ದಾವಣಗೆರೆ: ಇಲ್ಲಿನ ಚಾಮರಾಜಪೇಟೆಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಾ. 16ರಂದು ಅಪಹರಣಕ್ಕೆ ಒಳಗಾಗಿದ್ದ ಮಗುವಿನ ಪತ್ತೆಗೆ ಸಹಕರಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬುಧವಾರ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ದಾವಣಗೆರೆ ನಗರ ಪೊಲೀಸ್ ಉಪಾಧಿಧೀಕ್ಷಕ ನರಸಿಂಹ ತಾಮ್ರಧ್ವಜ, ಮಹಿಳಾ ಪೊಲೀಸ್ ಠಾಣೆ ನಿರೀಕ್ಷಕಿ ಶಿಲ್ಪಾ, ಎಸ್.ಐ ಪ್ರಭು ಹಾಗೂ ಇತರೆ ಸಿಬ್ಬಂದಿ ಮತ್ತು ಮಗು ಪತ್ತೆ ಹಚ್ಚಲು ನೆರವಾದ ದಾವಣಗೆರೆ ಎಸ್‌ಪಿಎಸ್ ನಗರದ ಚಂದ್ರಮ್ಮ ಅವರನ್ನು 25 ಸಾವಿರ ರೂ. ನಗದು ಬಹುಮಾನದೊಂದಿಗೆ ಗೌರವಿಸಲಾಯಿತು.
ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಚಾಮರಾಜಪೇಟೆಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಮಾ. 16ರಂದು ಅಪಹರಣಕ್ಕೆ ಒಳಗಾಗಿದ್ದ ಮಗುವಿನ ಪತ್ತೆಗೆ ಸಹಕರಿಸಿದ ನಮ್ಮ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಚಂದ್ರಮ್ಮ ಅವರಿಗೆ ಸನ್ಮಾನಿಸಲಾಗಿದೆ. ಮುಂದೆಯೂ ಅವರು ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸಿದರು.
ಮಗುವಿನ ಅಪಹರಣ ಪ್ರಕರಣಕ್ಕೆ ಸಂಬಂಧಿ ಸಿದಂತೆ ಗುಲ್ಜಾರ್ ಬಾನು, ಫಾತೀಮಾ ಬೇಗಂ ಎಂಬ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಅಂದು ಮಗು ಜನಿಸಿದ ಕೆಲವೇ ಸಮಯದಲ್ಲಿ ನಮ್ಮದೇ ಮಗು ಎಂದು ಹೇಳಿದ ಮಹಿಳೆಯೊಬ್ಬರು ಮಗುವನ್ನು ಕರೆದೊಯ್ದು ಬೆಂಗಳೂರಿನ ಮಗಳ ಮನೆಗೆ ಕೊಟ್ಟು ಬಂದಿದ್ದರು. ಮಗುವಿನ ಪತ್ತೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮಗುವಿನ ಪತ್ತೆಗಾಗಿ ಪೊಲೀಸ್ ಉಪಾಧಿಧೀಕ್ಷಕ ನರಸಿಂಹ ತಾಮ್ರಧ್ವಜ, ಮಹಿಳಾ ಪೊಲೀಸ್ ಠಾಣೆ ನಿರೀಕ್ಷಕಿ ಶಿಲ್ಪಾ, ಎಸ್‌ಐ ಪ್ರಭು ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಪ್ರತಿಯೊಂದು ಮನೆಯಲ್ಲೂ ಹುಡುಕಾಟ ಪ್ರಾರಂಭಿಸಿದಾಗ ಸಿಕ್ಕಿ ಬೀಳಬಹುದು ಎಂದು ಆರೋಪಿ ಗುಲ್ಜಾರ್ ಬಾನು ಬೆಂಗಳೂರಿನಿಂದ ಮಗುವನ್ನು ಕರೆಸಿ ಬಸ್ ನಿಲ್ದಾಣದಲ್ಲಿ ಚಂದ್ರಮ್ಮ ಎಂಬುವರಿಗೆ ಕೊಟ್ಟು ಹೋಗಿದ್ದರು ಎಂದು ತಿಳಿಸಿದರು.
ಮಗು ಕೊಟ್ಟು ಹೋದವರು ಎಷ್ಟು ಹೊತ್ತಾದರೂ ಬರಲಿಲ್ಲ ಎಂಬ ಕಾರಣಕ್ಕೆ ಚಂದ್ರಮ್ಮ ಸಮಯಪ್ರಜ್ಞೆ ತೋರಿ ನಮ್ಮ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಗುವನ್ನು ಪೋಷಕರಿಗೆ ಒಪ್ಪಿಸಲಾಯಿತು. ಮಗುವಿನ ಪತ್ತೆಗೆ ಸಹಕರಿಸಿದ ಚಂದ್ರಮ್ಮ ಅವರಿಗೆ 25 ಸಾವಿರ ರೂ. ಬಹುಮಾನ ನೀಡಲಾಗಿದೆ ಎಂದರು.
ಆಗ ತಾನೇ ಜನಿಸಿದ ಮಗುವಿಗೆ ಯಾವುದೇ ಗುರುತು ಇರುವುದೇ ಇಲ್ಲ. ಹಾಗಾಗಿ ಪತ್ತೆ ಹಚ್ಚುವುದು ಬಹಳ ಕಷ್ಟವಾಗಿತ್ತು. ನಮ್ಮ ಅಧಿಕಾರಿಗಳು, ಸಿಬ್ಬಂದಿ ಹಗಲಿರುಳು ತನಿಖೆ ನಡೆಸಿದ್ದರ ಪರಿಣಾಮ ಮಗು ಸಿಕ್ಕಿದೆ. ಹಾಸನದಲ್ಲಿ ಕೆಲ ವರ್ಷಗಳ ಹಿಂದೆ ಹಾಗೂ ಹುಬ್ಬಳ್ಳಿಯಲ್ಲೂ ಇಂಥದ್ದೇ ಪ್ರಕರಣ ನಡೆದಿತ್ತು. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ ಮಗುವನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ನಗರ ಪೊಲೀಸ್ ಉಪಾಧೀಕ್ಷಕ ನರಸಿಂಹ ತಾಮ್ರಧ್ವಜ, ಮಹಿಳಾ ಪೊಲೀಸ್ ಠಾಣೆ ನಿರೀಕ್ಷಕಿ ಶಿಲ್ಪಾ, ಎಸ್.ಐ. ಪ್ರಭು ಇತರರು ಇದ್ದರು.