ದಾವಣಗೆರೆ: ಐಎಎಸ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಆರ್ ಸಿಎಚ್ ಅಧಿಕಾರಿ ಹುದ್ದೆ ತ್ಯೆಜಿಸಿ ದಾವಣಗೆರೆಯಲ್ಲಿ ಆಟೋರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದ ಡಾ. ಎಂ.ಎಚ್. ರವೀಂದ್ರನಾಥ್ ಗೆ ಕೊಪ್ಪಳ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಾಗಿ ಸರ್ಕಾರ ವರ್ಗಾವಣೆ ಮಾಡಿದೆ.
ಇನ್ನು ಎರಡು ಮೂರು ದಿನದಲ್ಲಿ ಕರ್ತವ್ಯಕ್ಕೆ ಹಾಜರಾಗುವುದಾಗಿ ಡಾ. ರವೀಂದ್ರನಾಥ್ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಆರ್ ಸಿ ಎಚ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ರವೀಂದ್ರನಾಥ್ ಐಎಎಸ್ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಅಮಾನತುಗೊಳಿಸಿ 15 ತಿಂಗಳ ವೇತನ ನೀಡಿಲ್ಲ. ಹಾಗಾಗಿ ಜೀವನ ನಿರ್ವಹಣೆಗೆ ಆಟೋರಿಕ್ಷಾ ಓಡಿಸುತ್ತಿರುವುದಾಗಿ ಹೇಳಿದ್ದರು. ಅದರಂತೆ ಕೆಲ ದಿನಗಳ ಕಾಲ ದಾವಣಗೆರೆಯಲ್ಲಿ ಆಟೋ ಓಡಿಸುತ್ತಿದ್ದರು. ಇದೀಗ ಪ್ರಕರಣ ಸುಖಾಂತ್ಯವಾಗಿದೆ.
ಎನ್ಎಂಎಚ್ ಯೋಜನೆಯಡಿ ಇ- ಟೆಂಡರ್ ಪ್ರಕ್ರಿಯೆಯಲ್ಲಿ ಡಾ. ರವೀಂದ್ರನಾಥ್ ತಪ್ಪು ಮಾಡಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಪಂಚಾಯತ್ ನ ಹಿಂದಿನ ಸಿಇಒ ನಿತಿನ್ ಅಮಾನತುಗೊಳಿಸಿದ್ದರು. ಅಮಾನತು ಆದೇಶ ಪ್ರಶ್ನಿಸಿ ಡಾ. ರವೀಂದ್ರನಾಥ್ ಕೆಎಟಿ ಮೊರೆ ಹೋಗಿದ್ದರು. ಡಾ.ರವೀಂದ್ರನಾಥ್ ತಪ್ಪು ವೆಸಗಿಲ್ಲ ಎಂದು ಕೆಎಟಿ ಆದೇಶ ನೀಡಿತ್ತು. ತದನಂತರ ಡಾ. ರವೀಂದ್ರನಾಥ್ ಅವರನ್ನು ಸೇಡಂ ತಾಲೂಕು ಆಸ್ಪತ್ರೆಗೆ ಹಿರಿಯ ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.
ಇದನ್ನೂ ಓದಿ:
ಐಎಎಸ್ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ರಿಕ್ಷಾ ಓಡಿಸುತ್ತಿರುವ ಜಿಲ್ಲಾ ಮಟ್ಟದ ವೈದ್ಯ
ಜಿಲ್ಲಾ ಮಟ್ಟದ ಅಧಿಕಾರಿಯಾಗಿದ್ದ ತಮ್ಮನ್ನು ತಾಲ್ಲೂಕು ಅಧಿಕಾರಿಯಾಗಿ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಮತ್ತೆ ಕೆಎಟಿ ಮೊರೆ ಹೋಗಿದ್ದರು. ಕೆಎಟಿ ಜಿಲ್ಲಾ ಮಟ್ಟದ ಅಧಿಕಾರಿ ಹುದ್ದೆ ನೀಡುವಂತೆ ಡಾ. ರವೀಂದ್ರನಾಥ್ ಪರ ಆದೇಶ ನೀಡಿತ್ತು. ಆದರೂ ಈವರೆಗೆ ಆದೇಶ ಪಾಲನೆ ಆಗಿಲ್ಲ. ಹಣ ನೀಡಿದರೆ ಮಾತ್ರವೇ ಹುದ್ದೆ ನೀಡಲಾಗುತ್ತದೆ ಎಂದು ಕೆಲ ಅಧಿಕಾರಿಗಳು ನೇರವಾಗಿ ಹೇಳಿದ್ದಾರೆ ಎಂದು ಆರೋಪಿಸಿದ್ದರು.