ಮಣಿಪಾಲ: ಒಂದು ವರ್ಷದಲ್ಲಿ ಕ್ರಿಕೆಟ್ ಲೋಕದಲ್ಲಿ ಹಲವಾರು ವಿಚಾರಗಳು ನಡೆದಿದೆ. ಕ್ರಿಕೆಟ್ ಲೋಕದ ಪ್ರಮುಖ ದೇಶ ಭಾರತ ಈ ಬಾರಿ ತನ್ನ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡಿತು. ಐಪಿಎಲ್ ಹರಾಜಿನಲ್ಲಿ ಹಲವು ದಾಖಲೆಗಳು ಅಳಿಸಿದವು, ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರ ಬಂಧನವಾಯಿತು, ತವರಿನಲ್ಲಿ ಭಾರತ ಟೆಸ್ಟ್ ವೈಟ್ ವಾಶ್ ಅನುಭವಿಸಿತು… ಹೀಗೆ ಹಲವು ವಿಚಾರಗಳಿಗೆ 2024 ಸಾಕ್ಷಿಯಾಯಿತು.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಜೂನ್‌ನಲ್ಲಿ ಭಾರತ ಐಸಿಸಿ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಈ ಮೂಲಕ 11 ವರ್ಷಗಳ ಐಸಿಸಿ ಟ್ರೋಫಿ ಬರ ಕೊನೆಗೊಂಡಿತು. ಗುಂಪು ಹಂತದಲ್ಲಿ ಅಜೇಯರಾಗಿದ್ದ ಭಾರತವು ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ರೋಚಕ ಹಣಾಹಣಿಯಲ್ಲಿ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿತು.
ಟಿ20 ವಿಶ್ವಕಪ್ ಬಳಿಕ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರು ಟಿ20 ಮಾದರಿಗೆ ವಿದಾಯ ಹೇಳಿದ್ದರು
.
ಉಪ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಬದಲಿಗೆ ಮಹತ್ವದ ಬೆಳವಣಿಗೆಯಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಟಿ20 ನಾಯಕತ್ವ ವಹಿಸಲಾಯಿತು.
ಟಿ20 ವಿಶ್ವಕಪ್ ಮೂಲಕ ಭಾರತವು ಜಾಗತಿಕ ಕೂಟಗಳಲ್ಲಿ ತಮ್ಮ ಬರ ಓಟವನ್ನು ಕೊನೆಗೊಳಿಸಿದರೆ, ಇದೇ ಸಮಯದಲ್ಲಿ ತವರು ನೆಲದಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಳ್ಳದ ಅವರ 12 ವರ್ಷಗಳ ಸರಣಿಯು ಮುರಿದುಹೋಯಿತು. ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ದ ಟೆಸ್ಟ್ ಸರಣಿಯಲ್ಲಿ 3-0 ಅಂತರದಿಂದ ಸೋಲನುಭವಿಸಿತು.
ಐಸಿಸಿಗೆ ಜಯ್ ಶಾ
ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್ ಶಾ ಅವರು ಐಸಿಸಿ ಅಧ್ಯಕ್ಷರಾದರು. ಕ್ರಿಕೆಟ್ ನ ಅತ್ಯಂತ ಪ್ರಭಾವಿ ಆಡಳಿತಗಾರ ಶಾ ಅವರು ಐಸಿಸಿ ಮುಖ್ಯಸ್ಥನ ಪಟ್ಟಕ್ಕೇರಿದರು.
ಪಾಕಿಸ್ತಾನ ಮತ್ತು ಚಾಂಪಿಯನ್ಸ್ ಟ್ರೋಫಿ
2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಚಾಂಪಿಯನ್ಸ್ ಟ್ರೋಫಿಗೆ ಭಾರತ ಪ್ರಯಾಣಿಸದ ಕಾರಣ ಕೂಟ ಆಯೋಜನೆಯ ಸ್ಥಳ ಇನ್ನೂ ನಿರ್ಧಾರವಾಗಿಲ್ಲ. ಭಾರತವು ಹೈಬ್ರಿಡ್ ಮಾದರಿಗೆ ಸೂಚನೆ ನೀಡಿದ್ದು, ಪಾಕಿಸ್ತಾನ ಇದಕ್ಕೆ ಕೆಲವು ಷರತ್ತಿನೊಂದಿಗೆ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ. ಆದರೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಈ ವರ್ಷ ನಡೆದ ವನಿತಾ ಟಿ20 ವಿಶ್ವಕಪ್ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಕಪ್ ಗೆದ್ದುಕೊಂಡಿತು.
2024ರಲ್ಲಿ ಇಂಗ್ಲೆಂಡ್ ದಿಗ್ಗಜ ವೇಗಿ ಜೇಮ್ಸ್ ಆಂಡರ್ಸನ್, ಆಸ್ಟ್ರೇಲಿಯಾ ಬ್ಯಾಟರ್ ಡೇವಿಡ್ ವಾರ್ನರ್, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರು ವಿದಾಯ ಹೇಳಿದರು.
ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಹಲವು ದಾಖಲೆಗಳು ಮುರಿದವು. ಲಕ್ನೋ ಸೂಪರ್ ಜೈಂಟ್ಸ್ ತಂಡವು ರಿಷಭ್ ಪಂತ್ ಅವರಿಗೆ ಬರೋಬ್ಬರಿ 27 ಕೋಟಿ ರೂ ನೀಡಿದರೆ, ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ರೂ ಗೆ ಖರೀದಿ ಮಾಡಿತು.