Advertisement

Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ

11:34 AM Mar 26, 2024 | Team Udayavani |

ತೀರ್ಥಹಳ್ಳಿ: ಅಂಗನವಾಡಿ ಮಕ್ಕಳ ಊಟಕ್ಕೆ ಅಕ್ಕಿ ಪೂರೈಕೆಯನ್ನು ಸರಕಾರ 3 ತಿಂಗಳಿನಿಂದ ಸ್ಥಗಿತ ಮಾಡಿದೆ. ಸರಕಾರದ ನಿರ್ಧಾರದ ಪರಿಣಾಮ ಮಲೆನಾಡು ಭಾಗದ ಅಂಗನವಾಡಿಯಲ್ಲಿ ಮಕ್ಕಳಿಗೆ ಅನ್ನ ಸಾಂಬಾ‌ರ್ ಊಟ ಇಲ್ಲವಾಗಿದೆ.
ರಾಜ್ಯಕ್ಕೆ ಏಕರೂಪ ನಿಯಮ ಜಾರಿಗೊಳಿಸಿ ಅಂಗನವಾಡಿ ಕೇಂದ್ರಕ್ಕೆ ಗೋಧಿ, ರವೆ ವಿಶೇಷ ಪೂರೈಸಬೇಕು ಎಂದು ಸರಕಾರ ಸೂಚನೆ ನೀಡಿದೆ.

Advertisement

ಮಲೆನಾಡು ಭಾಗದಲ್ಲಿ ಅಕ್ಕಿಯನ್ನು ಪ್ರಧಾನ ಆಹಾರವಾಗಿ ಬಳಸಲಾಗುತ್ತಿದ್ದು ಮಧ್ಯಾಹ್ನ ಗೋಧಿ ರವೆ ಉಪ್ಪಿಟ್ಟು ತಿನ್ನಲು ಬಹುತೇಕ ಮಕ್ಕಳು ಇಚ್ಛಿಸುತ್ತಿಲ್ಲ. ಏತನ್ಮಧ್ಯೆ, ತಾಲೂಕಿನಲ್ಲಿ ಮಾರ್ಚ್ ತಿಂಗಳು ಪೂರೈಕೆ ಆದ ಗೋಧಿ ರವೆ ಕಳಪೆ ಎಂಬ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ತಿರಸ್ಕಾರಕ್ಕೀಡಾಗಿದ್ದು ವಾಪಸ್ ಮಾಡಲಾಗುತ್ತಿದೆ. ಸರಕಾರದ ನಿರ್ಧಾರ ಮತ್ತು ಕಳಪೆ ಗೋಧಿ ರವೆ ನಡುವೆ ಮಕ್ಕಳು ಅನ್ನ ಸಾಂಬಾರ್ ಭಾಗ್ಯದಿಂದ ವಂಚಿತರಾಗಿದ್ದಾರೆ.

ನಿಯಮ ರಗಳೆ: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಆಹಾರ ಪೂರೈಕೆ ಕ್ರಮವನ್ನು ಕೇಂದ್ರ ಸರಕಾರ ಪರಿಷ್ಕರಣೆಗೊಳಿಸಿರುವ ಕಾರಣ ರಾಜ್ಯ ಸರಕಾರ ಹೊಸ ನಿಯಾಮವಳಿ ಜಾರಿಗೊಳಿಸಿದೆ. ಅಂಗನವಾಡಿ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗದಂತೆ ಆಹಾರ ಪೂರೈಕೆಗೆ ಕೇಂದ್ರ, ರಾಜ್ಯ ಸರಕಾರ ಸಮಾನವಾಗಿ ಅನುದಾನ ವೆಚ್ಚ ಮಾಡುತ್ತಿವೆ. ಪ್ರತಿದಿನ ಮನೆಯಲ್ಲಿ ಬಳಸುವ ಆಹಾರಕ್ಕೆ ಪೂರಕವಾಗಿ ಪೌಷ್ಟಿಕಾಂಶದ ಆಹಾರವನ್ನು ಪೂರೈಸುವ ಉದ್ದೇಶದಲ್ಲಿ ಸರಕಾರ ಪರಿಷ್ಕೃತ ನಿಯಮ ಅನುಷ್ಠಾನಗೊಳಿಸಿದೆ.

3 ವರ್ಷದಿಂದ 6 ವರ್ಷದ ಅಂಗನವಾಡಿ ಮಕ್ಕಳಿಗೆ ಈ ಹಿಂದೆ ನೀಡುತ್ತಿದ್ದ ಚಿತ್ರಾನ್ನ, ರವೆ ಲಾಡು, ಅನ್ನ ಕಿಚಡಿ, ಮೊಳಕೆ ಬರಿಸಿದ ಹೆಸರು ಕಾಳು, ಅನ್ನ ಸಾಂಬಾರ್, ಶೇಂಗಾ ಚಿಕ್ಕಿ, ಪೂರೈಕೆಯನ್ನು ಸಂಪೂರ್ಣ ಸ್ಥಗಿತ ಮಾಡಲಾಗಿದೆ. ಅಪೌಷ್ಟಿಕ ಮಕ್ಕಳಿಗೆ ವಾರಕ್ಕೆ 5 ದಿನ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ 6 ದಿನ ಹಾಲು ನೀಡಲಾಗುತ್ತಿದೆ. ಆದರೆ, ಆಹಾರ ನೀಡುವ ಕ್ರಮವನ್ನು ಬದಲಾಯಿಸಿದ ಸರಕಾರ ಮಕ್ಕಳಿಗೆ ಗೋಧಿ ರವೆ, ಪೌಷ್ಟಿಕಾಂಶ ತುಂಬಿರುವ ಪುಷ್ಟಿ ಪೌಡರ್, ಮೊಟ್ಟೆ ಹಾಲು ಮಾತ್ರ ನೀಡುತ್ತಿದೆ.

ಮನೆಯಿಂದ ಬುತ್ತಿ: ಮಕ್ಕಳ ಆರೋಗ್ಯದಲ್ಲಿ ಪೌಷ್ಟಿಕಾಂಶದ ಮಟ್ಟ ಹೆಚ್ಚಿಸುವ ಜತೆಗೆ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಗೆ ಭದ್ರವಾದ ಅಡಿಪಾಯ ಒದಗಿಸುವುದು ಸಮಗ್ರ ಪೌಷ್ಟಿಕ ಆಹಾರ ಪೂರೈಸುವ ಯೋಜನೆಯ ಉದ್ದೇಶವಾಗಿದೆ. ಇಂತಹ ಮಹತ್ವದ ಚಿಂತನೆಯಲ್ಲಿ ಸರಕಾರ ಸಮಗ್ರ ಪೌಷ್ಟಿಕಾಂಶ ಆಹಾರ ಪೂರೈಕೆ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಆದರೆ, ಪ್ರಾದೇಶಿಕವಾಗಿ ಬಳಸಲಾಗುವ ಆಹಾರ ಪದ್ಧತಿ ಜಾರಿಗೆ ಪೂರಕವಾಗಿ ಸರಕಾರ ಗಮನಿಸಿಲ್ಲ. ಇದರ ಪರಿಣಾಮ ಮಲೆನಾಡು ಭಾಗದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಅನ್ನ ಸಾಂಬಾರ್ ಇಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಮಕ್ಕಳು ಈಗ ಮನೆಯಿಂದ ಬುತ್ತಿ ಹೊರುವಂತಹ ಸನ್ನಿವೇಶ ಉದ್ಭವಿಸಿದೆ.

Advertisement

ಅಂಗನವಾಡಿಗೆ ಪೂರೈಕೆ ಆಗುತ್ತಿರುವ ಗೋಧಿ ರವೆ ಉಪ್ಪಿಟ್ಟು ತಿನ್ನಲು ಮಕ್ಕಳು ಒಪ್ಪುತ್ತಿಲ್ಲ. ಅನ್ನ ಸಾಂಬಾರ್ ಬೇಡಿಕೆ ಹೆಚ್ಚಿದ್ದು ಸರಕಾರಕ್ಕೆ ಮಾಹಿತಿ ನೀಡಲಾಗಿದೆ.

ಮಾರ್ಚ್ ತಿಂಗಳಲ್ಲಿ ತಾಲೂಕಿನ ಅಂಗನವಾಡಿ ಕೇಂದ್ರಕ್ಕೆ ಕಳಪೆ ಮಟ್ಟದ ಗೋಧಿ ರವೆ ಪೂರೈಕೆ ಆಗಿದ್ದು ವಾಪಸ್ ಮಾಡಲಾಗುತ್ತಿದೆ. ತಕ್ಷಣವೇ ಈ ಸಮಸ್ಯೆ ಬಗೆ ಹರಿಸುತ್ತೇವೆ.
– ಪ್ರವೀಣ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೀರ್ಥಹಳ್ಳಿ

ಇದನ್ನೂ ಓದಿ: Lok Sabha Poll 2024: ಉತ್ತರ ಕನ್ನಡದಲ್ಲಿ 10 ಬಾರಿ ಕಾಂಗ್ರೆಸ್‌, 6 ಬಾರಿ ಕಮಲಕ್ಕೆ ಮಣೆ

Advertisement

Udayavani is now on Telegram. Click here to join our channel and stay updated with the latest news.

Next