ ಅಂತರ ಕಾಪಾಡುವ ನಿರ್ದೇಶನ ಇರುವುದರಿಂದ ಬಸ್ಸುಗಳಲ್ಲಿ ಕಡಿಮೆ ಜನರನ್ನು ಹತ್ತಿಸಿಕೊಳ್ಳುವ ಬಗ್ಗೆ ಪರಿಣಿತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಅವರು ತಿಳಿಸಿದರು.

Advertisement

ಕೋವಿಡ್ 19 ರ ಹಿನ್ನಲೆಯಲ್ಲಿ ನಾಲ್ಕು ನಿಗಮಗಳಲ್ಲಿ ನಷ್ಟ ಉಂಟಾಗಿದ್ದು ಮುಂದಿನ ದಿನಗಳಲ್ಲಿ ಪ್ರಯಾಣಿಕರ ಓಡಾಟದಿಂದ ಪರಿಸ್ಥಿತಿ ಸುಧಾರಿಸಬಹುದೆಂಬ ನಿರೀಕ್ಷೆ ಇದೆ. ಬೆಂಗಳೂರು ನಗರ ಪ್ರದೇಶದಿಂದ ರೈಲ್ವೆ ನಿಲ್ದಾಣಕ್ಕೆ ತಲುಪಿಸುವ ವ್ಯವಸ್ಥೆಗೆ ಹಾಗೂ ವಿಮಾನ ನಿಲ್ದಾಣದಿಂದ ನಗರದ ವಿವಿದ ಪ್ರದೇಶಗಳಿಗೆ ಕಳುಹಿಸಲು ಬಿ.ಎಂ.ಟಿ.ಸಿ ಬಸ್ಸುಗಳನ್ನು ಬಳಸಿಕೊಳ್ಳಲಾಗಿದೆ. ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ಸಾರಿಗೆ ಬಸ್‍ಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಕೋವಿಡ್ 19 ನಿಂದಾಗಿ ರಾಜಸ್ವ ಸಂಗ್ರಹ ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಉಂಟಾಗಿರುವ ನಷ್ಟವನ್ನು ಸರಿದೂಗಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೋವಿಡ್ 19 ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಕೈಗೊಂಡ ಕ್ರಮಗಳ ಕುರಿತ ವೀಡಿಯೋ ವೀಕ್ಷಿಸಿ ಹಾಗೂ ಸಾರಿಗೆ ಸಂಪದ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ್, ಬಿ.ಎಂ.ಟಿ.ಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜುಂ ಪರ್ವೇಜ್, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ.ಸಿ.ಕಳಸದ್, ಬಿ.ಎಂ.ಟಿ.ಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next