ಕಡ್ಪ ಕತ್ತಿ ಅವರೆಯಲ್ಲಿ “ಎ’ ಜೀವಸಣ್ತೀ ವಿಪುಲವಾಗಿದೆ. ಸಾಕಷ್ಟು ಪ್ರೊಟೀನ್ ಇದೆ. ಶರ್ಕರ, ಪಿಷ್ಟ, ಕಬ್ಬಿಣ, ರಂಜಕ ಅಂಶಗಳು ಬೀಜದಲ್ಲಿ ಅಧಿಕವಾಗಿವೆ. ಸಾಕಷ್ಟು ಬಿಸಿಲು ಮತ್ತು ಧಾರಾಳವಾಗಿ ನೀರಿದ್ದರೆ ಒಂದೇ ಒಂದು ಗಿಡ ನೆಟ್ಟರೂ ಒಂದು ಕುಟುಂಬಕ್ಕೆ ಸಾಕಾಗುವಷ್ಟು ಕಾಯಿಗಳು ಸಿಗುತ್ತವೆ.
“ಕಡ್ಪ ಕತ್ತಿ ಅವರೆಯ ಒಂದೇ ಒಂದು ಗಿಡ ಇದ್ದರೆ ಸಾಕು. ಮೂರ್‍ನಾಲ್ಕು ತಿಂಗಳ ಕಾಲ ದಿನವೂ ಪಲ್ಯ, ಸಾಂಬಾರಿಗೆ ಬೇಕಾದಷ್ಟು ಅವರೆಕಾಯಿ ಕೊಯ್ಯಬಹುದು’ ಹೀಗೆ ಹೇಳುತ್ತಾರೆ ತೆಂಕಕಾರಂದೂರಿನ ಪುಷ್ಪಾ ನಾಯ್ಕ. ಹಲವು ವರ್ಷಗಳಿಂದ ಅವರ ಮನೆಯಂಗಳದಲ್ಲಿ ಬೆಳೆಯುವ ತರಕಾರಿಗಳಲ್ಲಿ ಕಡ್ಪ ಕತ್ತಿ ಅವರೆಗೆ ಒಂದು ಸ್ಥಾನ ಇರುತ್ತದೆ. ಕತ್ತಿಯ ಆಕಾರದಲ್ಲಿರುವ ಈ ಅವರೆ, ಒಂದು ಅಡಿ ಉದ್ದವಾಗುತ್ತದೆ. ಬಲಿಯುವ ಮುನ್ನ ಕೊಂದು ಕತ್ತರಿಸಿ ಬೆಂದ ನೀರನ್ನು ತೆಗೆದು ಹೋಳುಗಳನ್ನು ಒಗ್ಗರಣೆ ಹಾಕಿ ರುಚಿಕರವಾದ ಉಪರಿ ಮಾಡಿ ಬೆಳಗಿನ ಉಪಾಹಾರಕ್ಕೆ ತಿನ್ನಬಹುದು. ತರಕಾರಿಯಾಗಿ ಇನ್ನಿತರ ಅಡುಗೆಗೂ ಬಳಕೆಯಾಗುವ ಇದರ ಬೀಜ ಕೂಡ ಬೇಯಿಸಿ ತಿನ್ನಲು ರುಚಿಕಟ್ಟಾಗಿದೆ. ಬೆಂದ ನೀರನ್ನು ತೆಗೆಯದಿದ್ದರೆ ಪಿತ್ಥ ಪ್ರಕೃತಿಯವರಿಗೆ ಅಷ್ಟೊಂದು ಒಗ್ಗುವುದಿಲ್ಲ’ ಎಂದು ಅವರು ವಿವರಿಸುತ್ತಾರೆ.
ಹಳ್ಳಿ, ತೋಟದ ಮನೆಗಳಲ್ಲಿ ಬಚ್ಚಲು ಮನೆಗಳಿರುತ್ತವಲ್ಲಾ, ಅಲ್ಲಿ ಸ್ವಲ್ಪ ಜಾಗವಿದ್ದರೂ ಬಿತ್ತನೆಗೆ ಯೋಗ್ಯವಂತೆ. ಬಳ್ಳಿ ಪೊದೆಯಾಗಿ ವಿಶಾಲವಾಗಿ ಹರಡುತ್ತದೆ. ಮಳೆಗಾಲದಲ್ಲಿ ಅದರ ಕೃಷಿ ಆಗುವುದಿಲ್ಲ. ಅಕ್ಟೋಬರ್ ತಿಂಗಳಲ್ಲಿ ಬಿತ್ತಿದರೆ ನವೆಂಬರ್‌ನಲ್ಲಿ
ಕಾಯಿ ಕೊಯ್ಯಬಹುದು. ಬಳ್ಳಿ ಹರಡಿದಲ್ಲೆಲ್ಲ ಕೊಂಬೆಗಳಾಗಿ, ಪ್ರತೀ ಕೊಂಬೆಯಲ್ಲೂ ಹೂ ಗೊಂಚಲುಗಳಾಗುತ್ತವೆ. ಒಂದು ಗೊಂಚಲಿನಲ್ಲಿ ಹತ್ತರಿಂದ ಹದಿನೈದರಷ್ಟು ಕಾಯಿಗಳಾಗುತ್ತವೆ. ಹತ್ತು ಕಾಯಿಗಳಿದ್ದರೆ ಒಂದು ಕಿ.ಲೋ ತೂಗುತ್ತದೆ. ದೊಡ್ಡ ಪ್ರಮಾಣದಲ್ಲಿ ಬೆಳೆದರೆ ಪೇಟೆಯಲ್ಲಿ ಉತ್ತಮ ಬೇಡಿಕೆಯನ್ನೂ ಪಡೆದಿದೆ. ಗಿಡಕ್ಕೆ ಕೊಟ್ಟಿಗೆಯ ಗೊಬ್ಬರ ಸಾಕು, ರಸಗೊಬ್ಬರ ಅನಗತ್ಯ.
ಕಡ್ಪ ಕತ್ತಿ ಅವರೆಯಲ್ಲಿ “ಎ’ ಜೀವಸಣ್ತೀ ವಿಪುಲವಾಗಿದೆ. ಸಾಕಷ್ಟು ಪ್ರೊಟೀನ್ ಇದೆ. ಶರ್ಕರ, ಪಿಷ್ಟ, ಕಬ್ಬಿಣ, ರಂಜಕ ಅಂಶಗಳು ಬೀಜದಲ್ಲಿ ಅಧಿಕವಾಗಿವೆ. ಸಾಕಷ್ಟು ಬಿಸಿಲು ಮತ್ತು ಧಾರಾಳವಾಗಿ ನೀರಿದ್ದರೆ ಒಂದೇ ಒಂದು ಗಿಡ ನೆಟ್ಟರೂ ಒಂದು ಕುಟುಂಬಕ್ಕೆ ಸಾಕಾಗುವಷ್ಟು ಕಾಯಿಗಳು ಸಿಗುತ್ತವೆ. ಮೆಣಸಿನಕಾಯಿ, ಬದನೆಯಂತಹ ಇತರ ತರಕಾರಿ ಗಿಡಗಳ ಜೊತೆಗೂ ಇದನ್ನು ಮಿಶ್ರಕೃಷಿಯಾಗಿ ಬೆಳೆಯಬಹುದೆಂದು ಎನ್ನುತ್ತಾರೆ ಪುಷ್ಪಾ ನಾಯ್ಕ.
ಪ. ರಾಮಕೃಷ್ಣ ಶಾಸ್ತ್ರೀ