Advertisement

ಸಮೃದ್ಧ ಕೃಷಿ ಭೂಮಿಯಲ್ಲಿ ಸವಳು-ಜವಳಿನ ಚಿಂತೆ

04:33 PM Mar 17, 2022 | Team Udayavani |

ಬೆಳಗಾವಿ: ಮಲಪ್ರಭಾ ಮತ್ತು ಘಟಪ್ರಭಾ ಅಚ್ಚುಕಟ್ಟು ಯೋಜನೆಗಳ ಅಚ್ಚುಕಟ್ಟು ಪ್ರದೇಶಗಳ ಅಭಿವೃದ್ಧಿ ಪ್ರಾಧಿಕಾರ (ಕಾಡಾ) ದಲ್ಲಿ ಹಲವಾರು ವರ್ಷಗಳಿಂದ ಸವಳು ಜವಳು ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಪ್ರತಿ ವರ್ಷ ನೀರಾವರಿ ಪ್ರದೇಶ ಹೆಚ್ಚಿಗೆಯಾಗುತ್ತಿರುವಂತೆ ಸವಳು-ಜವಳು ಸಮಸ್ಯೆ ಪ್ರಮಾಣವೂ ಅಧಿಕವಾಗುತ್ತಿದೆ. ಪರಿಣಾಮ ಫಲವತ್ತಾದ ಭೂಮಿ ಇದ್ದರೂ ಅದರಲ್ಲಿ ಬೆಳೆ ತೆಗೆಯಲು ಸಾಧ್ಯವಾಗುತ್ತಿಲ್ಲ.

Advertisement

ಕೃಷ್ಣಾ, ಘಟಪ್ರಭಾ, ಹಿರಣ್ಯಕೇಶಿ. ಮಲಪ್ರಭಾ, ವೇದಗಂಗಾ, ದೂಧಗಂಗಾ ನದಿಗಳ ವ್ಯಾಪ್ತಿಯಲ್ಲಿ ಈ ಸವಳು-ಜವಳಿನ ಸಮಸ್ಯೆ ಹಲವಾರು ವರ್ಷಗಳಿಂದ ಸದ್ದು ಮಾಡುತ್ತಲೇ ಇದೆ. ಪಕ್ಕದಲ್ಲೇ ನದಿ ಇದೆ ಎಂಬ ಕಾರಣಕ್ಕೆ ಹೆಚ್ಚಿನ ಲಾಭದ ಆಸೆಯಿಂದ ಅತಿಯಾದ ನೀರಿನ ಬಳಕೆ, ಬೆಳೆಗಳಿಗೆ ರಾಸಾಯನಿಕ ಸಿಂಪಡಿಕೆ ಇದಕ್ಕೆ ಮುಖ್ಯ ಕಾರಣ ಎಂಬುದು ಎಲ್ಲರಿಗೂ ಗೊತ್ತಿದ್ದರೂ ಯಾರೊಬ್ಬರೂ ಅದರ ಕಡಿವಾಣಕ್ಕೆ ಮುಂದಾಗುತ್ತಿಲ್ಲ. ಇದರಿಂದ ಫಲವತ್ತಾದ ಭೂಮಿ ಬರಡಾಗುತ್ತ ಹೋಗುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಈ ಸವಳು-ಜವಳು ಸಮಸ್ಯೆ ನಿವಾರಣೆಗೆ ಸರಕಾರ ಮತ್ತು ರೈತರು ವಾರ್ಷಿಕವಾಗಿ ಲಕ್ಷಾಂತರ ಹಣ ವೆಚ್ಚಮಾಡುತ್ತಿದ್ದರೂ ಅದಕ್ಕೆ ಪರಿಹಾರ ಮಾತ್ರ ಕಾಣುತ್ತಿಲ್ಲ.

ಕೃಷಿ ಇಲಾಖೆ ಮತ್ತು ಕಾಡಾ ಇಲಾಖೆಯ ಮಾಹಿತಿಯ ಪ್ರಕಾರ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ನೀರಾವರಿ ಪ್ರದೇಶದಲ್ಲಿ ಪ್ರತಿಶತ 25 ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಬಹುತೇಕ ಪಾಲು ಕಬ್ಬಿನ ಬೆಳೆಯ ಪ್ರದೇಶವಾಗಿದೆ ಎಂಬುದು ಗಮನಿಸಬೇಕಾದ ಅಂಶ. ಇದರ ಪರಿಣಾಮ ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಸವಳು-ಜವಳಿನ ಪ್ರಮಾಣ 85 ಸಾವಿರ ಹೆಕ್ಟೇರ್‌ಗೆ ಏರಿಕೆಯಾಗಿದೆ.

ಸವಳು ಜವಳು ತೆಗೆಯುವಂತೆ ಕಾಡಾ ಇಲಾಖೆಗೆ ನಿರಂತರವಾಗಿ ಅರ್ಜಿಗಳು ಬರುತ್ತಿವೆ. ಈ ಸವಳು-ಜವಳು ತೆಗೆಯಲು ಪ್ರತಿ ಎಕರೆಗೆ 50 ಸಾವಿರ ರೂ. ಬೇಕು. ಆದರೆ ಅನುದಾನದ ಸಮಸ್ಯೆ ಎದುರಿಸುತ್ತಿರುವ ಕಾಡಾಕ್ಕೆ ರೈತರ ಅರ್ಜಿಗಳಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಹಣಕಾಸು ಸಮಸ್ಯೆ ರೈತರ ಜೊತೆಗೆ ಕಾಡಾ ಇಲಾಖೆಯನ್ನೂ ಕಟ್ಟಿಹಾಕಿದೆ.

Advertisement

2014 ರಿಂದ ಇಲ್ಲಿಯವರೆಗೆ ಘಟಪ್ರಭಾ, ಮಲಪ್ರಭಾ ಹಾಗೂ ಹಿಪ್ಪರಗಿ ಯೋಜನೆಗಳ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 85 ಸಾವಿರ ಹೆಕ್ಟೇರ್‌ ಪ್ರದೇಶವನ್ನು ಸವಳು-ಜವಳು ಭಾದಿತ ಎಂದು ಗುರುತಿಸಲಾಗಿದ್ದು ಅದರಲ್ಲಿ ಇದುವರೆಗೆ 39,273 ಹೆಕ್ಟೇರ್‌ ಪ್ರದೇಶದಲ್ಲಿನ ಸವಳು-ಜವಳು ಸಮಸ್ಯೆ ನಿವಾರಣೆ ಮಾಡಲಾಗಿದೆ. ಇನ್ನೂ 46,251 ಹೆಕ್ಟೇರ್‌ ಬಾಕಿ ಉಳಿದಿದೆ. ಇದರ ಹೊರತಾಗಿ ಕೃಷ್ಣಾ ನದಿ ವ್ಯಾಪ್ತಿಯ ಹಿಪ್ಪರಗಿ ಜಲಾಶಯ ಯೋಜನೆಯಲ್ಲಿ ಹೊಸದಾಗಿ ಸವಳು-ಜವಳು ಬಾಧಿತ ಪ್ರದೇಶದ ಸಮೀಕ್ಷೆ ಮಾಡಬೇಕಿದೆ ಎಂಬುದು ಕಾಡಾ ಆಡಳಿತಾಧಿಕಾರಿ ಶಶಿಧರ ಕುರೇರ ಹೇಳಿಕೆ.

ಘಟಪ್ರಭಾ ಯೋಜನೆಯ ವ್ಯಾಪ್ತಿಯಲ್ಲಿ 45,551.44 ಹೆಕ್ಟೇರ್‌ ಹಾಗೂ ಮಲಪ್ರಭಾ ಯೋಜನೆಯ ವ್ಯಾಪ್ತಿಯಲ್ಲಿ 17,129 ಹೆಕ್ಟೇರ್‌ ಪ್ರದೇಶವನ್ನು ಸವಳು ಜವಳು ಭಾದಿತ ಪ್ರದೇಶ ಎಂದು ಗುರುತಿಸಲಾಗಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 28,372 ಹೆ. ಪ್ರದೇಶ ಸವಳು ಜವಳಿನಿಂದ ತೊಂದರೆಗೆ ಒಳಗಾಗಿದ್ದರೆ ಬಾಗಲಕೋಟೆ ಜಿಲ್ಲೆಯಲ್ಲಿ 17,179 ಹೆ ಪ್ರದೇಶ ಸವಳು ಜವಳಿಗೆ ತುತ್ತಾಗಿದೆ. ಅದೇ ರೀತಿ ಮಲಪ್ರಭಾ ಯೋಜನೆಯ ವ್ಯಾಪ್ತಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 6,645 ಹೆ ಪ್ರದೇಶ, ಧಾರವಾಡ ಜಿಲ್ಲೆಯಲ್ಲಿ 4,408, ಗದಗ ಜಿಲ್ಲೆಯಲ್ಲಿ 2,846 ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 3,230 ಹೆಕ್ಟೇರ್‌ ಪ್ರದೇಶ ಸವಳು ಜವಳಿನಿಂದ ಭಾದಿತವಾಗಿದೆ. ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಇನ್ನೂ ಸಮಗ್ರ ಸಮೀಕ್ಷೆ ನಡೆಯಬೇಕಿದೆ.

ಬಾಕಿ ಉಳಿದಿರುವ 46,251 ಹೆಕ್ಟೇರ್‌ ಪ್ರದೇಶವನ್ನು ಸವಳು ಜವಳಿನಿಂದ ಮುಕ್ತಗೊಳಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕೆ ಒಟ್ಟು 231 ಕೋಟಿ ರೂ ಗಳ ಅಗತ್ಯವಿದೆ. ಈ ವರ್ಷ ಲಭ್ಯವಿದ್ದ ಹಣದಲ್ಲಿ 1,300 ಹೆಕ್ಟೇರ್‌ ಪ್ರದೇಶವನ್ನು ಸವಳು ಜವಳಿನಿಂದ ಮುಕ್ತಗೊಳಿಸಲಾಗಿತ್ತು. ಅದರಂತೆ ಕಳೆದ ವರ್ಷ 1,700 ಹೆ. ಪ್ರದೇಶವನ್ನು ಸವಳು-ಜವಳು ಸಮಸ್ಯೆಯಿಂದ ನಿವಾರಣೆ ಮಾಡಲಾಗಿತ್ತು.

ಪ್ರಾಯೋಗಿಕ ಯೋಜನೆಗೆ ಚಿಂತನೆ: ಸವಳು-ಜವಳು ಸಮಸ್ಯೆ ನಿವಾರಣೆಯ ನಿಟ್ಟಿನಲ್ಲಿ ಸಮಗ್ರ ಹಾಗೂ ವೈಜ್ಞಾನಿಕ ವಿಶ್ಲೇಷಣೆಗೆ ಪ್ರಾಯೋಗಿಕ ಯೋಜನೆಯೊಂದನ್ನು ರೂಪಿಸಲಾಗಿದ್ದು ಇದಕ್ಕಾಗಿ ಜಲಸಂಪನ್ಮೂಲ ಸಚಿವರ ತವರು ಜಿಲ್ಲೆ ಬಾಗಲಕೋಟೆಯ ಇಂಗಳಗಿ ಹಾಗೂ ಯಡಹಳ್ಳಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಎರಡೂ ಗ್ರಾಮಗಳ ಸುಮಾರು ಎರಡು ಸಾವಿರ ಹೆಕ್ಟೇರ್‌ನಲ್ಲಿ ಕಾಡಾ ಹಾಗೂ ಧಾರವಾಡದಲ್ಲಿರುವ ನೆಲ ಮತ್ತು ಜಲ ನಿರ್ವಹಣಾ ಸಂಸ್ಥೆ (ವಾಲ್ಮಿ) ಸಹಯೋಗದಲ್ಲಿ ಸವಳು ಜವಳು ನಿವಾರಣೆಯ ಅಧ್ಯಯನ ಕೈಗೊಳ್ಳಲಾಗುವುದು. ಸವಳು-ಜವಳು ಉಂಟಾಗಲು ಕಾರಣಗಳೇನು ಎಂಬುದನ್ನು ವೈಜ್ಞಾನಿಕ ನೆಲೆಯಲ್ಲಿ ನೋಡಲಾಗುವುದು. ಒಟ್ಟಾರೆ ಇದರ ನಿರ್ವಹಣೆಯನ್ನು ಪರಿಣತ ಏಜೆನ್ಸಿಗೆ ಕೊಡಲಾಗುವುದು. ರೈತರಿಗೆ ನೆರವಾಗುವ ಈ ಉಪಕ್ರಮಕ್ಕೆ 25 ಲಕ್ಷ ಅನುದಾನ ಒದಗಿಸಲು ಸಚಿವರು ಅನುಮೋದನೆ ನೀಡಿದ್ದಾರೆ.

ಸವಳು-ಜವಳು ನಿವಾರಣೆ ಕಾಡಾ ಇಲಾಖೆಗೆ ಬಹು ದೊಡ್ಡ ಸವಾಲು. ಕಳೆದ ನಾಲ್ಕೈದು ವರ್ಷಗಳಲ್ಲಿ ಇದರ ಪ್ರಮಾಣದಲ್ಲಿ ಬಹಳ ಏರಿಕೆಯಾಗಿದೆ. ಸವಳು-ಜವಳು ನಿವಾರಣೆಗೆ ಕಾಡಾ ಇಲಾಖೆಯಿಂದ ವಾರ್ಷಿಕವಾಗಿ ಕೋಟ್ಯಾಂತರ ಹಣ ವೆಚ್ಚ ಮಾಡಲಾಗುತ್ತಿದೆ. ಮುಖ್ಯವಾಗಿ ರೈತರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅತಿಯಾದ ನೀರು ಹಾಗೂ ರಸಗೊಬ್ಬರ ಬಳಸದಂತೆ ತಿಳಿವಳಿಕೆ ಕೊಡಲಾಗುತ್ತಿದೆ.

ಶಶಿಧರ ಕುರೇರ (ಕಾಡಾ ಆಡಳಿತಾಧಿಕಾರಿ)

ಕಾಡಾ ಇಲಾಖೆಯಿಂದ ಸವಳು-ಜವಳು ಸಮಸ್ಯೆಗೆ ಪರಿಹಾರ ಸೇರಿದಂತೆ ಮಾಡಲು ಸಾಕಷ್ಟು ಕೆಲಸಗಳಿವೆ. ಅದರೆ ಎಲ್ಲದಕ್ಕೂ ಹಣಕಾಸಿನ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಸವಳು-ಜವಳು ಬಹಳ ಗಂಭೀರವಾದ ಸಮಸ್ಯೆ. ಹೊಲಗಳಿಗೆ ಅತಿಯಾದ ಪ್ರಮಾಣದಲ್ಲಿ ನೀರು ಬಳಕೆ ಮಾಡುತ್ತಿರುವುದರಿಂದ ಮತ್ತು ರಸಗೊಬ್ಬರದ ಬಳಕೆ ಸಹ ಹೆಚ್ಚಾಗಿರುವುದರಿಂದ ಸವಳು ಜವಳು ಸಮಸ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಕಾಡಾದಿಂದಲೂ ಸಹ ಜಾಗƒತಿ ಮೂಡಿಸಲಾಗುತ್ತಿದೆ. ಅತಿಯಾದ ನೀರು ಬಳಕೆ ಮಾಡದೆ ರೈತರು ತಮ್ಮ ಹೊಲಗಳನ್ನು ಉಳಿಸಿಕೊಳ್ಳಬೇಕು.

ವಿಶ್ವನಾಥ ಪಾಟೀಲ,ಕಾಡಾ ಅಧ್ಯಕ್ಷರು

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next